ETV Bharat / bharat

'ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದ್ದರು': ಮನಮೋಹನ್‌ ಸಿಂಗ್ ಹೊಗಳಿದ ಮೋದಿ

author img

By ANI

Published : Feb 8, 2024, 4:41 PM IST

ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ವಿದಾಯ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಂಸತ್​ ಹಾಗು ದೇಶಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.

ಮಾಜಿ ಆರ್ಥಿಕ ತಜ್ಞನ ಬಗ್ಗೆ ಮೋದಿ ಬಣ್ಣನೆ
ಮಾಜಿ ಆರ್ಥಿಕ ತಜ್ಞನ ಬಗ್ಗೆ ಮೋದಿ ಬಣ್ಣನೆ

ನವದೆಹಲಿ: "ಸದನ ಮತ್ತು ದೇಶಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಕೊಡುಗೆ ಅಪಾರ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಆಗಸ್ಟ್ 2023ರಲ್ಲಿ ನಡೆದ ಅಧಿವೇಶನದಲ್ಲಿ ಮತ ಚಲಾಯಿಸುವ ಸಂದರ್ಭದಲ್ಲಿ ಆಡಳಿತ ಪಕ್ಷ ಎನ್‌ಡಿಎ ಗೆಲ್ಲುತ್ತದೆ ಎಂದು ಎಲ್ಲರಿಗೂ ತಿಳಿದಿತ್ತು. ಆದರೂ, ಡಾ.ಮನಮೋಹನ್ ಸಿಂಗ್ ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಮತ ಚಲಾಯಿಸಿದ್ದರು. ಸಂಸತ್ ಸದಸ್ಯರೊಬ್ಬರು ತಮ್ಮ ಕರ್ತವ್ಯಗಳ ಬಗ್ಗೆ ಎಷ್ಟೊಂದು ಜಾಗೃತರಾಗಿದ್ದಾರೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ" ಎಂದು ಕೊಂಡಾಡಿದರು.

ಮನಮೋಹನ್ ಸಿಂಗ್ ಸೇರಿದಂತೆ ಈ ವರ್ಷ ಸಂಸತ್ತಿನಿಂದ ನಿವೃತ್ತರಾಗಲಿರುವ 68 ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ವಿದಾಯ ಭಾಷಣ ಮಾಡಿದರು.

"ಸುದೀರ್ಘ ಕಾಲದಿಂದ ಮನಮೋಹನ್ ಸಿಂಗ್ ಅವರು ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ್ದು ಸ್ಮರಣೀಯ. ಅವರಿಗೆ ನಾನೆಂದಿಗೂ ವಿದಾಯ ಹೇಳಲಾರೆ. ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆದಾಗ ಅವರು ನೆನಪಾಗುತ್ತಲೇ ಇರುತ್ತಾರೆ" ಎಂದರು.

"ಅವರು ಯಾರಿಗೆ ಶಕ್ತಿ ನೀಡಲು ಬಂದರು, ಯಾರನ್ನು ಬೆಂಬಲಿಸುತ್ತಿದ್ದರು ಎನ್ನುವುದು ಮುಖ್ಯವಲ್ಲ. ಈ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತಿರುವವರಲ್ಲಿ ಅವರೂ ಒಬ್ಬರು. ಸುದೀರ್ಘ ಕಾಲ ಬದುಕಲಿ. ಭವಿಷ್ಯದಲ್ಲಿ ನಮಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ" ಎಂದು ಮನವಿ ಮಾಡಿದರು.

"ನಾಯಕರಾಗಿ ಹಾಗೂ ಪ್ರತಿಪಕ್ಷದಲ್ಲಿದ್ದು ಸಿಂಗ್ ಅವರ ಕೊಡುಗೆ ಅಪಾರ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉಳಿಯುವುದು ಅಲ್ಪಕಾಲ ಮಾತ್ರ. ಆದರೆ, ಅವರು ಈ ಸದನ ಮತ್ತು ದೇಶಕ್ಕೆ ಸುದೀರ್ಘಾವಧಿಯ ಮಾರ್ಗದರ್ಶನ ಮಾಡಿದ ರೀತಿ ನಿಜಕ್ಕೂ ಮೆಚ್ಚುವಂಥದ್ದು" ಎಂದು ಪ್ರಶಂಸಿಸಿದರು.

ನಿರ್ಗಮಿತ ಸದಸ್ಯರಿಗೆ ಸಂಜೆ 6.30ಕ್ಕೆ ಮೌಲಾನಾ ಆಜಾದ್ ರಸ್ತೆಯಲ್ಲಿರುವ ಸಭಾಪತಿ ಧನಕರ್ ನಿವಾಸದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಕೇಂದ್ರದ 'ಶ್ವೇತಪತ್ರ'ಕ್ಕೆ ಪ್ರತಿಯಾಗಿ ಕಪ್ಪುಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.