ETV Bharat / bharat

ವಿಶ್ವಾಸ ಗೆದ್ದ ಕೇಜ್ರಿವಾಲ್​; 2029ಕ್ಕೆ ಬಿಜೆಪಿ ಮುಕ್ತ ದೇಶ ಕಟ್ಟುವ ಶಪಥ ಮಾಡಿದ ದೆಹಲಿ ಸಿಎಂ

author img

By ETV Bharat Karnataka Team

Published : Feb 17, 2024, 2:04 PM IST

ದೆಹಲಿ ವಿಧಾನಸಭೆಯಲ್ಲಿ ಶನಿವಾರ ನಡೆದ ವಿಶ್ವಾಸ ಮತಯಾಚನೆಯಲ್ಲಿ 54 -1 ಮತಗಳಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ಸರ್ಕಾರ ಗೆಲುವು ಸಾಧಿಸಿತು.

ವಿಶ್ವಾಸ ಗೆದ್ದ ಕೇಜ್ರಿವಾಲ್
ವಿಶ್ವಾಸ ಗೆದ್ದ ಕೇಜ್ರಿವಾಲ್

ನವದೆಹಲಿ: ಸರ್ಕಾರಕ್ಕೆ ಬಹುತವಿದ್ದರೂ ಆಪರೇಷನ್​ ಕಮಲ ಆರೋಪದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ನಿರೀಕ್ಷಿತವಾಗಿ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದರು. ಜೊತೆಗೆ "2029ರಲ್ಲಿ ಬಿಜೆಪಿ ಮುಕ್ತ ದೇಶವನ್ನು ಎಎಪಿ ಕಟ್ಟಲಿದೆ" ಎಂದು ದೆಹಲಿ ಸಿಎಂ ಗುಡುಗಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಬಜೆಟ್​ ಅಧಿವೇಶನದ ಮೊದಲ ದಿನವೇ ಸಿಎಂ ಕೇಜ್ರಿವಾಲ್​ ಅವರು ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದರು. ಇಂದು ಅದರ ಮೇಲೆ ಚರ್ಚೆಗಳು ನಡೆದು, ಬಳಿಕ ಧ್ವನಿ ಮತದ ಮೂಲಕ ವಿಶ್ವಾಸ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ವೇಳೆ ಸದನದಲ್ಲಿದ್ದ 62 ಎಎಪಿ ಶಾಸಕರ ಪೈಕಿ 54 ಮಂದಿ ಸರ್ಕಾರದ ಪರ ಮತ ನೀಡಿದರೆ, ವಿಪಕ್ಷ ನಾಯಕರ ಒಂದು ಮತ ವಿರುದ್ಧವಾಗಿ ಬಿದ್ದಿತು. ಅಂದರೆ 54-1 ಅಂತರದಲ್ಲಿ ಸರ್ಕಾರ ಬಹುಮತ ಸಾಬೀತು ಮಾಡಿತು.

ವಿಶ್ವಾಸಮತ ಯಾಚನೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಆಪ್​ ಸಂಚಾಲಕರೂ ಆಗಿರುವ ದೆಹಲಿ ಸಿಎಂ, ಆಪ್​ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಹೇಗಾದರೂ ಮಾಡಿ ನಮ್ಮನ್ನು ಮಣಿಸಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ವಿಧಗಳಿಂದ ದಾಳಿ ನಡೆಸುತ್ತಿದೆ. ಈ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕಮಲ ಪಕ್ಷ ಗೆದ್ದರೂ, 2029 ರ ಚುನಾವಣೆಯಲ್ಲಿ ಎಎಪಿ ದೇಶವನ್ನು ಬಿಜೆಪಿಯಿಂದ ಮುಕ್ತಗೊಳಿಸಲಿದೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದರು.

ದಿಲ್ಲಿಯಲ್ಲಿ ನಮ್ಮ ಸರ್ಕಾರವಿದ್ದರೂ, ಸೇವಾ ಇಲಾಖೆ, ಆಡಳಿತ ಸಿಬ್ಬಂದಿಯ ಮೇಲೆ ನಿಯಂತ್ರಣ ಸಾಧಿಸಿ, ಸರ್ಕಾರದ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ ಕೇಜ್ರಿವಾಲ್​, ಸದನದಲ್ಲಿ ತಮಗೆ ಬಹುಮತವಿದೆ. ಆದರೆ, ಬಿಜೆಪಿ ಎಎಪಿ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿರುವ ಕಾರಣ ಈ ವಿಶ್ವಾಸ ಮತಯಾಚನೆ ಮಾಡಲಾಗಿದೆ. ಇದರರ್ಥ ಸರ್ಕಾರವನ್ನು ನಿಮ್ಮಿಂದ ಕೆಡವಲು ಸಾಧ್ಯವಿಲ್ಲ ಎಂಬುದನ್ನು ತೋರಿಸುವುದಾಗಿದೆ ಎಂದು ಹೇಳಿದರು.

ಕೋರ್ಟ್​ ಮುಂದೆ ವರ್ಚುಯಲ್​ ಹಾಜರಿ: ಇದಕ್ಕೂ ಮೊದಲು, ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಹಲವು ಬಾರಿ ಸಮನ್ಸ್‌ಗಳನ್ನು ತಪ್ಪಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯದ ದೂರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರಾದರು. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆ ಹಾಗೂ ಬಜೆಟ್ ಅಧಿವೇಶನದ ಕಾರಣ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್​ಗೆ ತಿಳಿಸಿ, ಇಂದಿನ ವಿಚಾರಣೆಯಿಂದ ವಿನಾಯಿತಿ ಪಡೆದರು.

ಇದನ್ನೂ ಓದಿ: ಆಪರೇಷನ್​ ಕಮಲ ಆರೋಪ: 2ನೇ ಸಲ ವಿಶ್ವಾಸಮತ ಯಾಚಿಸಿದ ದೆಹಲಿ ಸಿಎಂ ಕೇಜ್ರಿವಾಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.