ETV Bharat / state

ನೌಕಾನೆಲೆಯಿಂದ ಗುಡ್ಡ ಕೊರೆದು ರಸ್ತೆ ಕಾಮಗಾರಿ: ಕಾರವಾರದ ನಿವಾಸಿಗಳಲ್ಲಿ ಆತಂಕ

author img

By

Published : Jan 22, 2023, 12:37 PM IST

Karwar
ನೌಕಾನೆಲೆಯಿಂದ ಬೃಹತ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ

ನೌಕಾನೆಲೆಯಿಂದ ಬೃಹತ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗುಡ್ಡದ ಪಕ್ಕದಲ್ಲೇ ವಾಸವಾಗಿರುವ ನೂರಾರು ಕುಟುಂಬಗಳು ಭೀತಿಯಲ್ಲಿವೆ.

ಬೃಹತ್ ಗುಡ್ಡ ಕೊರೆದು ರಸ್ತೆ ನಿರ್ಮಾಣ: ನೌಕಾನೆಲೆ ವಿರುದ್ಧ ಜನಾಕ್ರೋಶ

ಕಾರವಾರ (ಉತ್ತರ ಕನ್ನಡ) : ದೇಶದ ಅತಿದೊಡ್ಡ ನೌಕಾನೆಲೆ ಎಂದು ಪ್ರಸಿದ್ಧಿ ಪಡೆದಿರುವ 'ಕದಂಬ ನೌಕಾನೆಲೆ' ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಅರಗಾ ಗ್ರಾಮದಲ್ಲಿದೆ. ಈ ನೌಕಾನೆಲೆ ನಿರ್ಮಾಣಕ್ಕೆ ಸಾವಿರಾರು ಕುಟುಂಬಗಳು ತಮ್ಮ ಮನೆ, ಜಮೀನು ನೀಡಿ ನಿರಾಶ್ರಿತರಾಗಿವೆ. ಕೃಷಿ ಭೂಮಿ ಬಿಟ್ಟುಕೊಟ್ಟು ರೈತರು ಹಾಗೂ ಸಮುದ್ರ ಭಾಗವನ್ನು ಬಿಟ್ಟುಕೊಟ್ಟು ಹಲವಾರು ಮೀನುಗಾರರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ದೇಶದ ಭದ್ರತಾ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾನೆಲೆ ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನೂ ಪಡೆದಿದೆ. ಆದರೆ ಈಗ ನಿರಾಶ್ರಿತರು ವಾಸ ಮಾಡುತ್ತಿರುವ ಕಾರವಾರ ತಾಲೂಕಿನ ಬೈತಖೋಲ್ ಗುಡ್ಡದ ಬಳಿ ಬೃಹತ್ ಗಾತ್ರದ ಗುಡ್ಡ ಕೊರೆದು ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಇದು ಸ್ಥಳೀಯರ ನೆಮ್ಮದಿ ಕೆಡಿಸಿದೆ.

ಕಾಮಗಾರಿ ಸ್ಥಗಿತಕ್ಕೆ ಆಗ್ರಹ: ತಾಲೂಕಿನ ಬೈತಖೋಲ್ ಭೂದೇವಿ ಗುಡ್ಡ ವ್ಯಾಪ್ತಿಯ ವಾಚ್ ಟವರ್​​ಗೆ ಸಂಪರ್ಕ ಕಲ್ಪಿಸಲು ಬೃಹತ್ ಗುಡ್ಡವನ್ನು ಕೊರೆದು ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದೊಂದು ತಿಂಗಳಿಂದ ನಿರಂತರವಾಗಿ ಕೆಸಲ ಸಾಗುತ್ತಿದ್ದು ಇದೀಗ ಗುಡ್ಡದ ಬುಡದಲ್ಲಿರುವ ನೂರಾರು ನಿವಾಸಿಗಳಲ್ಲಿ ನಡುಕ ಶುರುವಾಗಿದೆ. ಕಾರವಾರ ಪರಿಸರ ಸೂಕ್ಷ್ಮ ಪ್ರದೇಶ. ಇಂತಹ ಪ್ರದೇಶದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುವುದರಿಂದ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದು, ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿದ್ದಾರೆ.

ಚುನಾವಣೆ ಬಹಿಷ್ಕಾರ ಎಚ್ಚರಿಕೆ: 2009ರಲ್ಲಿ ನೌಕಾನೆಲೆಯಿಂದ ಇದೇ ಪ್ರದೇಶದಲ್ಲಿ ಗುಡ್ಡ ತೆರವು ಮಾಡಿದಾಗ ಗುಡ್ಡದ ನೀರು ಹರಿದು ಹೋಗಲು ಸಾಧ್ಯವಾಗದೆ ಮಳೆಗಾಲದಲ್ಲಿ ಗುಡ್ಡ ಕುಸಿದು 8-10 ಮನೆಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಯಾವುದೇ ಪರವಾನಿಗೆ ಇಲ್ಲದೆ ದೇಶದ ರಕ್ಷಣೆಯ ಕಾರಣ ನೀಡಿ ಗುಡ್ಡ ತೆರವು ಮಾಡುತ್ತಿದ್ದಾರೆ. ಈ ರೀತಿ ಅವೈಜ್ಞಾನಿಕ ಕಾಮಗಾರಿ ಮಾಡಿ ಅವಘಡಗಳು ಸಂಭವಿಸಿದ್ದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಲಿದೆ. ಜನರ ಪ್ರಾಣಕ್ಕೆ ಅಪಾಯವಿದ್ದು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಈ ಬಗ್ಗೆ ಸಭೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಲು ಅಗತ್ಯ ಕ್ರಮ‌ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಪ್ರಾಣ ರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯನ್ನೂ ಬಹಿಷ್ಕರಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ನೌಕಾನೆಲೆ ವಿರುದ್ಧ ಜನಾಕ್ರೋಶ: ಜನವಸತಿ ಪ್ರದೇಶದ ಬಳಿ ನೌಕಾನೆಲೆಯಿಂದ ಗುಡ್ಡ ಕೊರೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಹಲವು ಕಡೆ ಗುಡ್ಡ ಕುಸಿಯುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಆಗ್ರಹಿಸಿದ್ದಾರೆ.

"ದೇಶದ ರಕ್ಷಣೆ ನೆಪದಲ್ಲಿ ಅವೈಜ್ಞಾನಿಕವಾಗಿ ಬೃಹತ್ ಗುಡ್ಡ ಕೊರೆದು ಸ್ಥಳೀಯ ನಿವಾಸಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಗಂಭೀರತೆ ತಿಳಿದು ಬಗೆಹರಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ"- ಪ್ರೀತಂ ಮಾಸೂರಕರ್, ಬೈತಖೋಲ್ ನಿರಾಶ್ರಿತರ ಸಂಘದ ಅಧ್ಯಕ್ಷ

ಇದನ್ನೂ ಓದಿ: ಜೀವ ಒತ್ತೆ ಇಟ್ಟು ಪ್ರಾಣ ರಕ್ಷಣೆ: ಪ್ರವಾಸಿಗರಿಗೆ ಆಪತ್ಭಾಂದವರು ಈ ಲೈಫ್​​ ಗಾರ್ಡ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.