ETV Bharat / bharat

ರಾಜ್‌ಕೋಟ್ ಅಗ್ನಿ ದುರಂತ: ಮೃತರ ಸಂಖ್ಯೆ 30ಕ್ಕೇರಿಕೆ, ಘಟನಾ ಸ್ಥಳಕ್ಕೆ ಗುಜರಾತ್ ಸಿಎಂ ಭೇಟಿ - Rajkot Fire Accident

author img

By ETV Bharat Karnataka Team

Published : May 26, 2024, 10:57 AM IST

ಗುಜರಾತ್​ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳಕ್ಕೆ ಇಂದು ಸಿಎಂ ಭೂಪೇಂದ್ರ ಪಟೇಲ್ ಭೇಟಿ ನೀಡಿದರು.

RAJKOT TRP GAME ZONE FIRE INCIDENT  Death toll rises  Gujarat cm visit incident spot
ರಾಜ್‌ಕೋಟ್ ಟಿಆರ್‌ಪಿ ಗೇಮ್ ಝೋನ್​ಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭೇಟಿ (ETV Bharat)

ರಾಜ್‌ಕೋಟ್‌(ಗುಜರಾತ್​): ರಾಜ್‌ಕೋಟ್‌ನ ನಾನಾ ಮೌವಾ ರಸ್ತೆಯಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ತಲುಪಿದೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ದುರಂತದ ತನಿಖೆಗಾಗಿ ಸುಭಾಷ್ ತ್ರಿವೇದಿ ಅಧ್ಯಕ್ಷತೆಯಲ್ಲಿ ಎಸ್‌ಐಟಿ ರಚಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ವಿವರ ಪಡೆದರು.

ಗೇಮಿಂಗ್ ಝೋನ್ ಪ್ರದೇಶಕ್ಕೆ ಗೃಹ ಸಚಿವ ಹರ್ಷ್ ಸಾಂಘ್ವಿ, ಪೊಲೀಸ್ ಆಯುಕ್ತ ರಾಜು ಭಾರ್ಗವ, ಮಹಾನಗರ ಪಾಲಿಕೆ ಆಯುಕ್ತ ಆನಂದ್ ಪಟೇಲ್, ಉಪ ಮಹಾನಗರ ಪಾಲಿಕೆ ಆಯುಕ್ತ ಸ್ವಪ್ನಿಲ್ ಖರೆ, ಮುಖ್ಯ ಅಗ್ನಿಶಾಮಕ ಅಧಿಕಾರಿ ಇಲೇಶ್ ಖೇರ್ ಭೇಟಿ ನೀಡಿದರು.

RAJKOT TRP GAME ZONE FIRE INCIDENT  Death toll rises  Gujarat cm visit incident spot
ಘಟನಾ ಸ್ಥಳಕ್ಕೆ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಭೇಟಿ (ETV Bharat)

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಾಂಘ್ವಿ, "ಅಗ್ನಿ ಅವಘಡದಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ. ತನಿಖೆಗೆ ಎಸ್‌ಐಟಿ ರಚಿಸಲಾಗಿದೆ'' ಎಂದು ತಿಳಿಸಿದರು.

ಗೇಮ್ ಝೋನ್ ಮಾಲೀಕ ಸೇರಿ ಹಲವರ ​​ಬಂಧನ: ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಗೇಮ್ ಝೋನ್ ಮಾಲೀಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ಇತರ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ: ಈ ಕುರಿತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಇದುವರೆಗೆ ಕೈಗೊಂಡಿರುವ ಎಲ್ಲಾ ಪ್ರಯತ್ನಗಳ ವಿವರವನ್ನು ಸಿಎಂ ಪ್ರಧಾನಿಗೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದೆಹಲಿಯ ಬೇಬಿಕೇರ್‌ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 6 ನವಜಾತ ಶಿಶುಗಳ ದಾರುಣ ಸಾವು - Fire In Baby Care Hospital

ETV Bharat Logo

Copyright © 2024 Ushodaya Enterprises Pvt. Ltd., All Rights Reserved.