ETV Bharat / bharat

ಕಂಬಿಗಳ ಹಿಂದೆ ಕೇಜ್ರಿವಾಲ್;​ ಜೈಲಿನಿಂದ ಪತಿ ರವಾನಿಸಿದ ಸಂದೇಶ ಓದಿದ ಪತ್ನಿ! - Sunita Kejriwal

author img

By ETV Bharat Karnataka Team

Published : Apr 4, 2024, 9:49 PM IST

ದೆಹಲಿ ಜೈಲಿನಿಂದ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಇಂದು ಈ ಸಂದೇಶವನ್ನು ಓದಬೇಕಾದರೆ ಪತ್ನಿ ಸುನೀತಾ, ಕಂಬಿಗಳ ಹಿಂದೆ ಕೇಜ್ರಿವಾಲ್​ ಇರುವ ಫೋಟೋ ಮುಂದೆ ಕುಳಿತಿದ್ದರು.

Delhi: Photo of Arvind Kejriwal behind bars in background, wife Sunita reads husband's letter from Tihar.
ಕಂಬಿಗಳ ಹಿಂದೆ ಕೇಜ್ರಿವಾಲ್;​ ಜೈಲಿನಿಂದ ಪತಿ ರವಾನಿಸಿದ ಸಂದೇಶ ಓದಿದ ಪತ್ನಿ!

ನವದೆಹಲಿ: ವಿವಾದಿತ ಮದ್ಯ ನೀತಿ ಹಗರಣದಲ್ಲಿ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಿಹಾರ್​ ಜೈಲು ಸೇರಿದ್ದಾರೆ. ಆದರೆ, ಅವರು ತಮ್ಮ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಜೈಲಿನಿಂದಲೇ ಪಕ್ಷ ಮತ್ತು ಶಾಸಕರಿಗೆ ನಿರ್ದೇಶನಗಳನ್ನು ಹೊರಡಿಸುತ್ತಿದ್ದಾರೆ. ಕೇಜ್ರಿವಾಲ್​ ಬಂಧನದ ಬಳಿಕ ಪತ್ನಿ ಸುನೀತಾ ಸಾರ್ವಜನಿಕ ಜೀವನದ ಮುಂಚೂಣಿಗೆ ಬಂದಿದ್ದಾರೆ. ಪತಿ ರವಾನಿಸಿದ ಸಂದೇಶಗಳನ್ನು ಖುದ್ದು ಪತ್ನಿಯೇ ಜನರಿಗೆ ತಲುಪಿಸುತ್ತಿದ್ದಾರೆ. ಇಂದು ಸಂದೇಶ ಓದಬೇಕಾದರೆ, ಫೋಟೋವೊಂದು ಗಮನ ಸೆಳೆದಿದೆ.

ಸಿಎಂ ಕೇಜ್ರಿವಾಲ್ ಯಾವುದೇ ಹೇಳಿಕೆ ನೀಡುವಾಗ ಹಿಂಭಾಗದ ಗೋಡೆ ಮೇಲೆ ಅಂಬೇಡ್ಕರ್​ ಮತ್ತು ಭಗತ್​ ಸಿಂಗ್​ ಅವರ ಭಾವಚಿತ್ರಗಳು ಸಾಮಾನ್ಯವಾಗಿ ಇರುತ್ತಿತ್ತು. ಈಗ ಪತ್ನಿ ಸಹ ಯಾವುದೇ ಹೇಳಿಕೆ ನೀಡಬೇಕಾದರೂ, ಇದುವರೆಗೆ ಪತಿ ಕೇಜ್ರಿವಾಲ್​ ಮಾದರಿಯನ್ನೇ ಅನುಸುತ್ತಿದ್ದರು. ಆದರೆ, ಇಂದು ಅಂಬೇಡ್ಕರ್​ ಮತ್ತು ಭಗತ್​ ಸಿಂಗ್​ ಅವರ ಭಾವಚಿತ್ರಗಳ ನಡುವೆ ಗೋಡೆಯ ಮೇಲೆ ಕಂಬಿಗಳ ಹಿಂದೆ ಕೇಜ್ರಿವಾಲ್​ ಇರುವ ಫೋಟೋ ಅಳವಡಿಸಿರುವುದು ಕಂಡುಬಂದಿದೆ. ಇದೇ ಫೋಟೋ ಮುಂದೆ ಕುಳಿತು ಸುನೀತಾ ಜೈಲಿನಿಂದ ಪತಿ ಕಳುಹಿಸಿದ ಸಂದೇಶವನ್ನು ಓದಿದ್ದಾರೆ.

ಕೇಜ್ರಿವಾಲ್​ ಸಂದೇಶವೇನು?: ಕೇಜ್ರಿವಾಲ್​ ಜೈಲಿನಿಂದ ತಮ್ಮ ಪಕ್ಷದ ಎಲ್ಲ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಈ ಸಂದೇಶವನ್ನು ಓದಿದ ಸುನೀತಾ, ''ನಾನು ಜೈಲಿನಲ್ಲಿದ್ದೇನೆ. ಇದರಿಂದಾಗಿ ದೆಹಲಿಯ ಜನತೆ ಯಾವುದೇ ರೀತಿಯ ಸಮಸ್ಯೆ ಎದುರಾಗಬಾರದು. ಪ್ರತಿ ಶಾಸಕರು ಪ್ರತಿನಿತ್ಯ ತಮ್ಮ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂಬುವುದಾಗಿ ಕೇಜ್ರಿವಾಲ್​ ಹೇಳಿದ್ದಾರೆ'' ಎಂದು ತಿಳಿಸಿದರು.

ಮುಂದುವರೆದು, ''ದೆಹಲಿಯ ಎರಡು ಕೋಟಿ ಜನರು ಕೂಡ ನನ್ನ ಕುಟುಂಬವೇ. ಜನರಿಗೆ ಏನೇ ಸಮಸ್ಯೆಗಳಿದ್ದರೂ ಪರಿಹರಿಸಿ. ನಾನು ಕೇವಲ ಸರ್ಕಾರಿ ಇಲಾಖೆಗಳ ಸಮಸ್ಯೆಗಳನ್ನು ಮಾತ್ರ ಪರಿಹರಿಸುವ ಬಗ್ಗೆ ಮಾತನಾಡುತ್ತಿಲ್ಲ. ಉಳಿದ ಇತರೆಲ್ಲ ಸಮಸ್ಯೆಗಳನ್ನೂ ಪರಿಹರಿಸಲು ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ನನ್ನ ಕುಟುಂಬದಲ್ಲಿ ಯಾರಿಗೂ ತೊಂದರೆ ಆಗಬಾರದು. ದೇವರು ಎಲ್ಲರಿಗೂ ಆಶೀರ್ವಾದ ಮಾಡಲಿ'' ಎಂದು ಕೇಜ್ರಿವಾಲ್​ ಸಂದೇಶ ರವಾನಿಸಿದ್ದಾರೆ ಎಂದು ಪತ್ನಿ ಸುನೀತಾ ವಿವರಿಸಿದರು.

ಐಪಿಎಲ್ ಅರ್ಜಿ ವಜಾ: ಮತ್ತೊಂದೆಡೆ, ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ನಿರಾಕರಿಸಿದೆ. ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರದ ಪರಿಸ್ಥಿತಿಯು ಸಾಂವಿಧಾನಿಕ ನಂಬಿಕೆಯ ಉಲ್ಲಂಘನೆಯಾಗಿದೆ ಎಂದು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಕೆಲವೊಮ್ಮೆ ವೈಯಕ್ತಿಕ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಅಧೀನವಾಗಿರಬೇಕು. ಆದರೆ, ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕುವುದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಗಿದೆ ಎಂದು ಹೇಳಿತು. ಇದೇ ವೇಳೆ, ಇದು ಪ್ರಾಯೋಗಿಕ ಸಮಸ್ಯೆ, ಕಾನೂನು ಸಮಸ್ಯೆಯಲ್ಲ. ಈ ವಿಷಯದಲ್ಲಿ ನ್ಯಾಯಾಂಗ ಹಸ್ತಕ್ಷೇಪ ನಿರೀಕ್ಷಿಸುವ ಬದಲು ಸಾಂವಿಧಾನಿಕ ಅಧಿಕಾರಿಗಳಿಂದ ಪರಿಹಾರ ಪಡೆಯುವಂತೆ ಅರ್ಜಿದಾರರಿಗೆ ಕೋರ್ಟ್​ ಸಲಹೆ ನೀಡಿತು. ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಬಂಧನದ ಬಳಿಕ 4.5 ಕೆಜಿ ತಗ್ಗಿದರೇ ಕೇಜ್ರಿವಾಲ್?; ದೆಹಲಿ ಸಿಎಂ ಆರೋಗ್ಯವನ್ನು ಬಿಜೆಪಿ ಅಪಾಯಕ್ಕೆ ತಳ್ಳಿದೆ ಎಂದ ಆಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.