ETV Bharat / bharat

ತಮಿಳುನಾಡಿನಲ್ಲಿ ಸೀಟು ಹಂಚಿಕೆ ಯಶಸ್ವಿ: ಕಾಂಗ್ರೆಸ್​ 9, ಡಿಎಂಕೆ 21 ರಲ್ಲಿ ಸ್ಪರ್ಧೆ

author img

By ETV Bharat Karnataka Team

Published : Mar 10, 2024, 10:10 AM IST

ಸೀಟು ಹಂಚಿಕೆ ಯಶಸ್ವಿ
ಸೀಟು ಹಂಚಿಕೆ ಯಶಸ್ವಿ

ತಮಿಳುನಾಡಿನಲ್ಲಿ ಇಂಡಿಯಾ ಕೂಟದ ಕಾಂಗ್ರೆಸ್​ ಮತ್ತು ಡಿಎಂಕೆ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿವೆ.

ಚೆನ್ನೈ/ನವದೆಹಲಿ: ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್​ I.N.D.I.A ಕೂಟದ ಸದಸ್ಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನೊಂದಿಗೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 9, ಡಿಎಂಕೆ 21 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ.

ಹಲವು ಸುತ್ತಿನ ಮಾತುಕತೆಗಳ ನಂತರ ಎಐಎಡಿಎಂಕೆ ಮತ್ತು ಬಿಜೆಪಿಗೆ ದೊಡ್ಡ ಸಂದೇಶ ರವಾನಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮುಂಬರುವ ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ತ್ವರಿತವಾಗಿ ಮುಗಿಸಿದೆ. ಆದರೆ, ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ ಎಂಬುದು ನಿಖರವಾಗಿಲ್ಲ.

ಸಮನ್ವಯದಂತೆ ಕಾಂಗ್ರೆಸ್ 9 ಮತ್ತು ಪುದುಚೇರಿಯಲ್ಲಿ 1 ಸ್ಥಾನದಲ್ಲಿ ಸ್ಪರ್ಧಿಸಲಿದೆ. ಡಿಎಂಕೆ 21 ಸ್ಥಾನಗಳಲ್ಲಿ ಕಣಕ್ಕಿಳಿದರೆ, ಇತರ ಸಣ್ಣ ಪಕ್ಷಗಳ ಪೈಕಿ ಸಿಪಿಐ 2 ಸ್ಥಾನ, ಸಿಪಿಐ-ಎಂ 2, ಎಂಡಿಎಂಕೆ 1, ವಿಸಿಕೆ 2, ಐಯುಎಂಎಲ್ 1 ಮತ್ತು ಕೆಎಂಡಿಕೆ 1 ಸ್ಥಾನದಲ್ಲಿ ಅಭ್ಯರ್ಥಿಗಳನ್ನು ಇಳಿಸಲಿವೆ. ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರ ಎಂಎನ್‌ಎಂ ಪಕ್ಷವು ಮೈತ್ರಿಕೂಟಕ್ಕೆ ಸೇರಿದೆ. 2019ರಲ್ಲೂ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಿ 8 ಸ್ಥಾನಗಳನ್ನು ಗೆದ್ದಿತ್ತು. ತಮಿಳುನಾಡಿನಲ್ಲಿ ಒಟ್ಟು 39 ಸ್ಥಾನಗಳ ಪೈಕಿ 38ರಲ್ಲಿ ಡಿಎಂಕೆ ಮೈತ್ರಿಕೂಟ ಗೆದ್ದಿತ್ತು.

ಶೀಘ್ರ ಕ್ಷೇತ್ರಗಳ ಘೋಷಣೆ: "ರಾಜ್ಯದಲ್ಲಿ ವಿಭಜಕ ಶಕ್ತಿಗಳನ್ನು ಸೋಲಿಸಲು ಜಾತ್ಯತೀತ ತತ್ವದ ಆಧಾರದ ಮೇಲೆ ಈ ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ. ಮಿತ್ರ ಪಕ್ಷಗಳು ಸೀಟುಗಳ ಹಂಚಿಕೆಗೆ ಒಪ್ಪಿಗೆ ನೀಡಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್​ 9 ಮತ್ತು ಪುದುಚೇರಿಯಲ್ಲಿ ಒಂದರಲ್ಲಿ ಸ್ಪರ್ಧಿಸಲಿದೆ. ಪಕ್ಷದಿಂದ ಸ್ಪರ್ಧಿಸಲಿರುವ ನಿರ್ದಿಷ್ಟ ಕ್ಷೇತ್ರಗಳನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಾಗುವುದು" ಎಂದು ತಮಿಳುನಾಡು ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಸಿರಿವೆಲ್ಲ ಪ್ರಸಾದ್ ತಿಳಿಸಿದ್ದಾರೆ.

ಮಾತುಕತೆ ಫಲಪ್ರವಾಗಿವೆ. 2019 ರಲ್ಲಿ ಗೆದ್ದ ಕ್ಷೇತ್ರಗಳನ್ನೇ ಮರು ಪಡೆಯಲಿದ್ದೇವೆ. ನಿರ್ದಿಷ್ಟ ಕ್ಷೇತ್ರಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಿದ್ದೇವೆ. ಸೀಟು ಹಂಚಿಕೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳನ್ನು ತಿರಸ್ಕರಿಸಿದರು.

ಸಂಘಟನಾ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ತಮಿಳುನಾಡು ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ನಂತರ ಸೀಟು ಹಂಚಿಕೆ ಮಾತುಕತೆಗೆ ಅಂತಿಮ ಮುದ್ರೆ ಬಿದ್ದಿದೆ.

ಇದನ್ನೂ ಓದಿ: ಅಮೇಥಿಯಿಂದ ರಾಹುಲ್​ ಗಾಂಧಿ ಸ್ಪರ್ಧೆ ಮಾಡಲಿ: ಕಾಂಗ್ರೆಸ್​ ಪಕ್ಷದಲ್ಲೇ ಹೆಚ್ಚಿದ ಕೂಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.