ವಿಜಯಪುರ: ಅದ್ಧೂರಿಯಾಗಿ ಜರುಗಿದ ಸೋಮೇಶ್ವರ ದೇವರ ಜಾತ್ರೆ

author img

By

Published : Dec 1, 2022, 12:24 PM IST

Lord Someshwara fair was held grandly

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಆರಾಧ್ಯದೈವ ಸೋಮೇಶ್ವರ ದೇವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನದ ಎದುರಿಗೆ ಕೊಳಲುವಾದನ, ಶಂಖ ಊದುವ ಮೂಲಕ ಬಿಂಗಿಯವರು ಸೋಮೇಶ್ವರನನ್ನು ಆಹ್ವಾನಿಸಿಕೊಳ್ಳುವುದು ಸಂಪ್ರದಾಯ.

ವಿಜಯಪುರ: ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆಯ ಮೂಲಕ ಪ್ರಸಿದ್ಧಿ ಪಡೆದಿರುವ ಸೋಮೇಶ್ವರ ದೇವರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು. ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಆರಾಧ್ಯದೈವ ಸೋಮೇಶ್ವರ ದೇವರ ಜಾತ್ರೆ ವಿಶಿಷ್ಟ ಆಚರಣೆಗಳ ಮೂಲಕವೂ ಗಮನ ಸೆಳೆಯುತ್ತದೆ.

ಬೆಳಗ್ಗೆ ಗ್ರಾಮದ ಪ್ರಮುಖ ದೇಸಾಯಿಯವರು ಮನೆಯಿಂದ ದೇವಸ್ಥಾನದವರೆಗೆ ವಿಶೇಷ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಆಗಮಿಸುತ್ತಾರೆ. ಒಂದು ತಿಂಗಳ ಕಾಲ ವೃತಾಚರಣೆ ಮಾಡುವ ಮೂಲಕ ಬಿಂಗಿಯವರು ಎಂದು ಕರೆಸಿಕೊಳ್ಳುವವರು ಈ ಜಾತ್ರೆಯ ಮುಂದಾಳತ್ವವನ್ನು ವಹಿಸಿರುತ್ತಾರೆ. ದೇವಸ್ಥಾನದ ಎದುರಿಗೆ ಕೊಳಲುವಾದನ, ಶಂಖ ಊದುವ ಮೂಲಕ ಬಿಂಗಿಯವರು ಸೋಮೇಶ್ವರನನ್ನು ಆಹ್ವಾನಿಸಿಕೊಳ್ಳುತ್ತಾರೆ.

ಅದ್ಧೂರಿಯಾಗಿ ಜರುಗಿದ ಸೋಮೇಶ್ವರ ದೇವರ ಜಾತ್ರೆ

ಹೀಗೆ ದೇವರನ್ನು ಆರಾಧಿಸಿ ದೇವಸ್ಥಾನದ ಮುಂದಿರುವ ದೇವಗಲ್ಲಿಗೆ ಜೋರಾಗಿ ಬಂದು ತಮ್ಮ ತಲೆಯನ್ನು ಜಜ್ಜಿ ಹೋಗುತ್ತಾರೆ. ಪ್ರತಿಯೊಬ್ಬರೂ ತಮ್ಮ ತಲೆಯನ್ನು ಕಲ್ಲಿಗೆ ಮೂರು ಬಾರಿ ಜಜ್ಜುವುದು ಇಲ್ಲಿಯ ಪ್ರಮುಖ ಸಂಪ್ರದಾಯ. ಇನ್ನೂ ಕೆಲವರು ಕಬ್ಬಿಣದ ಸರಪಳಿಯಿಂದ ಬೆನ್ನಿಗೆ ಹೊಡೆದುಕೊಳ್ಳುವುದು, ಚೂಪಾದ ಜಂಬೆಯಿಂದ ಹೊಟ್ಟೆಗೆ ಚುಚ್ಚಿಕೊಳ್ಳುವುದು ಕೂಡಾ ವಿಶೇಷವಾಗಿದೆ. ಹೀಗೆ ಹರಕೆ ತೀರಿಸಿದಂತಹ ಈ ಬಿಂಗಿಯರಿಗೆ ಒಂದು ಸಣ್ಣ ಗಾಯವೂ ಕೂಡಾ ಆಗದೇ ಇರುವುದು ಸೋಮೇಶ್ವರನ ದೈವಶಕ್ತಿಗೆ ಸಾಕ್ಷಿ.

ಇದಾದ ಬಳಿಕ ಸೋಮೇಶ್ವರ ದೇವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಡಿಯಿಂದ ಭಕ್ತರು ತಂದಂತಹ ನೈವೇದ್ಯವನ್ನು ಬಿಂಗಿಯರಿಗೆ ಅರ್ಪಿಸುತ್ತಾರೆ. ಈ ನೈವೇದ್ಯ ಕೂಡಾ ವಿಶೇಷತೆ ಒಳಗೊಂಡಿರುತ್ತದೆ. ರೊಟ್ಟಿ, ಪಲ್ಯ, ಅನ್ನ, ಹುಗ್ಗಿ, ಹೋಳಿಗೆ ಇತರೆ ಸಿಹಿ ಖಾದ್ಯಗಳು ಸೇರಿದಂತೆ ಏನೇ ನೈವೇದ್ಯ ಮಾಡಿದರೂ ಅದನ್ನು ಒಟ್ಟು ಮಿಶ್ರಣ ಮಾಡಿ ಬಿಂಗಿಗಳಿಗೆ ಉಣಬಡಿಸುವುದು ವಾಡಿಕೆ.

ಇದನ್ನೂ ಓದಿ: ಹಲಕಟ್ಟಿ ವೀರಭದ್ರೇಶ್ವರ ಜಾತ್ರೆ: ಸರಪಳಿ ತುಂಡರಿಸಿ ಭಕ್ತಿ ಸಮರ್ಪಣೆ

ಸೋಮೇಶ್ವರ ದೇವರಲ್ಲಿ ಭಕ್ತರು ಹರಕೆ ಕಟ್ಟಿಕೊಂಡರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ಪ್ರಬಲ ನಂಬಿಕೆ. ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಷ್ಟೇ ಅಲ್ಲ, ನೆರೆ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿ ಸೋಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.