ETV Bharat / bharat

ಭಾರತ, ಯುಎಇ ರಾಜತಾಂತ್ರಿಕ ಸಭೆ: ವೀಸಾ, ವಲಸೆ, ಪೌರತ್ವ ಸೇರಿದಂತೆ ವಿವಿಧ ವಿಷಯಗಳ ಚರ್ಚೆ - India UAE Meeting

author img

By ETV Bharat Karnataka Team

Published : May 15, 2024, 7:10 PM IST

ದ್ವಿಪಕ್ಷೀಯ ವ್ಯಾಪಾರ ಮತ್ತು ರಾಜತಾಂತ್ರಿಕ ವಿಷಯಗಳ ಬಗ್ಗೆ ಭಾರತ ಮತ್ತು ಯುಎಇಗಳ ಮಧ್ಯೆ ಭಾನುವಾರ ಉನ್ನತ ಮಟ್ಟದ ಸಭೆ ನಡೆಯಿತು.

ಭಾರತ, ಯುಎಇ ರಾಜತಾಂತ್ರಿಕ ಸಭೆ
ಭಾರತ, ಯುಎಇ ರಾಜತಾಂತ್ರಿಕ ಸಭೆ (ians)

ನವದೆಹಲಿ: ಕಾರ್ಮಿಕರು, ವೀಸಾ, ವಲಸೆ, ಪೌರತ್ವ ಮತ್ತು ಹಸ್ತಾಂತರ ಸೇರಿದಂತೆ ರಾಜತಾಂತ್ರಿಕ ವಿಷಯಗಳಲ್ಲಿ ಸಮನ್ವಯ ಮತ್ತು ಸಹಕಾರವನ್ನು ಬಲಪಡಿಸುವ ಕಾರ್ಯವಿಧಾನಗಳ ಬಗ್ಗೆ ಭಾರತ ಮತ್ತು ಯುಎಇ ವ್ಯಾಪಕ ಚರ್ಚೆ ನಡೆಸಿವೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ. ಮಂಗಳವಾರ ನವದೆಹಲಿಯಲ್ಲಿ ನಡೆದ ಕಾನ್ಸುಲರ್ ವ್ಯವಹಾರಗಳ ಜಂಟಿ ಸಮಿತಿಯ (ಜೆಸಿಸಿಎ) 5 ನೇ ಸಭೆಯಲ್ಲಿ ಎರಡೂ ದೇಶಗಳು ಈ ಬಗ್ಗೆ ಚರ್ಚೆ ನಡೆಸಿವೆ.

ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಸಿಪಿವಿ ಮತ್ತು ಒಐಎ) ಮುಕ್ತೇಶ್ ಪರದೇಶಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಯುಎಇ ನಿಯೋಗದ ನೇತೃತ್ವವನ್ನು ಯುಎಇಯ ವಿದೇಶಾಂಗ ಸಚಿವಾಲಯದ ಖಾಯಂ ಕಾರ್ಯದರ್ಶಿ ಖಾಲಿದ್ ಬೆಲ್ಹೌಲ್ ವಹಿಸಿದ್ದರು. ಭಾರತ ಮತ್ತು ಯುಎಇ ದೇಶಗಳು ಗಟ್ಟಿಯಾದ ಸ್ನೇಹ ಸಂಬಂಧ ಹೊಂದಿರುವುದು ಗಮನಾರ್ಹ.

2017ರಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲಾಯಿತು. ರಾಜಕೀಯ, ಆರ್ಥಿಕ, ವ್ಯಾಪಾರ, ವಾಣಿಜ್ಯ, ರಕ್ಷಣೆ, ಸಾಂಸ್ಕೃತಿಕ, ತಂತ್ರಜ್ಞಾನ ಮತ್ತು ಇಂಧನ ಹೀಗೆ ಪರಸ್ಪರ ಸಹಕಾರದ ಎಲ್ಲ ಕ್ಷೇತ್ರಗಳನ್ನು ಈ ಪಾಲುದಾರಿಕೆ ಒಳಗೊಂಡಿದೆ. ಯುಎಇಯಲ್ಲಿ ಪ್ರಸ್ತುತ 3.5 ದಶಲಕ್ಷಕ್ಕೂ ಹೆಚ್ಚು ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ. ಇದು ಭಾರತದ ಹೊರಗೆ ಅತ್ಯಧಿಕ ಭಾರತೀಯರು ವಾಸಿಸುತ್ತಿರುವ ದೇಶವಾಗಿದೆ.

ಯುಎಇಯಲ್ಲಿರುವ ಭಾರತೀಯ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಯುಎಇ ಪ್ರತಿನಿಧಿಗಳು ವಿವರವಾದ ಸಂಕ್ಷಿಪ್ತ ವಿವರಣೆ ನೀಡಿದರು. ಎರಡೂ ದೇಶಗಳು ನಾಗರಿಕ ಕೇಂದ್ರಿತ ಕಾನ್ಸುಲರ್ ಕಾರ್ಯವಿಧಾನಗಳ ಮಾದರಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದವು.

ಉಭಯ ದೇಶಗಳ ಜನರ ಮಧ್ಯೆ ಬಾಂಧವ್ಯ ಹೆಚ್ಚಿಸಲು ವೀಸಾ ಸೌಲಭ್ಯ ಮತ್ತು ವಲಸೆ ಮತ್ತು ಚಲನಶೀಲತೆಗೆ ಸಂಬಂಧಿಸಿದ ಒಪ್ಪಂದಗಳನ್ನು ಶೀಘ್ರವಾಗಿ ಜಾರಿಗೊಳಿಸುವುದು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಇತರ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಪರಸ್ಪರರ ದೇಶಗಳ ನಾಗರಿಕರಿಗೆ ಸಂಬಂಧಿಸಿದ ಅಂಕಿ - ಅಂಶಗಳ ನಿಯಮಿತ ವಿನಿಮಯ ಮತ್ತು ರಾಜತಾಂತ್ರಿಕ ವಿಷಯಗಳ ಬಗ್ಗೆ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಒಪ್ಪಿಗೆ ಸೂಚಿಸಲಾಯಿತು.

ಸಭೆಯ ಒಪ್ಪಿತ ನಿರ್ಧಾರಗಳನ್ನು ಅನುಸರಿಸಲು ಮತ್ತು ಪರಸ್ಪರ ಅನುಕೂಲಕರ ದಿನಾಂಕದಂದು ಅಬುಧಾಬಿಯಲ್ಲಿ ನಡೆಯಲಿರುವ ಮುಂದಿನ ರಾಜತಾಂತ್ರಿಕ ಸಂವಾದದಲ್ಲಿ ಅವುಗಳ ಬಗ್ಗೆ ಪರಿಶೀಲನೆ ನಡೆಸಲು ಪ್ರತಿನಿಧಿಗಳು ಒಪ್ಪಿಕೊಂಡರು. ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ವ್ಯಾಪಾರ ಸಂಬಂಧವು ಮಹತ್ವದ್ದಾಗಿದೆ ಮತ್ತು ಬಹುಮುಖಿಯಾಗಿದೆ. ಭಾರತ ಮತ್ತು ಯುಎಇ ದೃಢವಾದ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಹೊಂದಿದ್ದು, ವ್ಯಾಪಾರ ಪ್ರಮಾಣವು ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾರತವು ಪೆಟ್ರೋಲಿಯಂ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳು, ಜವಳಿ, ಯಂತ್ರೋಪಕರಣಗಳು ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಯುಎಇಗೆ ರಫ್ತು ಮಾಡುತ್ತದೆ.

ಮತ್ತೊಂದೆಡೆ, ಯುಎಇ ಮುಖ್ಯವಾಗಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಮೂಲಸೌಕರ್ಯ, ರಿಯಲ್ ಎಸ್ಟೇಟ್, ಇಂಧನ, ಆತಿಥ್ಯ ಮತ್ತು ಮಾಹಿತಿ ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯೊಂದಿಗೆ ಯುಎಇ ಭಾರತದ ಅತಿದೊಡ್ಡ ಹೂಡಿಕೆದಾರ ದೇಶಗಳಲ್ಲಿ ಒಂದಾಗಿದೆ. ಹಾಗೆಯೇ ಭಾರತೀಯ ಕಂಪನಿಗಳು ಯುಎಇಯಲ್ಲಿ ಗಮನಾರ್ಹ ಹೂಡಿಕೆ ಮಾಡಿವೆ. ವಿಶೇಷವಾಗಿ ನಿರ್ಮಾಣ, ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಸೇವೆಗಳಂಥ ಕ್ಷೇತ್ರಗಳಲ್ಲಿ ಭಾರತದ ಕಂಪನಿಗಳು ಗಮನಾರ್ಹ ಹೂಡಿಕೆ ಮಾಡಿವೆ.

ಇದನ್ನೂ ಓದಿ : ಇರಾನ್​​ನ ಚಬಹಾರ್ ಬಂದರು ನಿರ್ವಹಣೆಗಾಗಿ 10 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ - Chabahar Port Contract

ETV Bharat Logo

Copyright © 2024 Ushodaya Enterprises Pvt. Ltd., All Rights Reserved.