ETV Bharat / bharat

ಬಂಧನದ ಬಳಿಕ 4.5 ಕೆಜಿ ತಗ್ಗಿದರೇ ಕೇಜ್ರಿವಾಲ್?; ದೆಹಲಿ ಸಿಎಂ ಆರೋಗ್ಯವನ್ನು ಬಿಜೆಪಿ ಅಪಾಯಕ್ಕೆ ತಳ್ಳಿದೆ ಎಂದ ಆಪ್​ - Kejriwal Health Issue

author img

By PTI

Published : Apr 3, 2024, 8:22 PM IST

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೊಳಗಾದಾಗಿನಿಂದ ಅವರ ದೇಹದ ತೂಕವು 69.5ರಿಂದ 65 ಕೆಜಿಗೆ ಇಳಿದಿದೆ ಎಂದು ಆಮ್​ ಆದ್ಮಿ ಪಕ್ಷ ಹೇಳಿದೆ.

Kejriwal lost 4.5 kg since arrest
ಬಂಧನದ ಬಳಿಕ 4.5 ಕೆಜಿ ತಗ್ಗಿದ ಕೇಜ್ರಿವಾಲ್?

ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿರೋದು ಗೊತ್ತಿರುವ ವಿಚಾರ. ಇದೀಗ ಬಂಧನಕ್ಕೊಳಗಾದಾಗಿನಿಂದ ಕೇಜ್ರಿವಾಲ್​ ವೇಗವಾಗಿ ತಮ್ಮ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂದು ಆಮ್​ ಆದ್ಮಿ ಪಕ್ಷದ ಹಿರಿಯ ನಾಯಕಿ ಅತಿಶಿ ಆರೋಪಿಸಿದ್ದಾರೆ. ಅಲ್ಲದೇ, ಸಿಎಂ ಅವರನ್ನು ಜೈಲಿನಲ್ಲಿರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದೂ ದೂರಿದ್ದಾರೆ.

ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಪ್​ ರಾಷ್ಟ್ರಿಯ ಸಂಚಾಲಕರೂ ಆದ ಕ್ರೇಜಿವಾಲ್ ಅವರನ್ನು ಬಂಧಿಸಿದ್ದಾರೆ. ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ ಇದ್ದಾರೆ. ಇದರ ನಡುವೆ ಪಕ್ಷವು ಅವರ ಆರೋಗ್ಯದ ಬಗ್ಗೆ ಕಳವಳ ಹೊರಹಾಕಿದೆ. ಇದೇ ವಿಷಯವಾಗಿ ಕಾನೂನು ಸಹಾಯವನ್ನು ಪಡೆಯುವ ಮಾತುಗಳನ್ನಾಡಿದೆ. ಮತ್ತೊಂದೆಡೆ, ಈ ಆರೋಪವನ್ನು ತಿಹಾರ್ ಜೈಲಿನ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಸಿಎಂ ಅವರ ನ್ಯಾಯಾಂಗ ಬಂಧನ ಪ್ರಾರಂಭವಾದಾಗಿನಿಂದ ತೂಕ ಸ್ಥಿರವಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

''ಏಪ್ರಿಲ್ 1ರಂದು ಜೈಲಿಗೆ ಆಗಮಿಸಿದ ನಂತರ ಕೇಜ್ರಿವಾಲ್ ಅವರನ್ನು ಇಬ್ಬರು ವೈದ್ಯರು ಪರೀಕ್ಷಿಸಿದ್ದಾರೆ. ಅವರ ಎಲ್ಲ ಜೀವಾಣುಗಳು ಸಾಮಾನ್ಯವಾಗಿದೆ. ಅವರು ಜೈಲಿಗೆ ಬಂದ ನಂತರ ಮತ್ತು ಇಲ್ಲಿಯವರೆಗೆ ಅವರ ತೂಕವು 65 ಕೆಜಿಯಲ್ಲಿ ಸ್ಥಿರವಾಗಿದೆ. ನ್ಯಾಯಾಲಯದ ಆದೇಶದಂತೆ ಮನೆಯಲ್ಲಿ ಬೇಯಿಸಿದ ಆಹಾರ ನೀಡಲಾಗುತ್ತಿದೆ. ಅವರ ಪ್ರಮುಖ ಅಂಕಿ-ಅಂಶಗಳು ಸ್ಥಿರವಾಗಿವೆ ಎಂದು ಜೈಲಾಧಿಕಾರಿಗಳು ಹೇಳಿಕೆ ಹೊರಡಿಸಿದ್ದಾರೆ.

ಆಪ್​ ಆರೋಪವೇನು?: ಕೇಜ್ರಿವಾಲ್​ ಆರೋಗ್ಯದ ಆತಂಕ ವ್ಯಕ್ತಪಡಿಸಿರುವ ಸಚಿವೆ ಅತಿಶಿ, ''ಅರವಿಂದ್ ಕೇಜ್ರಿವಾಲ್ ತೀವ್ರ ಮಧುಮೇಹಿ. ತಮ್ಮ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಅವರು ದಿನದ 24 ಗಂಟೆಗಳ ಕಾಲ ಸೇವೆ ನಿರತರಾಗಿದ್ದರು. ಬಂಧನದ ನಂತರ ಕೇಜ್ರಿವಾಲ್ ತೂಕ 4.5 ಕೆಜಿ ಕಡಿಮೆಯಾಗಿದೆ. ಇದು ತುಂಬಾ ಆತಂಕಕಾರಿ. ಅವರನ್ನು ಜೈಲಿಗೆ ಹಾಕುವ ಮೂಲಕ ಬಿಜೆಪಿಯು ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಇಡೀ ದೇಶವಲ್ಲ, ದೇವರು ಕೂಡ ಕ್ಷಮಿಸುವುದಿಲ್ಲ'' ಎಂದು ಅವರು 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಾದ ನಂತರ ಪತ್ರಿಕಾಗೋಷ್ಠಿಯನ್ನೂ ನಡೆಸಿರುವ ಅತಿಶಿ, ''ಇಂದು ದೆಹಲಿ ಹೈಕೋರ್ಟ್ ಕೇಜ್ರಿವಾಲ್​ ಬಂಧನವನ್ನು ಪ್ರಶ್ನಿಸುವ ಸಲ್ಲಿಸಿರುವ ಮನವಿಯನ್ನು ಆಲಿಸಿದೆ. ನ್ಯಾಯಾಲಯವು ಅರ್ಜಿ ಬಗ್ಗೆ ನಿರ್ಧರಿಸಿದ ನಂತರ, ನಾವು ಸಿಎಂ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕಾನೂನು ಸಹಾಯವನ್ನು ಪಡೆಯುತ್ತೇವೆ'' ಎಂದು ತಿಳಿಸಿದರು. ಇದೇ ವೇಳೆ, ''ಕೇಜ್ರಿವಾಲ್ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ'' ಎಂದು ಮತ್ತೆ ಆರೋಪಿಸಿದರು.

ಮುಂದುವರೆದು, ''ಇಡೀ ದೇಶವೇ ನೋಡುತ್ತಿದೆ. ತೀವ್ರತರವಾದ ಮಧುಮೇಹ ರೋಗಿಗಳಿಗೆ ಅವರ ಸಕ್ಕರೆಯ ಮಟ್ಟವು 50 ಎಂಜಿ/ಡಿಎಲ್​ಗಿಂತ ಕಡಿಮೆಯಾದರೆ, ಅದು ಅತ್ಯಂತ ಕಳವಳಕಾರಿ ಸಂಗತಿ. ಕೇಜ್ರಿವಾಲ್ ಇಡಿ ಕಸ್ಟಡಿಯಲ್ಲಿದ್ದಾಗ ಅವರ ಸಕ್ಕರೆ ಮಟ್ಟವು ಮೂರು ಬಾರಿ ಕುಸಿದಿತ್ತು. ಒಂದು ಬಾರಿ ಅದು 46 ಎಂಜಿ/ಡಿಎಲ್​ಗೆ ಇಳಿದಿತ್ತು. ಕಳೆದ 12 ದಿನಗಳಲ್ಲಿ ಅವರ ತೂಕವು 4.5 ಕೆಜಿಯಷ್ಟು ಕಡಿಮೆಯಾಗಿದೆ. ಇದು ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ'' ಎಂದರು.

ಆಪ್​ ಶಾಸಕ ದಿಲೀಪ್ ಪಾಂಡೆ ಕೂಡ ಮಾತನಾಡಿ, ''ಕೇಜ್ರಿವಾಲ್​ ತೂಕ 69.5ರಿಂದ 65 ಕೆಜಿಗೆ ಇಳಿದಿದೆ. ಅವರು ತೀವ್ರ ಮಧುಮೇಹಿ. ಮಧುಮೇಹವು ಕೇವಲ ಒಂದು ರೋಗವಲ್ಲ. ಇದು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. 12 ದಿನಗಳಲ್ಲಿ ಅವರ ತೂಕ ಇಳಿಕೆಯು ದಾಖಲೆಯಲ್ಲಿದೆ. ಅವರ ಆರೋಗ್ಯದ ಬಗ್ಗೆ ಯಾವುದೇ ಬೇಜವಾಬ್ದಾರಿ ವರ್ತನೆ ತೋರಬಾರದು'' ಎಂದು ನಾವು ಬಯಸುತ್ತೇವೆ ಎಂದು ತಿಳಿಸಿದರು.

ಕೇಜ್ರಿವಾಲ್ ಆರೋಗ್ಯದ ಕುರಿತು ಆರೋಪಗಳನ್ನು ಜೈಲಾಧಿಕಾರಿಗಳು ತಳ್ಳಿ ಹಾಕಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಕೇಜ್ರಿವಾಲ್​​ ಒಂದೆರಡು ದಿನಗಳಿಂದ ತಿಹಾರ್‌ನಲ್ಲಿದ್ದಾರೆ. ನಾವು ಅವರನ್ನು ಇಡಿ ಬಂಧಿಸಿದ ಸಮಯದ ಬಗ್ಗೆ ಮಾತನಾಡುತ್ತಿದ್ದೇವೆ. ಇಡಿ ಕಸ್ಟಡಿಯಲ್ಲಿದ್ದಾಗ ಅವರ ಸಕ್ಕರೆ ಮಟ್ಟವು ಕುಸಿದಿತ್ತು. ಇದು ಆರೋಗ್ಯಕ್ಕೆ ತೀವ್ರ ಅಪಾಯ'' ಎಂದು ಹೇಳಿದರು.

ಇದನ್ನೂ ಓದಿ: ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಪ್ರತ್ಯೇಕ ಕೊಠಡಿ: ಸಕ್ಕರೆ ಕಾಯಿಲೆ ಔಷಧಿ ಇಟ್ಟುಕೊಳ್ಳಲು ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.