ETV Bharat / bharat

'ಕೋರ್ಟ್‌ಗಳ ತೀರ್ಪಿಗಾಗಿ ಜನರು ಸಾಯುವವರೆಗೂ ಕಾಯುವ ಪರಿಸ್ಥಿತಿ ನಿರ್ಮಿಸಬಾರದು': ಸಿಜೆಐ

author img

By ETV Bharat Karnataka Team

Published : Mar 3, 2024, 10:46 AM IST

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಮುಂದೂಡುವ ಸಂಸ್ಕೃತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Chief Justice of India  District Judges Conference  CJI on Pendency  ಸಿಜೆಐ ಡಿವೈ ಚಂದ್ರಚೂಡ್  ನ್ಯಾಯಾಂಗ ವ್ಯವಸ್ಥೆ
ಪ್ರಕರಣಗಳ ವಿಚಾರಣೆ ಮುಂದೂಡುವ ಅಭ್ಯಾಸವು ದಾವೆದಾರರ ನೋವನ್ನು ಹೆಚ್ಚಿಸುತ್ತದೆ: ಸಿಜೆಐ ಚಂದ್ರಚೂಡ್

ಭುಜ್(ಗುಜರಾತ್): ''ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ 'ಮುಂದೂಡುವಿಕೆಯ ಪ್ರವೃತ್ತಿ'ಯು ದಾವೆದಾರರ ನೋವು ಹೆಚ್ಚಿಸುತ್ತದೆ. ನ್ಯಾಯಾಲಯಗಳು ನೀಡುವ ಪ್ರಕರಣಗಳ ತೀರ್ಪಿಗಾಗಿ ನಾಗರಿಕರು ಸಾಯುವವರೆಗೂ ಕಾಯುವ ಪರಿಸ್ಥಿತಿಯನ್ನು ನಿರ್ಮಿಸಬಾರದು'' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು. ಜಿಲ್ಲಾ ನ್ಯಾಯಾಲಯಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ಹಿಂದೇಟು ಹಾಕುತ್ತಿರುವುದರಿಂದ ‘ಜಾಮೀನು ನಿಯಮ, ಜೈಲು ವಿನಾಯಿತಿ’ ಎಂಬ ಬಹುಕಾಲದ ತತ್ವ ದುರ್ಬಲಗೊಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗುಜರಾತ್‌ನ ಕಚ್ ಜಿಲ್ಲೆಯ ಧೋರ್ಡೊದಲ್ಲಿ ಶನಿವಾರ ನಡೆದ ಅಖಿಲ ಭಾರತ ಜಿಲ್ಲಾ ನ್ಯಾಯಾಧೀಶರ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ''ಪ್ರಕರಣಗಳ ಬಾಕಿಯು ನ್ಯಾಯದ ದಕ್ಷ ಆಡಳಿತಕ್ಕೆ ಗಂಭೀರ ಸವಾಲಾಗಿದೆ'' ಎಂದರು.

''ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಮುಂದೂಡಿಕೆ ಪದ್ಧತಿಯೇ ದೊಡ್ಡ ಸಮಸ್ಯೆ. ವಿಚಾರಣೆಯಲ್ಲಿ ವಿಳಂಬಕ್ಕಾಗಿ ಪದೇ ಪದೇ ವಿನಂತಿಸುವ ಈ ಅಭ್ಯಾಸ ನಮ್ಮ ಕಾನೂನು ವ್ಯವಸ್ಥೆಯ ದಕ್ಷತೆ ಮತ್ತು ಸಮಗ್ರತೆಯ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ. ಮುಂದೂಡುವ ಪದ್ಧತಿ ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗ ಎಂದು ಸಾಮಾನ್ಯ ಜನರು ನಂಬುತ್ತಾರೆ. ಆದರೆ, ಇದು ದಾವೆದಾರರ ಸಂಕಷ್ಟ ಹೆಚ್ಚಿಸಬಹುದು. ಪ್ರಕರಣಗಳನ್ನು ಬಾಕಿ ಉಳಿಸಿಕೊಂಡು ಹೋಗುವ ಪರಂಪರೆಯನ್ನು ಕೈಬಿಡಬೇಕು" ಎಂದು ಕಿವಿಮಾತು ಹೇಳಿದರು.

ಪ್ರಕರಣಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಿ: ''ಪ್ರಕರಣಗಳ ಬಾಕಿ ಸಮಸ್ಯೆಯನ್ನು ಹೋಗಲಾಡಿಸಲು ವ್ಯವಸ್ಥಿತ ಸುಧಾರಣೆಗಳು, ಕಾರ್ಯವಿಧಾನದ ಸುಧಾರಣೆಗಳು ಮತ್ತು ತಂತ್ರಜ್ಞಾನದ ಬಳಕೆಯನ್ನು ಒಳಗೊಂಡ ಬಹುಮುಖ ವಿಧಾನಗಳ ಅಗತ್ಯವಿದೆ. ನ್ಯಾಯಾಲಯದ ಪ್ರಕ್ರಿಯೆಗಳನ್ನು ಚುರುಕುಗೊಳಿಸುವಲ್ಲಿ, ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಪರ್ಯಾಯವಾದ ಪರಿಹಾರ ಕಾರ್ಯವಿಧಾನಗಳನ್ನು ಉತ್ತೇಜಿಸುವಲ್ಲಿ ಜಿಲ್ಲಾ ನ್ಯಾಯಾಧೀಶರ ಪಾತ್ರ ಮಹತ್ವದ್ದು'' ಎಂದು ಹೇಳಿದ ಸಿಜೆಐ, ''ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಿಗಣಿಸಲು ಜಿಲ್ಲಾ ನ್ಯಾಯಾಲಯಗಳು ಹಿಂದೇಟು ಹಾಕುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ'' ಎಂದು ತಿಳಿಸಿದರು.

''ಕೆಳ ಹಂತದ ನ್ಯಾಯಾಲಯಗಳು ತಿರಸ್ಕರಿಸಿದ ಜಾಮೀನು ಅರ್ಜಿಗಳ ವಿರುದ್ಧದ ಮೇಲ್ಮನವಿಗಳು ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ಗೆ ತಲುಪುತ್ತಿದ್ದಂತೆ, ಈ ಸಂದರ್ಭಗಳಲ್ಲಿ 'ಜಾಮೀನು ನಿಯಮ, ಜೈಲು ವಿನಾಯಿತಿ' ಎಂಬ ದೀರ್ಘಕಾಲದ ತತ್ವ ದುರ್ಬಲಗೊಳ್ಳುತ್ತಿದೆ'' ಎಂದು ಕಳವಳ ವ್ಯಕ್ತಪಡಿಸಿದರು. ಈ ಪ್ರವೃತ್ತಿಯು ಆಳವಾದ ಮರು ಮೌಲ್ಯಮಾಪನದ ಅಗತ್ಯವನ್ನು ಸೂಚಿಸುತ್ತದೆ. ಜಿಲ್ಲಾ ನ್ಯಾಯಾಂಗವು ನ್ಯಾಯ ವ್ಯವಸ್ಥೆ ಮತ್ತು ಸ್ಥಳೀಯ ಸಮುದಾಯಗಳ ನಡುವಿನ ಪ್ರಾಥಮಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ನ್ಯಾಯಾಂಗದ ಮೇಲೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಅದರ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಸುಧಾರಿಸಬೇಕು" ಎಂದು ಚಂದ್ರಚೂಡ್ ಸಲಹೆ ನೀಡಿದರು.

ಬಾಹ್ಯ ಒತ್ತಡಕ್ಕೊಳಗಾಗದೇ ನಿಷ್ಪಕ್ಷಪಾತ ನ್ಯಾಯ ಒದಗಿಸಿ: ''ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶರು ನ್ಯಾಯಾಲಯದ ಕಲಾಪ ಮತ್ತು ತೀರ್ಪುಗಳಲ್ಲಿ ಬಳಸುವ ಭಾಷೆಯ ಬಗ್ಗೆ ಜಾಗೃತರಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಟೀಕೆಗಳಿಂದ ನ್ಯಾಯಾಧೀಶರು ಅನಗತ್ಯವಾಗಿ ಪ್ರಭಾವಿತರಾಗಬಾರದು. ಬಾಹ್ಯ ಒತ್ತಡ ಅಥವಾ ಸಾರ್ವಜನಿಕ ಅಭಿಪ್ರಾಯಕ್ಕೆ ಒಳಗಾಗದೇ ನಿಷ್ಪಕ್ಷಪಾತವಾಗಿ ನ್ಯಾಯ ನೀಡುವುದು ನ್ಯಾಯಾಧೀಶರ ಕರ್ತವ್ಯ'' ಎಂದರು.

ಇದನ್ನೂ ಓದಿ: ಆಂಧ್ರ ರೈಲು ದುರಂತಕ್ಕೆ ಚಾಲಕ, ಸಹಾಯಕ ಚಾಲಕನ​ ಕ್ರಿಕೆಟ್​​ ಹುಚ್ಚು ಕಾರಣ: ಸಚಿವ ಅಶ್ವಿನಿ ವೈಷ್ಣವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.