ETV Bharat / bharat

ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗ ಪ್ರದೇಶ ಸರ್ವೇಗೆ ಹಿಂದುಗಳಿಂದ ಸುಪ್ರೀಂಕೋರ್ಟ್​ಗೆ ಅರ್ಜಿ

author img

By ETV Bharat Karnataka Team

Published : Jan 29, 2024, 3:50 PM IST

ಶಿವಲಿಂಗ ಪತ್ತೆಯಾದ ಪ್ರದೇಶದಲ್ಲಿ ಎಎಸ್​ಐ ಸರ್ವೇ ನಡೆಸಲು ನಿರ್ದೇಶನ ನೀಡಬೇಕು ಎಂದು ಹಿಂದೂ ಪರರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಶಿವಲಿಂಗ ಪ್ರದೇಶ ಸರ್ವೇ
ಶಿವಲಿಂಗ ಪ್ರದೇಶ ಸರ್ವೇ

ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪ್ರವೇಶ ನಿರ್ಬಂಧಿಸಲಾದ ಶಿವಲಿಂಗ ಪತ್ತೆಯಾದ ಜಾಗವನ್ನೂ ಸರ್ವೇ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರಿಗೆ ಸೂಚನೆ ನೀಡಬೇಕು ಎಂದು ಹಿಂದೂ ಪಕ್ಷಗಾರರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜ್ಞಾನವಾಪಿ ಮಸೀದಿಯನ್ನು ಸಂಪೂರ್ಣವಾಗಿ ಸರ್ವೇ ಮಾಡಲಾಗಿದೆ. ಆದರೆ, ಸೀಲ್​ ಮಾಡಲಾಗಿರುವ ಶಿವಲಿಂಗ ಪತ್ತೆಯಾದ ಜಾಗವನ್ನು ಉತ್ಖನನ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಸಮೀಕ್ಷೆ ಮಾಡಬೇಕಾಗಿದೆ. ಅದು ದೇವಾಲಯಕ್ಕೆ ಸಂಬಂಧಿಸಿದ ಜಾಗ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದು ಪರ ವಕೀಲ ವಿಷ್ಣು ಶಂಕರ್ ಜೈನ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಸಂಪೂರ್ಣವಾಗಿ ನಿರ್ಬಂಧಿಸಲಾಗಿರುವ ಪ್ರದೇಶದಲ್ಲಿ ಉತ್ಖನನ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಸಮೀಕ್ಷೆ ನಡೆಸಲು ಮತ್ತು ನೀಡಿದ ಅವಧಿಯೊಳಗೆ ವರದಿಯನ್ನು ಸಲ್ಲಿಸಲು ಎಎಸ್‌ಐಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ಶಿವಲಿಂಗ ಪ್ರದೇಶದಲ್ಲಿ ಹೊಸ ಕಟ್ಟಡ: ಶಿವಲಿಂಗದ ಪ್ರದೇಶದ ಸುತ್ತಲೂ ಹೊಸದಾಗಿ ಗೋಡೆಗಳನ್ನು ನಿರ್ಮಿಸಲಾಗಿದೆ. ಅದು ಮೂಲ ಕಟ್ಟಡದೊಂದಿಗೆ ಸಂಪರ್ಕ ಹೊಂದಿಲ್ಲ. ಈ ಪ್ರದೇಶವು ಮುಸ್ಲಿಮರಿಗೆ ಯಾವುದೇ ಧಾರ್ಮಿಕ ಮಹತ್ವ ಹೊಂದಿಲ್ಲ. ಇಲ್ಲಿರುವ ಕೊಳ ಅವರಿಗೆ ಅಪಥ್ಯವಾಗಿದೆ. ಶಿವಲಿಂಗವಿರುವ ಸ್ಥಳವನ್ನು ಮುಚ್ಚಿಹಾಕಲು ಅಲ್ಲಿದ್ದ ಪೀಠ, ದೇಗುಲವನ್ನು ಹೊಡೆದು ಉದ್ದೇಶಪೂರ್ವಕವಾಗಿ ಹೊಸ ಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮೇ 16, 2022 ರಂದು ಪತ್ತೆಯಾದ ಶಿವಲಿಂಗವನ್ನು ಹಿಂದೂಗಳು ಮತ್ತು ಶಿವನ ಭಕ್ತರು ಆರಾಧಿಸಬಹುದಾಗಿದೆ. ಶಿವಲಿಂಗದ ದರ್ಶನ ಮತ್ತು ಪೂಜಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಹೀಗಾಗಿ ಸಂಪೂರ್ಣ ಸೀಲ್ ಮಾಡಿದ ಪ್ರದೇಶದ ವೈಜ್ಞಾನಿಕ ಸಮೀಕ್ಷೆಯನ್ನು ಎಎಸ್‌ಐ ನಡೆಸಬಹುದು ಎಂದು ಹಿಂದೂ ಕಡೆಯವರು ಹೇಳಿದ್ದಾರೆ. 2022 ಮೇ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಸೀಲಿಂಗ್ ಮಾಡಲು ನಿರ್ದೇಶಿಸಿತ್ತು.

ಮಸೀದಿಯಲ್ಲಿ ಹಿಂದೂ ಕುರುಹುಗಳು: ವಾರಾಣಸಿಯ ಜ್ಞಾನವಾಪಿ ಮಸೀದಿ ಎಂದು ಗುರುತಿಸಲಾಗುವ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಸಮೀಕ್ಷೆ ನಡೆಸಿದ್ದು, ಅದರ ವರದಿ ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡಲಾಗಿದೆ. ಇದೀಗ ಆ ವರದಿ ಬಹಿರಂಗವಾಗಿದ್ದು, ಮಸೀದಿ ಎನ್ನಲಾದ ಪ್ರದೇಶದಲ್ಲಿ ಹಿಂದು ದೇವಾಲಯದ ಹಲವು ಕುರುಹುಗಳು ಪತ್ತೆಯಾಗಿವೆ. ಜೊತೆಗೆ ಕನ್ನಡದ ಶಾಸನವೂ ಅಲ್ಲಿ ದೊರೆತಿದೆ. ಹೀಗಾಗಿ ಅದು ಕಾಶಿ ವಿಶ್ವನಾಥನಿಗೆ ಸೇರಿದ ಪ್ರದೇಶದ ಎಂಬುದು ಹಿಂದುಗಳ ವಾದವಾಗಿದೆ. ಈಗಿರುವ ಕಟ್ಟಡ ನಿರ್ಮಾಣಕ್ಕೂ ಮೊದಲು ಹಿಂದೂ ದೇವಾಲಯವಿತ್ತು. ಈಗ ಅಲ್ಲಿ ಮಸೀದಿಯಿದೆ ಎಂದು ಎಎಸ್‌ಐ ವರದಿ ಹೇಳಿದೆ. ಈ ಜಾಗವನ್ನು ಹಿಂದುಗಳಿಗೆ ಹಸ್ತಾಂತರಿಸಲು ವಿಶ್ವ ಹಿಂದೂ ಪರಿಷತ್​ (ವಿಎಚ್​ಪಿ) ಹೇಳಿದೆ.

ಇದನ್ನೂ ಓದಿ: 'ಜ್ಞಾನವಾಪಿ ಮಸೀದಿ ಬೃಹತ್‌ ದೇಗುಲದ ಅವಶೇಷಗಳ ಮೇಲೆ ನಿರ್ಮಾಣ': ASI ಸರ್ವೇ ವರದಿ ಬಹಿರಂಗಪಡಿಸಿದ ಹಿಂದೂ ಅರ್ಜಿದಾರರ ಪರ ವಕೀಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.