ETV Bharat / bharat

ಒಂದು ರಾಷ್ಟ್ರ, ಒಂದು ಚುನಾವಣೆ : ಕೋವಿಂದ್​ ಸಮಿತಿ ವಿಸರ್ಜನೆಗೆ ಖರ್ಗೆ ಆಗ್ರಹ

author img

By ETV Bharat Karnataka Team

Published : Jan 19, 2024, 10:52 PM IST

Updated : Jan 19, 2024, 11:40 PM IST

ಒಂದು ರಾಷ್ಟ್ರ, ಒಂದು ಚುನಾವಣೆ ಸಂವಿಧಾನದ ಮೂಲಕ್ಕೆ ಧಕ್ಕೆ ಆಗುತ್ತದೆ ಎಂದು ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ.

ಖರ್ಗೆ
ಖರ್ಗೆ

ನವದೆಹಲಿ: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಪರಿಕಲ್ಪನೆಯ 'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಕಾಂಗ್ರೆಸ್​ ಬಲವಾದ ವಿರೋಧ ವ್ಯಕ್ತಪಡಿಸಿದೆ. 'ಒಂದು ರಾಷ್ಟ್ರ, ಒಂದು ಚುನಾವಣೆ'ಯು ಇದು ಫೆಡರಲಿಸಂ ಮತ್ತು ಸಂವಿಧಾನದ ಮೂಲ ರಚನೆಯ ಭರವಸೆಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಕೈಬಿಟ್ಟು, ಈ ಕುರಿತು ರಚಿಸಲಾಗಿರುವ ಉನ್ನತಾಧಿಕಾರ ಸಮಿತಿ ವಿಸರ್ಜಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

'ಒಂದು ರಾಷ್ಟ್ರ, ಒಂದು ಚುನಾವಣೆ' ಪರಿಕಲ್ಪನೆ ಪರಿಶೀಲಿಸುವ ಕುರಿತು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ವಿಷಯದ ಬಗ್ಗೆ ಅಭಿಪ್ರಾಯಗಳನ್ನು ಕೇಳಿ ರಾಜಕೀಯ ಪಕ್ಷಗಳಿಗೆ ಸಮಿತಿ ಪತ್ರ ಬರೆದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸಮಿತಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಉಲ್ಲಂಘಿಸಲು ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ವ್ಯಕ್ತಿತ್ವ ಮತ್ತು ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ಕೇಂದ್ರ ಸರ್ಕಾರವು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಖರ್ಗೆ ಮನವಿ ಮಾಡಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಯನ್ನು ಬಲವಾಗಿ ವಿರೋಧಿಸುತ್ತದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ದೃಢವಾದ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಇದರ ಸಂಪೂರ್ಣ ಆಲೋಚನೆ ಕೈಬಿಡುವುದು ಮತ್ತು ಉನ್ನತಾಧಿಕಾರ ಸಮಿತಿ ವಿಸರ್ಜಿಸುವುದು ಅಗತ್ಯ ಎಂದು ಖರ್ಗೆ ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರ ಅವರಿಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ದೇಶದ ಜನತೆಯ ಪರವಾಗಿ ನಾನು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಪ್ರಜಾಪ್ರಭುತ್ವ ಇರುವ ಈ ದೇಶದಲ್ಲಿ ಸಂವಿಧಾನ ಮತ್ತು ಸಂಸದೀಯ ಪದ್ಧತಿಯನ್ನು ಕೇಂದ್ರ ಸರ್ಕಾರವು ಬುಡಮೇಲು ಮಾಡಲು ನಿಮ್ಮ ವ್ಯಕ್ತಿತ್ವ ಮತ್ತು ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಏಕಕಾಲಿಕ ಚುನಾವಣೆಯಂತಹ ಪ್ರಜಾಪ್ರಭುತ್ವ ವಿರೋಧಿ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಬದಲು, ಜನಾದೇಶವನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಂಸತ್ತು ಮತ್ತು ಚುನಾವಣಾ ಆಯೋಗದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

Last Updated :Jan 19, 2024, 11:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.