ETV Bharat / state

'ನಮಗೆಲ್ಲಾ ಸರ್ಕಾರದ ಪರಿಹಾರದ ಹಣವೇ ಗತಿ...': ಇದು ಯಾದಗಿರಿ ರೈತರ ಅಳಲು

author img

By

Published : Oct 13, 2020, 3:47 PM IST

ಕಳೆದ ವರ್ಷವೂ ಕೂಡಾ ಇದೇ ರೀತಿ ಬೆಳೆ ಹಾನಿಗೊಳಗಾಗಿ ಮಾಡಿದ ಸಾಲ ತೀರಿಲ್ಲ. ಈ ವರ್ಷವಾದ್ರೂ ಉತ್ತಮ ಬೆಳೆ ಬರಲಿ ಅಂತ ಸಾಲ ಮಾಡಿ ರಸಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿ ಬೆಳೆ ಬೆಳೆದಿದ್ದೆವು. ಆದ್ರೀಗ ಮತ್ತೆ ಹಳೆಯ ಪರಿಸ್ಥಿತಿಯೇ ಉದ್ಭವಿಸಿರುವುದರಿಂದ ನಮಗೆಲ್ಲಾ ಸರ್ಕಾರದ ಪರಿಹಾರವೇ ಗತಿ ಎನ್ನುತ್ತಾರೆ ಇಲ್ಲಿನ ರೈತರು.

crop-destruction-in-yadagiri
ಯಾದಗಿರಿ

ಯಾದಗಿರಿ: ಜಿಲ್ಲೆಯ ರೈತರಿಗೆ ಮಳೆ ಬಂದರೂ ಶಾಪ, ಬಾರದಿದ್ದರೂ ಶಾಪ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಕಾರಣ, ಇಲ್ಲಿಯವರೆಗೆ ಬರಗಾಲ ಎದುರಿಸಿ ಹೈರಾಣಾಗಿದ್ದ ಅನ್ನದಾತ ಇದೀಗ ವರುಣನ ಆರ್ಭಟಕ್ಕೆ ಸುಸ್ತಾಗಿ ಹೋಗಿದ್ದಾನೆ.

ಬೆಳೆ ನಷ್ಟ ಅನುಭವಿಸಿದ ರೈತನ ಅಳಲು, ಅಧಿಕಾರಿಗಳು ಹೇಳುವುದೇನು?

ಸುರಪುರ, ಶಹಾಪುರ ವಡಗೇರಾ ತಾಲೂಕಿನ ಹಲವು ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ವಿವಿಧ ಬೆಳೆಗಳು ವರುಣನ ಅವಾಂತರದಿಂದಾಗಿ ನೆಲಕಚ್ಚಿವೆ. ಇದು, ರೈತರ ವರ್ಷದ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಕಳೆದ ವರ್ಷ ಕೂಡ ಕೃಷ್ಣಾ ನದಿ ಪ್ರವಾಹದಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು, ಪರಿಹಾರ ಹಣ ಪಡೆಯುವಲ್ಲಿ ಸಫಲನಾಗಿಲ್ಲ. ಹೀಗಿರುವಾಗ ಈ ವರ್ಷವೂ ಅನಾಹುತಗಳು ಅನುಕ್ರಮವಾಗಿ ಮುಂದುವರೆಯುತ್ತಿದ್ದು ರೈತರು ಅಸಹಾಯಕರಾಗಿ ತಲೆ ಮೇಲೆ ಕೈ ಇಟ್ಟು ಕುಳಿತಿದ್ದಾರೆ.

ಸರ್ಕಾರದ ಪರಿಹಾರವೇ ಗತಿ

ಧಾರಾಕಾರ ಮಳೆಯಿಂದ ಜಮೀನಿನಲ್ಲಿ ರೈತರಿಗೆ ಕಾಲಿಡಲೂ ಆಗುತ್ತಿಲ್ಲ. ಬೆಳೆದ ಬೆಳಗಳು ಸಂಪೂರ್ಣ ನೀರಲ್ಲಿ ಮುಳುಗಿ ಕೊಳೆತು ಹೋಗುತ್ತಿವೆ. ಇದೆಲ್ಲದರಿಂದ ಕಂಗಾಲಾಗಿರುವ ರೈತ, 'ಕಳೆದ ವರ್ಷ ಕೂಡಾ ಇದೇ ರೀತಿಯ ಬೆಳೆ ಹಾನಿಗೊಳಗಾಗಿ ಮಾಡಿದ ಸಾಲ ತೀರಿಲ್ಲ. ಈ ವರ್ಷವಾದ್ರೂ ಉತ್ತಮ ಬೆಳೆ ಬರಲಿ ಅಂತ ಸಾಲ ಮಾಡಿ ರಸಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿ ಬೆಳೆ ಬೆಳೆದಿದ್ದೆವು. ಆದ್ರೀಗ ಮತ್ತೆ ಹಳೆಯ ಪರಿಸ್ಥಿತಿಯೇ ಉದ್ಭವಿಸಿರುವುದರಿಂದ ನಮಗೆಲ್ಲಾ ಸರ್ಕಾರದ ಪರಿಹಾರವೇ ಗತಿ' ಎನ್ನುತ್ತಿದ್ದಾರೆ.

ಅಪಾರ ಪ್ರಮಾಣದ ಬೆಳೆ ನಷ್ಟ

ಮುಂಗಾರು ಹಂಗಾಮಿನಲ್ಲಿ‌ 3 ಲಕ್ಷದ 84 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದ್ದು, ಇದರಲ್ಲಿ 18 ಸಾವಿರದ 562 ಹೆಕ್ಟೇರ್‌ನಷ್ಟು ಬೆಳೆಹಾನಿ ಆಗಿದೆ ಅಂತ ಅಂದಾಜಿಸಲಾಗಿದೆ.

ಈ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಮತ್ತು ಹತ್ತಿ ಬೆಳೆ ನಷ್ಟವಾಗಿದೆ. 7 ಸಾವಿರದ 450 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ಹಾನಿಯಾಗಿದ್ದರೆ, 8 ಸಾವಿರದ 368 ಹೆಕ್ಟೇರ್‌ನಷ್ಟು ತೊಗರಿ ಬೆಳೆ ಹಾನಿಯಾಗಿದೆ. ಈಗಾಗಲೇ 50% ಪ್ರತಿಶತ ಸಮೀಕ್ಷೆ ಮುಗಿಸಲಾಗಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸರ್ವೇ ಕಾರ್ಯ ವಿಳಂಬವಾಗುತ್ತಿದೆ. ಒಂದು ವಾರದ ಒಳಗೆ ಬೆಳೆ ನಷ್ಟ ಸರ್ವೇ ಕಂಪ್ಲೀಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಇಷ್ಟೆಲ್ಲಾ ಅನಾಹುತಗಳು ಸಂಭವಿಸಿ, ರೈತರು ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೆ ಬೇಜಾವ್ದಾರಿತನ ಪ್ರದರ್ಶಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.