ETV Bharat / bharat

'ಅಪಾಯಕಾರಿ'ಯಾದ ಪಿಟ್​ಬುಲ್​, ಅಮೆರಿಕನ್​ ಬುಲ್​ಡಾಗ್​ ಸಾಕುವುದಕ್ಕೆ ನಿಷೇಧ

author img

By ETV Bharat Karnataka Team

Published : Mar 14, 2024, 7:13 AM IST

Centre recommends banning Pitbull dog: ಮಾನವರ ಮೇಲೆ ದಾಳಿ ಮಾಡುವ ವಿದೇಶಿ ನಾಯಿ ತಳಿಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಅದನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಲಿಸುವಂತೆ ಸೂಚಿಸಿದೆ.

ಪಿಟ್​ಬುಲ್
ಪಿಟ್​ಬುಲ್

ನವದೆಹಲಿ: ಸಾಕಿದ ಮಾಲೀಕರ ಮೇಲೆಯೇ ಮಾರಣಾಂತಿಕ ದಾಳಿ ನಡೆಸುವ ಪಿಟ್​ಬುಲ್​, ಅಮೆರಿಕನ್​ ಬುಲ್​ಡಾಗ್​, ರೊಟ್ಟಿವೈಲರ್​ ಸೇರಿದಂತೆ ಹಲವಾರು ನಾಯಿಯ ತಳಿಗಳನ್ನು "ಅಪಾಯಕಾರಿ" ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ವಿದೇಶಿ ನಾಯಿ ತಳಿಗಳ ಸಂತಾನೋತ್ಪತ್ತಿ, ಸಾಕುವ, ಮಾರಾಟ ಮಾಡುವುದನ್ನು ದೇಶದಲ್ಲಿ ನಿಷೇಧಿಸಿದೆ.

ಕೇಂದ್ರ ಪಶುಸಂಗೋಪನೆ ಇಲಾಖೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಮಾನವನ ಜೀವಕ್ಕೆ ಅಪಾಯ ತಂದೊಡ್ಡುವ ಪಿಟ್​ಬುಲ್​, ಅಮೆರಿಕನ್​ ಬುಲ್​ಡಾಗ್​ ಸೇರಿ ಹಲವಾರು ವಿವಿಧ ತಳಿಯ ವಿದೇಶಿ ನಾಯಿಗಳನ್ನು ಸಾಕಲು ಅನುಮತಿ ನೀಡದಂತೆ ಸೂಚಿಸಿದೆ. ಜೊತೆಗೆ ಅಂತಹ ತಳಿಗಳ ನಾಯಿಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿಷೇಧ ವಿಧಿಸಲಾಗಿದೆ.

ವಿಶೇಷವೆಂದರೆ, ಮಕ್ಕಳು, ಹಿರಿಯರ ಮೇಲೆ ಮಾರಣಾಂತಿಕ ದಾಳಿ ಮಾಡಿ ಆಕ್ರಮಣಕಾರಿ ಪ್ರವೃತ್ತಿಯ ನಾಯಿಗಳನ್ನು ಜನರು ಸಾಕುವುದಕ್ಕೆ ಅವಕಾಶ ನೀಡಬಾರದು. ನಾಯಿಗಳನ್ನು ವಿವಿಧ ಸ್ಪರ್ಧೆಗೆ ಬಳಸುವುದನ್ನೂ ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಘ (ಪೆಟಾ)ವು ಮನವಿ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.

ನಾಯಿ, ಮನುಷ್ಯ ಜೀವ ರಕ್ಷಣೆ: ಅಪಾಯಕಾರಿ ಎಂದು ಗುರುತಿಸಲಾದ ನಾಯಿ ತಳಿಗಳನ್ನು ದೇಶದಲ್ಲಿ ನಿಷೇಧ ಮಾಡಿರುವುದು, ಆ ಶ್ವಾನಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಇದು ತಡೆಯುತ್ತದೆ. ಆಕ್ರಮಣಶೀಲ ನಾಯಿಗಳನ್ನು ಸ್ಪರ್ಧೆಗಳಿಗೆ ಬಳಕೆ ಮಾಡುವುದೂ ನಿಲ್ಲುತ್ತದೆ. ಜೊತೆಗೆ ಅವುಗಳು ಮನುಷ್ಯರ ಮೇಲೆ ದಾಳಿ ಮಾಡಿ ಪ್ರಾಣ ಹಾನಿ ಮಾಡುವುದು ಇದರಿಂದ ನಿಲ್ಲುತ್ತದೆ ಎಂದು ಪೆಟಾ ಸಂಸ್ಥೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪಿಟ್​ಬುಲ್ಸ್​ ನಾಯಿಯ ಮಾರಣಾಂತಿಕ ದಾಳಿ ಘಟನೆಗಳು ಈವರೆಗೆ ದೇಶದ ಹಲವೆಡೆ ವರದಿಯಾಗಿವೆ. ಇತ್ತೀಚಿಗೆ ದೆಹಲಿಯಲ್ಲಿ ಪಿಟ್ ಬುಲ್ ಕಚ್ಚಿದ್ದರಿಂದ ವ್ಯಕ್ತಿಯೊಬ್ಬರು ಕಾಲು ಮುರಿದು 17 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ನೆರೆಯವನ ಮೇಲೆ ದಾಳಿ ಮಾಡಲು ತಾನು ಸಾಕಿದ್ದ ಪಿಟ್​​ಬುಲ್ ಅನ್ನು ಮಾಲೀಕನೊಬ್ಬ ಛೂ ಬಿಟ್ಟಿದ್ದ. ಇದರಿಂದ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದ. ಗಾಜಿಯಾಬಾದ್‌ನಲ್ಲಿ ಪಿಟ್ ಬುಲ್ ದಾಳಿಗೆ 10 ವರ್ಷದ ಮಗುವು ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು.

ಇದಲ್ಲದೆ, ಹೆಚ್ಚಿನ ಪೆಟ್​​ಶಾಪ್‌ಗಳು ಮತ್ತು ಬ್ರೀಡರ್‌ಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಪ್ರಾಣಿ ದಯಾ ಸಂಘಗಳಲ್ಲಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ನಾಯಿ ಸಾಕಣೆ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ನಿಯಮಗಳು 2018 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಯಾವ ನಾಯಿ ತಳಿಗಳಿಗೆ ನಿಷೇಧ: ಪಿಟ್​ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲೆರಿಯೊ, ಡೋಗೊ ಅರ್ಜೆಂಟಿನೋ, ಅಮೆರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ಶಫರ್ಡ್​ ಡಾಗ್ಸ್​, ಟೊರ್ನ್‌ಜಾಕ್, ಬ್ಯಾಂಡೋಗ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ, ಅಕಿತಾ, ಮಾಸ್ಟಿಫ್ಸ್, ರೊಟ್ವೀಲರ್ಸ್, ರೊಡೇಸಿಯನ್ ರಿಜ್​ಬ್ಯಾಕ್​, ವುಲ್ಫ್​ ಡಾಗ್ಸ್​, ಕೆನಾರಿಯೊ, ಅಕ್ಬಾಶ್ ಮತ್ತು ಮಾಸ್ಕೋ ಗಾರ್ಡ್​ಡಾಗ್.

ಇದನ್ನೂ ಓದಿ: ವಿದ್ಯಾರ್ಥಿಗೆ ಕಚ್ಚಿದ ಪಿಟ್​ ಬುಲ್ ನಾಯಿ: ಶ್ವಾನ ಮಾಲೀಕನಿಗೆ 5 ಸಾವಿರ ರೂ ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.