ETV Bharat / state

ಕಲ್ಲಂಗಡಿ, ಕಬ್ಬಿನ ಹಾಲು ಸೇವಿಸಿ ವಿಭಿನ್ನವಾಗಿ ಹೊಸ ವರ್ಷಾಚರಣೆ

author img

By

Published : Jan 2, 2023, 2:14 PM IST

Updated : Jan 2, 2023, 2:19 PM IST

ಕೇಕ್ ಬದಲು ಕಲ್ಲಂಗಡಿ, ಜ್ಯುಸ್ ಬದಲು ಕಬ್ಬಿನ ಹಾಲು. ಇದು ಟೋಕ್ರಿ ಕೋಲಿ ಸಮಾಜದ ವಿಭಿನ್ನ ಹೊಸ ವರ್ಷಾಚರಣೆ.

Different new year greetings from Tokri Koli Samaj
ಕಲ್ಲಂಗಡಿ, ಕಬ್ಬಿನ ಹಾಲು ಸೇವಿಸಿ ವಿಭಿನ್ನವಾಗಿ ಹೊಸ ವರ್ಷ ಆಚರಣೆ

ಟೋಕ್ರಿ ಕೋಲಿ ಸಮಾಜದಿಂದ ವಿಭಿನ್ನ ಹೊಸ ವರ್ಷಾಚರಣೆ

ಯಾದಗಿರಿ: ನಗರದ ಹಳೆ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಸಮಾಜದ ಮುಖಂಡರು ಕಲ್ಲಂಗಡಿ ಕಟ್ ಮಾಡಿ, ಕಬ್ಬಿನ ಹಾಲು ಸೇವಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.

ಹೊಸ ವರ್ಷ ಹಿನ್ನೆಲೆಯಲ್ಲಿ ಕಾರ್ಯಾಲಯಕ್ಕೆ ಹಸಿರು ತೋರಣಗಳಿಂದ ಸಿಂಗರಿಸಿ, ಸುತ್ತಲೂ ಬಣ್ಣ ಬಣ್ಣದಿಂದ ವಿದ್ಯುತ್ ದೀಪಗಳನ್ನು ಅಳವಡಿಸಿ ವಿನೂತನ ಹಾಗೂ ವಿಭಿನ್ನವಾಗಿ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಭಾರತೀಯ ಆಹಾರ ಪದ್ಧತಿಯಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ. ಪಾಶ್ಚಾತ್ಯರ ಪದ್ಧತಿಗಳ ಅಂಧಾನುಕರಣೆಯನ್ನು ಕೈಬಿಟ್ಟು ಸ್ವಂತಿಕೆಯ ದೇಶಿ ಪದ್ಧತಿಗಳನ್ನು ಅನುಸರಿಸಬೇಕು. ಇದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಆಯೋಜಕರು ತಿಳಿಸಿದರು.

ಯುಗಾದಿಗೆ ನಮ್ಮದು ಹೊಸ ವರ್ಷ. ಅಂದು ನಮ್ಮ ದೇಶದ ಪದ್ಧತಿಯಂತೆ ಬೇವು ಬೆಲ್ಲ ಸೇವಿಸಿ ವರ್ಷಾಚರಣೆ ಮಾಡುವುದು ಸೌಹರ್ದತೆಯನ್ನು ಬೆಳೆಸುತ್ತದೆ. ರೈತರು ಬೆಳೆದ ಹಣ್ಣು-ಹಂಪಲನ್ನು ಸೇವಿಸಿ ಆಚರಣೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ರೈತರಿಗೆ ಬೆಂಬಲ ಕೊಟ್ಟಂತಾಗುತ್ತದೆ. ಕೊರೊನಾ ಮತ್ತು ಅತಿವೃಷ್ಟಿಯಿಂದ ಕಂಗಾಲಾಗಿರುವ ರೈತ ಕೂಡ ತಾನು ಬೆಳೆದ ಬೆಳೆಗೆ ಬೆಲೆ ಸಿಕ್ಕಂತಾಗುತ್ತದೆಂದು ಖುಷಿಪಡುತ್ತಾನೆ. ಇದು ಈ ಕಾರ್ಯಕ್ರಮ ಆಯೋಜನೆಯ ಉದ್ದೇಶವಾಗಿದೆ ಎಂದರು.

ಹೊಸ ವರ್ಷದಲ್ಲಿ ಮನಬಂದಂತೆ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸಿ ಆರೋಗ್ಯ ಹಾಳು ಮಾಡಿಕೊಳ್ಳುವುದು ನಮ್ಮ ಪದ್ಧತಿಯಲ್ಲ. ಪಾಶ್ಚಾತ್ಯ ಪದ್ಧತಿ ಧಿಕ್ಕರಿಸಿ ಭಾರತೀಯ ಪದ್ಧತಿಯನ್ನು ಅಳವಡಿಸಿಕೊಂಡು ಮುಂದಿನವರೆಗೂ ತಿಳಿಸಬೇಕು. ನಮ್ಮ ಭಾರತದ ಪರಂಪರೆ ಬಿಂಬಿಸುವಂತೆ ಆರೋಗ್ಯಕರ ಹಣ್ಣು ಹಂಪಲುಗಳನ್ನು ಸೇವಿಸಿ ಸುಖಶಾಂತಿ ನೆಮ್ಮದಿ ಹಾಗೂ ಹರ್ಷದಿಂದ ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸುವುದು ಬಹಳ ಒಳ್ಳೆಯದು. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ಉಮೇಶ ಕೆ ಮುದ್ನಾಳ ಕರೆ ಕೊಟ್ಟರು.

ಹೊಸ ವರ್ಷವನ್ನು ಕೇಕ್ ಕಟ್ ಮಾಡಿ ಆಚರಿಸುವ ಬದಲು ಹಣ್ಣುಗಳನ್ನು ಕಟ್ ಮಾಡಿ ಹಾಗೂ ಜ್ಯುಸ್ ಬದಲಾಗಿ ಕಬ್ಬಿನ ಹಾಲು ಸೇವಿಸಿ ಆಚರಿಸಿದ್ದೇವೆ. ಆಚರಣೆಯಲ್ಲಿ ಯಾವುದೇ ಮೋಜು ಮಸ್ತಿಗೆ ಹೋಗದೆ ಸರಳವಾಗಿ ಆಚರಿಸಿ ಆರೋಗ್ಯದ ಕಡೆ ಗಮನಕೊಡಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹರ್ಷಿತಾ ಯು ಕೊಳ್ಳಿ ಸಲಹೆ ನೀಡಿದರು.

ಇದನ್ನೂ ಓದಿ:ಅಬಕಾರಿ ಇಲಾಖೆಗೆ ಕಿಕ್ಕೇರಿಸಿದ ಹೊಸ ವರ್ಷ.. ಲಕ್ಷಾಂತರ ಲೀಟರ್​ ಮದ್ಯ ಮಾರಾಟ, ನೂರಾರು ಕೋಟಿ ಆದಾಯ

Last Updated : Jan 2, 2023, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.