ETV Bharat / bharat

ಗಾಲಿಕುರ್ಚಿ ಸಿಗದೆ 80 ವರ್ಷದ ಪ್ರಯಾಣಿಕ ಸಾವು ಪ್ರಕರಣ; ಏರ್​ ಇಂಡಿಯಾಗೆ ₹30 ಲಕ್ಷ ದಂಡ

author img

By PTI

Published : Feb 29, 2024, 4:08 PM IST

DGCA slaps Rs 30 lakh fine on Air India for wheelchair incident involvingelderly passenger
ಗಾಲಿಕುರ್ಚಿ ಸಿಗದೆ 80 ವರ್ಷದ ಪ್ರಯಾಣಿಕ ಸಾವು ಪ್ರಕರಣ; ಏರ್​ ಇಂಡಿಯಾಗೆ ₹ 30 ಲಕ್ಷ ದಂಡ

ಗಾಲಿಕುರ್ಚಿ ಸಿಗದೆ ವೃದ್ಧ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಸಂಬಂಧ ಏರ್​ ಇಂಡಿಯಾಗೆ ಡಿಜಿಸಿಎ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿ ಸೇವೆ ವಿಳಂಬದಿಂದ 80 ವರ್ಷದ ಪ್ರಯಾಣಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) 30 ಲಕ್ಷ ರೂಪಾಯಿ ದಂಡದ ಬರೆ ಎಳೆದಿದೆ.

ಈ ವಿಷಯವನ್ನು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಗಾಲಿಕುರ್ಚಿ ಸೇವೆ ವಿಳಂಬದಿಂದ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಸಂಬಂಧ ಯಾವುದೇ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿದ್ದ ಬಗ್ಗೆ ಮಾಹಿತಿಯನ್ನು ಏರ್ ​ಇಂಡಿಯಾ ನೀಡಿಲ್ಲ. ಇದಲ್ಲದೇ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ತೆಗೆದುಕೊಂಡ ಮತ್ತು ಸರಿಪಡಿಸುವ ಯಾವುದೇ ಕ್ರಮಗಳ ಕುರಿತ ಮಾಹಿತಿ ಒದಗಿಸಲು ಸಂಸ್ಥೆ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಹಿನ್ನೆಲೆ: ಫೆಬ್ರವರಿ 12ರಂದು ವೃದ್ಧ ದಂಪತಿ ಏರ್ ​ಇಂಡಿಯಾ ವಿಮಾನದ ಮೂಲಕ ಮುಂಬೈ ಏರ್​ಪೋರ್ಟ್​ಗೆ ಬಂದಿಳಿದಿದ್ದರು. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದರು. ದಂಪತಿ ವಿಮಾನ ಇಳಿದ ಬಳಿಕ ಟರ್ಮಿನಲ್​ಗೆ ಹೋಗಲು ಎರಡು ಗಾಲಿಕುರ್ಚಿಗಳನ್ನೂ ಕಾಯ್ದಿರಿಸಿದ್ದರು. ಆದರೆ, ಏರ್​ ಇಂಡಿಯಾ ಒಂದೇ ಗಾಲಿಕುರ್ಚಿ ಒದಗಿಸಿತ್ತು. ಇನ್ನೊಂದರ ಸೇವೆ ಒದಗಿಸುವಲ್ಲಿ ವಿಳಂಬ ಮಾಡಿತ್ತು.

ಇದರಿಂದಾಗಿ ವೃದ್ಧ ವ್ಯಕ್ತಿ ತನ್ನ ಪತ್ನಿಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ತಾನು ನಡೆದುಕೊಂಡು ಹೋಗುತ್ತಿದ್ದರು. ಸುಮಾರು ಒಂದು ಕಿಲೋ ಮೀಟರ್​ನಷ್ಟು ದೂರ ನಡೆದೇ ಹೋದ ವೃದ್ಧನಿಗೆ ಹೃದಯಾಘಾತ ಕಾಣಿಸಿಕೊಂಡಿತ್ತು. ಪರಿಣಾಮ ದಾರಿಮಧ್ಯೆಯೇ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು.

ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಫೆ.20ರಂದು ಏರ್​ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್​ ಜಾರಿ ಮಾಡಿ, ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿತ್ತು. ಅಲ್ಲದೇ, ವಿಮಾನ ಏರುವ ಅಥವಾ ಇಳಿಯುವ ಸಮಯದಲ್ಲಿ ಸಹಾಯದ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಏರ್​ ಇಂಡಿಯಾ, ಪತ್ನಿಗೆ ಒಂದು ಗಾಲಿಕುರ್ಚಿ ಒದಗಿಸಲಾಗಿತ್ತು. ಇನ್ನೊಂದನ್ನು ಒದಗಿಸಲಾಗುವುದು, ಕಾಯಿರಿ ಎಂದು ತಿಳಿಸಲಾಗಿತ್ತು. ಆದರೆ, ಪತಿ ತನ್ನ ಪತ್ನಿಗೆ ಒದಗಿಸಿದ್ದ ಗಾಲಿಕುರ್ಚಿ ಜೊತೆಗೆ ನಡೆದುಹೋಗುವುದಾಗಿ ಹೇಳಿದ್ದರು ಎಂದು ತಿಳಿಸಿದೆ.

ಇದನ್ನೂ ಓದಿ: ಗಾಲಿಕುರ್ಚಿ ಕೊರತೆ, ನಡೆದು ಹೋಗುವಾಗ ಹೃದಯಾಘಾತದಿಂದ 80ರ ವೃದ್ಧ ಸಾವು: ಏರ್‌ ಇಂಡಿಯಾಗೆ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.