ETV Bharat / bharat

ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಪ್ರತ್ಯೇಕ ಕೊಠಡಿ: ಸಕ್ಕರೆ ಕಾಯಿಲೆ ಔಷಧಿ ಇಟ್ಟುಕೊಳ್ಳಲು ಅವಕಾಶ - Kejriwals Tihar Routine

author img

By ETV Bharat Karnataka Team

Published : Apr 2, 2024, 12:57 PM IST

ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು, ತಿಹಾರ್​ ಬಂಧೀಖಾನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಬಂಧಿಯಾಗಿದ್ದಾರೆ.

ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಪ್ರತ್ಯೇಕ ಕೊಠಡಿ
ತಿಹಾರ್​ ಜೈಲಿನಲ್ಲಿ ಕೇಜ್ರಿವಾಲ್​ಗೆ ಪ್ರತ್ಯೇಕ ಕೊಠಡಿ

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ಅರವಿಂದ್​ ಕೇಜ್ರಿವಾಲ್​ ಅವರನ್ನು ತಿಹಾರ್​ ಜೈಲಿನಲ್ಲಿ ಇರಿಸಲಾಗಿದೆ. ಅವರ ನಿತ್ಯ ಚಟುವಟಿಕೆಗಳು ಸಾಮಾನ್ಯ ಕೈದಿಯಂತೆ ಇವೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸಕ್ಕರೆಮಟ್ಟ ಗುರುತಿಸುವ ಸೆನ್ಸಾರ್​, ಗ್ಲುಕೋಮೀಟರ್, ಗ್ಲೂಕೋಸ್ ಮತ್ತು ಟೋಪಿಗಳನ್ನು ಕೊಡಲಾಗಿದೆ. ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ 'ಕಿಂಗ್​ಪಿನ್​' ಎಂದು ಆರೋಪಿಸಿರುವ ಇಡಿ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ. ಇದರಿಂದಾಗಿ ಹೆಚ್ಚಿನ ವಿಚಾರಣೆಗೆ ಕೋರಿದ್ದು, ಏಪ್ರಿಲ್​ 15ರ ವರೆಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ.

ಏಪ್ರಿಲ್​ 1 ರಂದು ತಿಹಾರ್​ ಜೈಲಿಗೆ ಕೇಜ್ರಿವಾಲ್​ರನ್ನು ವರ್ಗಾಯಿಸಲಾಗಿದ್ದು, ಅಂದು ಅವರು ಬೆಳಗ್ಗೆಯಿಂದ ಲವಲವಿಕೆಯಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಜೈಲಿನ ನಿಯಮಗಳ ಪ್ರಕಾರ, ಬೆಳಗ್ಗೆ ಚಹಾ ಮತ್ತು ಉಪಹಾರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಭದ್ರತೆ ಇರುವ ಜೈಲು ಸಂಖ್ಯೆ 2 ರಲ್ಲಿ ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಮೂರು ಪುಸ್ತಕಗಳನ್ನು ಇಡಲು ಚಿಕ್ಕ ಟೇಬಲ್ ಮತ್ತು ಕುರ್ಚಿಯನ್ನು ಒದಗಿಸಲಾಗಿದೆ. ಮನೆ ತಿಂಡಿ ಮತ್ತು ಸೂಚಿಸಲಾದ ಔಷಧಿಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.

ಕೇಜ್ರಿವಾಲ್ ಅವರು ಜೈಲಿಗೆ ತಾವೇ ತಂದುಕೊಂಡಿದ್ದ ಹಾಸಿಗೆಯಲ್ಲಿ ಮಲಗಿದ್ದರು. ಜೈಲು ಪ್ರಾಧಿಕಾರವು ನೀಡಿದ ಹಾಸಿಗೆಯನ್ನು ಬಳಸಿಲ್ಲ. ಕೋಣೆಯು ಚಿಕ್ಕದಾಗಿದ್ದು, ಸಮಸ್ಯೆಯಾದ ಬಗ್ಗೆ ದೂರು ನೀಡಿಲ್ಲ ಎಂದು ತಿಹಾರ್ ಜೈಲಿನ ಮೂಲಗಳು ಮಂಗಳವಾರ ತಿಳಿಸಿವೆ. ಕೋಣೆಯಲ್ಲಿ ಚಿಕ್ಕ ಮೇಜಿನ ಮೇಲೆ ಸಕ್ಕರೆ ಮಟ್ಟ ಸೂಚಕ ಯಂತ್ರ, ಗ್ಲುಕೋಮೀಟರ್, ಇಸಾಬ್​ಗೋಲ್, ಗ್ಲೂಕೋಸ್ ಮತ್ತು ಟೋಪಿಗಳನ್ನು ಇಟ್ಟುಕೊಂಡಿದ್ದಾರೆ. ಸಕ್ಕರೆ ಕಾಯಿಲೆ ಬಾಧಿತರಾಗಿರುವ ಕೇಜ್ರಿವಾಲ್ ಅವುಗಳನ್ನು ಅಗತ್ಯ ಬಳಸಲು ಕೋರ್ಟ್​ ಅವಕಾಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮಂಗಳವಾರ ಬೇಗನೆ ಎದ್ದರು. ಬೆಳಗ್ಗೆ 6:40 ಕ್ಕೆ ಉಪಹಾರ ಮತ್ತು ಚಹಾವನ್ನು ಸೇವಿಸಿದರು. ನಂತರ ಅವರು ಮಧ್ಯಾಹ್ನ 12 ಗಂಟೆಗೆ ತಮ್ಮ ಸೆಲ್‌ಗೆ ಹಿಂತಿರುಗಿದರು. ಮಧ್ಯಾಹ್ನ 3 ಗಂಟೆಯವರೆಗೂ ಅಲ್ಲಿಯೇ ಇರಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.

ಕೇಜ್ರಿವಾಲ್​ ವಿರುದ್ಧ ಗಂಭೀರ ಆರೋಪ: ಅಬಕಾರಿ ಪ್ರಕರಣದಲ್ಲಿ ಕೇಜ್ರಿವಾಲ್ ಮೇಲೆ ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ. ಹಗರಣದಲ್ಲಿ ದೆಹಲಿ ಸಿಎಂರನ್ನು ಕಿಂಗ್‌ಪಿನ್ ಎಂದು ಗುರುತಿಸಲಾಗಿದೆ. ಎಎಪಿ ನಾಯಕ ಪ್ರಕರಣದಲ್ಲಿ ತಪ್ಪಿಸಿಕೊಳ್ಳುವ ಉತ್ತರ ನೀಡುತ್ತಿದ್ದಾರೆ. ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಹಿಂದೆಯೂ ಅರವಿಂದ್​ ಕೇಜ್ರಿವಾಲ್​ ತಿಹಾರ್​ ಜೈಲು ಶಿಕ್ಷೆ ಅನುಭವಿಸಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ 10,000 ರೂಪಾಯಿಗಳ ಜಾಮೀನು ಮೊತ್ತವನ್ನು ನೀಡಲು ನಿರಾಕರಿಸಿದ್ದರಿಂದ 2014 ರಲ್ಲಿ ಎಎಪಿ ನಾಯಕನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಸದ್ಯ ಜೈಲಿನಲ್ಲಿ ಎಎಪಿಯ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್​ರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಕೂಡ ಇದೇ ತಿಹಾರ್ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್​ಗೆ ಮತ್ತೆ ಸಂಕಷ್ಟ; ಏಪ್ರಿಲ್​ 15ರ ವರೆಗೆ ನ್ಯಾಯಾಂಗ ಬಂಧನದಲ್ಲಿ ದೆಹಲಿ ಸಿಎಂ - Liquor Policy Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.