ETV Bharat / bharat

ಮಿನಿ ಬಸ್​ - ಟ್ರಕ್ ಮಧ್ಯೆ ಡಿಕ್ಕಿ: ವೈಷ್ಣೋದೇವಿಗೆ ಹೊರಟಿದ್ದ ಒಂದೇ ಕುಟುಂಬದ 7 ಜನ ಸಾವು - Mini Bus and Truck Collision

author img

By ETV Bharat Karnataka Team

Published : May 24, 2024, 4:22 PM IST

Road accident in Ambala: ಹರಿಯಾಣದ ಅಂಬಾಲಾದಲ್ಲಿ ಮಿನಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ವೈಷ್ಣೋದೇವಿಗೆ ಹೋಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ.

Haryana: Bus Damaged in Accident
ಹರಿಯಾಣ: ಅಪಘಾತದಿಂದ ಜಖಂಗೊಂಡಿರುವ ಬಸ್ (ETV Bharat)

ಅಂಬಾಲಾ (ಹರಿಯಾಣ): ಮಿನಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ. ಮೃತರೆಲ್ಲರೂ ಉತ್ತರ ಪ್ರದೇಶದ ಬುಲಂದ್‌ಶಹರ್‌ ಮೂಲದವರು. ಮಿನಿ ಬಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಿಂದ ಸುಮಾರು 30 ಜನರು ಮಿನಿ ಬಸ್‌ನಲ್ಲಿ ವೈಷ್ಣೋದೇವಿಗೆ ತೆರಳುತ್ತಿದ್ದರು. ಆದರೆ, ಹರಿಯಾಣದ ಅಂಬಾಲಾದ ದೆಹಲಿ - ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಮಿನಿ ಬಸ್ ಮತ್ತು ಟ್ರಕ್ ನಡುವೆ ಅಪಘಾತ ಉಂಟಾಗಿದೆ. ಮಿನಿ ಬಸ್ಸಿನ ಮುಂದೆ ಚಲಿಸುತ್ತ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಇದರಿಂದ ಬಸ್​ ಹಿಂದಿನಿಂದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣ ನಜ್ಜು-ಗುಜ್ಜಾಗಿದೆ.

ಈ ಭೀಕರ ಅಪಘಾತದಿಂದ ಪ್ರಯಾಣಿಕರ ಕಿರುಚಾಟ ಕೇಳಿದ ದಾರಿಹೋಕರು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದಿದ್ದಾರೆ. ನಂತರ ವಿಷಯ ತಿಳಿದು ಪೊಲೀಸರ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲೇ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ನಾಲ್ವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತ ಏಳು ಜನರಲ್ಲಿ ಆರು ತಿಂಗಳ ಮಗು ಕೂಡ ಸೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಉಳಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಹತ್ತಿರದ ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಮಿನಿ ಬಸ್‌ನಲ್ಲಿದ್ದ 30 ಜನರು ಒಂದೇ ಕುಟುಂಬದ ಸಂಬಂಧಿಕರಾಗಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಘಟನೆ ಬಳಿಕ ಆರೋಪಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಟ್ರಕ್ ಜಪ್ತಿ ಮಾಡಲಾಗಿದ್ದು, ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿ ದಿಲೀಪ್ ವಿವರಿಸಿದ್ದಾರೆ.

ಈ ಘಟನೆಯಲ್ಲಿ ಮೃತ ಕುಟುಂಬಸ್ಥರಿಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ನಯಾಬ್ ಸೈನಿ ಸಂತಾಪ ಸೂಚಿಸಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಸಂಭವಿಸಿದ ರಸ್ತೆ ಅಪಘಾತ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು. ಎಲ್ಲ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಿದೆ ಎಂದು ಮೋದಿ ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಕಿರಿಯ ವೈದ್ಯೆಗೆ ಲೈಂಗಿಕ ಕಿರುಕುಳ: ಆಸ್ಪತ್ರೆಯ 3ನೇ ಮಹಡಿಗೆ ಜೀಪ್ ನುಗ್ಗಿಸಿ ವೈದ್ಯನ ಬಂಧಿಸಿದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.