ETV Bharat / bharat

ಟಿಎಂಸಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ: ಪಶ್ಚಿಮ ಬಂಗಾಳದ ಕೂಚ್​ ಬೆಹಾರ್​ನಲ್ಲಿ ಹಿಂಸಾಚಾರ - lok sabha election 2024

author img

By ETV Bharat Karnataka Team

Published : Apr 19, 2024, 2:00 PM IST

Violence erupts in Bengal's Cooch Behar as TMC and BJP workers clash
Violence erupts in Bengal's Cooch Behar as TMC and BJP workers clash

ಲೋಕಸಭಾ ಚುನಾವಣೆಯ ಮತದಾನದ ಮೊದಲ ಕೆಲ ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ರಾಜಕೀಯ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.

ಕೋಲ್ಕತಾ : ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರದ ಮೊದಲ ಎರಡು ಗಂಟೆಗಳ ಮತದಾನದ ಅವಧಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಜಲ್​ಪೈಗುರಿ ಲೋಕಸಭಾ ಕ್ಷೇತ್ರದಲ್ಲೂ ಕೆಲ ಹಿಂಸಾಚಾರದ ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಇನ್ನು ಅಲಿಪುರ್ದುವಾರ್ ಲೋಕಸಭಾ ಕ್ಷೇತ್ರದಲ್ಲಿ ಆರಂಭಿಕ ಮತದಾನದ ಸಮಯದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ.

ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯ ದಾಖಲೆಗಳ ಪ್ರಕಾರ, ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 50ಕ್ಕಿಂತ ಹೆಚ್ಚು ಮತದಾನವಾಗಿದೆ. ಅಲಿಪುರ್ದುವಾರ್​ನಲ್ಲಿ ಗರಿಷ್ಠ ಶೇಕಡಾ 51.58, ಕೂಚ್ ಬೆಹಾರ್​ನಲ್ಲಿ ಶೇಕಡಾ 50.69 ಮತ್ತು ಜಲ್​ ಪೈಗುರಿಯಲ್ಲಿ ಶೇಕಡಾ 50.60 ರಷ್ಟು ಮತದಾನವಾಗಿದೆ.

ಕೂಚ್ ಬೆಹಾರ್​ನಲ್ಲಿ ಸಿಎಪಿಎಫ್ ಸಿಬ್ಬಂದಿಯ 112 ತುಕಡಿಗಳನ್ನು ಇಸಿಐ ನಿಯೋಜಿಸಿದ್ದರೂ ಈ ಪಡೆಯ ಕಾರ್ಯಕ್ಷಮತೆಯ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಮೊದಲ ಹಂತದ ಮತದಾನದ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆಗಳು, ಪ್ರತಿಸ್ಪರ್ಧಿ ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚುವುದು, ಲೂಟಿ ಮಾಡುವುದು ಮತ್ತು ಕೆಲ ಪಕ್ಷದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಗಳು ಬಂದಿವೆ.

ಕೂಚ್ ಬೆಹಾರ್​ನ ಚಂದಮರಿ ಪ್ರದೇಶದಲ್ಲಿ ಗರಿಷ್ಠ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿವೆ. ಬಿಜೆಪಿ ಬೂತ್ ಅಧ್ಯಕ್ಷ ಲೋಬ್ ಸರ್ಕಾರ್ ಅವರ ಮೇಲೆ ಹಲ್ಲೆ ನಡೆದಿರುವುದರಿಂದ ಉದ್ವಿಗ್ನತೆ ಮತ್ತೂ ಹೆಚ್ಚಾಗಿದೆ. ಲೋಬ್ ಸರ್ಕಾರ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಕಲ್ಲು ತೂರಾಟದ ಘಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ತಲೆಗೆ ಗಂಭೀರ ಗಾಯಗಳಾಗಿವೆ.

ರಾಜಖೋರಾ ಪ್ರದೇಶ ಮತ್ತು ಕೂಚ್ ಬೆಹಾರ್​ನಲ್ಲಿಯೂ ಇದೇ ರೀತಿಯ ಉದ್ವಿಗ್ನತೆ ಇತ್ತು. ಈ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ನಂತರ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ತಾತ್ಕಾಲಿಕ ಶಿಬಿರ ಕಚೇರಿಗಳನ್ನು ಲೂಟಿ ಮಾಡಲಾಯಿತು. ಕೂಚ್ ಬೆಹಾರ್​ನ ಸಿತಾಲ್ಕುಚಿಯಲ್ಲಿರುವ ತೃಣಮೂಲ ಕಾಂಗ್ರೆಸ್​ನ ತಾತ್ಕಾಲಿಕ ಪಕ್ಷದ ಕಚೇರಿಯನ್ನು ಸ್ಥಳೀಯ ಬಿಜೆಪಿ ಬೆಂಬಲಿಗರು ಸುಟ್ಟುಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. 2024 ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇಂದು (ಏಪ್ರಿಲ್ 19 ರಂದು) 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ.

ಇದನ್ನೂ ಓದಿ : ನನ್ನ ಮೇಲಿನ ಆರೋಪ ಸಾಬೀತಾದರೆ ಆ ದಿನವೇ ರಾಜಕೀಯ ತೊರೆಯುತ್ತೇನೆ: ಅಣ್ಣಾಮಲೈ ಸವಾಲು - K Annamalai

ETV Bharat Logo

Copyright © 2024 Ushodaya Enterprises Pvt. Ltd., All Rights Reserved.