ಹಲಕಟ್ಟಿ ವೀರಭದ್ರೇಶ್ವರ ಜಾತ್ರೆ: ಸರಪಳಿ ತುಂಡರಿಸಿ ಭಕ್ತಿ ಸಮರ್ಪಣೆ

author img

By

Published : Nov 20, 2022, 12:20 PM IST

Updated : Nov 20, 2022, 1:24 PM IST

Halakatti Virbhadreshwar fair

ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವಂತೆ ಈ ಬಾರಿಯೂ ವಿಶೇಷ ಪೂಜೆ, ಕೈಂಕರ್ಯಗಳ ಜೊತೆ ವೀರಭದ್ರೇಶ್ವರ ಜಾತ್ರೆ ನಡೆಯಿತು‌.

ಕಲಬುರಗಿ: ವೀರಭದ್ರನ ವೀರಗಾಸೆ ವಿರಾವೇಶ.. ಖಡೇ ಖಡೇ ರುದ್ರ ಮಹಾರುದ್ರ ಎಂಬ ಒಡಪುಗಳು.. ಏಳುಕೋಟೆ ಒಡೆಯ ಮೈಲಾರಲಿಂಗನ ಸರಪಳಿ ತುಂಡರಿಸುವ ಪವಾಡ.. ನಿಗಿ ನಿಗಿ ಕೆಂಡದಲ್ಲಿ ಕೆಂಡ ಹಾಯುವ ದೃಶ್ಯ.. ಇವೆಲ್ಲ ಕಲಬುರಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಕಂಡುಬಂತು.

ವೀರಭದ್ರ ದೇವರ ಜಾತ್ರೆಯೆಂದರೆ ಅಲ್ಲಿ ಪುರವಂತರ ಖಡಕ್ಕಾದ ಒಡಪುಗಳು, ಮೈ ಕೈ ಕಪಾಳಿಗೆ ಶಸ್ತ್ರಾಸ್ತಗಳ ಧಾರಣೆ, ಕೆಂಡ ಹಾಯುವಂತ ಭಕ್ತಿ ಸಮರ್ಪಣೆ ಕಂಡುಬರುತ್ತದೆ. ಅದರಂತೆ ಕಲ್ಯಾಣ ನಾಡಿನ ಜನರ ಆರಾಧ್ಯದೈವ ಹಳಕಟ್ಟಿ ವೀರಭದ್ರೇಶ್ವರ ದೇವರ ಜಾತ್ರೆ ಅಬ್ಬರ ಜೋರಾಗಿತ್ತು.

ಹಲಕಟ್ಟಿ ವೀರಭದ್ರೇಶ್ವರ ಜಾತ್ರೆ

ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ದೇವಸ್ಥಾನದ ಸಂಪ್ರದಾಯದಂತೆ ಈ ಬಾರಿಯೂ ವಿಶೇಷ ಪೂಜೆ, ಕೈಂಕರ್ಯಗಳ ಜೊತೆ ವೀರಭದ್ರೇಶ್ವರ ಜಾತ್ರೆ ನೆರವೇರಿದೆ. ವೀರಾವೇಶದಿಂದ ಪುರವಂತರು ಒಡಪು ಹೇಳುತ್ತಾ ಶಸ್ತ್ರಧಾರಣೆ ಮಾಡಿದರು. ವೀರಭದ್ರೇಶ್ವರ ದೇವರ ಪಲ್ಲಕ್ಕಿ ಹೊತ್ತವರು ಅಗ್ನಿ ದಾಟಿದರು. ಜಾತ್ರೆಯಲ್ಲಿ ಭಂಡಾರದ ಒಡೆಯ ಮೈಲಾರಲಿಂಗೇಶ್ವರ ಸರಪಳಿ ಹರಿಯುವ ದೃಶ್ಯ ಗಮನ ಸೆಳೆಯಿತು.

ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ನೆನಪಿಗೆ ನಡೆಯುವ ಸರಪಳಿಯನ್ನು ಕಾಯಕ ಭಂಡಾರ ಓಕುಳಿಯಲ್ಲಿ ಮಿಂದೆದ ವಗ್ಗಯ್ಯಗಳು ತುಂಡರಿಸಿದರು. ದೇವಸ್ಥಾನ ಆವರಣದಲ್ಲಿ ಕಂಬಕ್ಕೆ ಕಟ್ಟಿದ್ದ ಸರಪಳಿ ಕೈಯಿಂದ ಜಟಕಿ ಹೊಡೆದು ಹರಿಯುವ ಮೂಲಕ ಭಕ್ತಿ ಪರಕಾಷ್ಠೆ ತೋರಿದರು. ಕುಂಬ ಮೆರವಣಿಗೆ ಹಾಗೂ ಚೌಡಮ್ಮ ದೇವಿ ಹಾಡು ಭಕ್ತರ ಭಕ್ತಿಯನ್ನು ಇನ್ನಷ್ಟು ಇಮ್ಮಡಿಗೊಳ್ಳುವಂತೆ ಮಾಡಿತು.

ಜಾತ್ರೆಯಲ್ಲಿ ಸೇರಿದ ಅಪಾರ ಸಂಖ್ಯೆಯ ಭಕ್ತಗಣದ ಜೈ ಘೋಷದ ಮಧ್ಯೆ ವೀರಭದ್ರ ದೇವರ ರಥೋತ್ಸವ ಜರುಗಿತು. ಗ್ರಾಮದ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಮುನೀಂದ್ರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥ ಪ್ರವೇಶ ಮಾಡಿದರು. ಶ್ರೀಗಳು ರಥ ಏರಿದ ಬಳಿಕ ಶಂಖನಾದ ಮೊಳಗಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಗುವಾಗ ಕಾರಿಕು ನಾರು, ಬಾಳೆಕಾಯಿಗಳನ್ನು ಎಸೆದು ಭಕ್ತರು ದೇವರಿಗೆ ಭಕ್ತಿ ಅರ್ಪಿಸಿದರು.

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕವಲ್ಲದೆ ಹಲವು ಜಿಲ್ಲೆಗಳು, ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ: ಕಾರವಾರದಲ್ಲೊಂದು ವಿಭಿನ್ನ ಬಲೂನ್ ಜಾತ್ರೆ: ಬಿಸಿ ಗಾಳಿಯಲ್ಲಿ ತೇಲಾಡುವ ಬೃಹತ್ ಬಲೂನ್

Last Updated :Nov 20, 2022, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.