ETV Bharat / state

ರಂಗು ಕಳೆದುಕೊಂಡ ಜಿಲ್ಲಾ ರಂಗಮಂದಿರ: ಅನಾಹುತ ಸಂಭವಿಸುವ ಮುನ್ನ ಆಗಬೇಕಿದೆ ಸರ್ಜರಿ

author img

By ETV Bharat Karnataka Team

Published : Dec 3, 2023, 10:51 PM IST

ಕಾರವಾರ
ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಂಗಮಂದಿರ ಅವ್ಯವಸ್ಥೆಯ ಆಗರವಾಗಿದೆ.

ಸ್ಥಳೀಯರಾದ ನಾಗರಾಜ ಹರಪನಹಳ್ಳಿ ಅವರು ಮಾತನಾಡಿದರು

ಕಾರವಾರ (ಉತ್ತರ ಕನ್ನಡ) : ಕಡಲ ನಗರಿ ಕಾರವಾರ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ. ಕಾರವಾರದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಸರ್ಕಾರಿ ಕಾರ್ಯಕ್ರಮಗಳು ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿಯೇ ನಡೆಯುತ್ತದೆ. ಆದರೆ ಇದೀಗ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯುವ ವೇಳೆ ಜನರು ತಮ್ಮ ಪ್ರಾಣವನ್ನು ಕೈನಲ್ಲಿ ಇಟ್ಟುಕೊಂಡು ಕೂರುವಂತಹ ಅನುಭವ ಆಗುತ್ತಿದೆ. ಕಟ್ಟಡ ದುರಸ್ತಿಗೆ ತಲುಪಿದರೂ ಸರಿಪಡಿಸದ ಕಾರಣ ರಂಗ ಮಂದಿರ ರಂಗು ಕಳೆದುಕೊಳ್ಳುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಏಕೈಕ ಜಿಲ್ಲಾ ರಂಗಮಂದಿರಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಸುಮಾರು 40 ವರ್ಷಕ್ಕೂ ಹಳೆಯ ಕಟ್ಟಡವಾದ ಜಿಲ್ಲಾ ರಂಗಮಂದಿರ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ರಂಗಮಂದಿರಕ್ಕೆ ಹಾಕಿದ್ದ ಮೇಲ್ಚಾವಣಿ ಶಿಥಿಲಾವಸ್ಥೆಯಾಗಿದ್ದು, ಪ್ರತಿನಿತ್ಯ ಒಂದೊಂದು ಕಡೆ ಬೀಳುತ್ತಿದೆ. ಕೆಲ ದಿನದ ಹಿಂದೆ ಮಕ್ಕಳು ಕಾರ್ಯಕ್ರಮ ನೋಡುವ ವೇಳೆ ಫ್ಲೈವುಡ್ ಮೇಲ್ಚಾವಣಿ ಕುಸಿದಿದ್ದು, ಮಕ್ಕಳನ್ನ ಬೇರೆಡೆ ಕೂರಿಸಿ ಕಾರ್ಯಕ್ರಮ ತೋರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗಡಿ ಜಿಲ್ಲೆ ಕಾರವಾರದಲ್ಲಿ ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಜನರ ಹಲವು ದಿನದ ಬೇಡಿಕೆ. ಇಲ್ಲದಿದ್ದರೆ ಇರುವ ರಂಗಮಂದಿರವನ್ನಾದರೂ ಚೆನ್ನಾಗಿ ಮಾಡಬೇಕು ಎನ್ನುವ ಬೇಡಿಕೆ ಇದೆ. ಆದರೆ ಯಾವ ನಿರ್ವಹಣೆಯೂ ಮಾಡದೇ ಹಾಗೇ ಬಿಟ್ಟಿರುವ ಕಾರಣ ರಂಗಮಂದಿರ ಅವ್ಯವಸ್ಥೆಯ ಆಗರವಾಗಿದೆ.

ಅವ್ಯವಸ್ಥೆಗೆ ಬೇಸರ : ಇನ್ನು ಸುಮಾರು 12 ವರ್ಷಗಳ ಹಿಂದೆ ಜಿಲ್ಲಾ ರಂಗಮಂದಿರವನ್ನು ಸುಮಾರು 1 ಕೋಟಿಗೂ ಹೆಚ್ಚು ಹಣ ವ್ಯಯ ಮಾಡಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನ ಸರಿಪಡಿಸಲಾಗಿತ್ತು. ಇದಾದ ನಂತರ ಹೊಸ ಕಟ್ಟಡ ಕಟ್ಟಬೇಕು, ಇಲ್ಲದಿದ್ದರೇ ಇರುವ ಕಟ್ಟಡವನ್ನಾದರೂ ಸರಿಪಡಿಸಬೇಕು ಎಂದು ಆಗ್ರಹ ಹೇಳಿ ಬರುತ್ತಿದ್ದರೂ ಯಾರೂ ಗಮನಿಸುತ್ತಿಲ್ಲ. ಇನ್ನು ಗಡಿಭಾಗವಾದ ಕಾರವಾರದಲ್ಲಿ ಹೆಚ್ಚಾಗಿ ಕನ್ನಡ ಕಾರ್ಯಕ್ರಮಗಳು ಇದೇ ರಂಗಮಂದಿರಲ್ಲಿ ನಡೆಯುತ್ತದೆ. ಆದರೆ ರಂಗಮಂದಿರಕ್ಕೆ ಜನರು ಬಂದರೆ ಮಾತ್ರ ಅವ್ಯವಸ್ಥೆಗೆ ಬೇಸರ ಪಡುವಂತಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ರೆ ರಂಗಮಂದಿರ ನಿರ್ವಹಣೆಗೆ 50 ಲಕ್ಷ ಹಣವಿದೆ. ಇನ್ನೂ ಹೆಚ್ಚುವರಿ 20 ಲಕ್ಷ ಹಣ ಕೇಳಿದ್ದು ನಂತರ ಸರಿಪಡಿಸುತ್ತೇವೆ ಎನ್ನುತ್ತಾರೆ.

ಸರ್ಕಾರದ ಆದ್ಯ ಕರ್ತವ್ಯ: ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ ನಿಗದಿತ ಶುಲ್ಕ ವಸೂಲಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಡುತ್ತಾರೆ. ಇದುವರೆಗೂ ಶುಲ್ಕ ಸಂಗ್ರಹ ಮಾಡಿದ ಹಣವನ್ನು ಸಹ ರಿಪೇರಿ ಕಾರ್ಯಕ್ಕೆ ಬಳಸಿಕೊಂಡಿಲ್ಲ ಎನ್ನುವ ದೂರು ಸಾರ್ವಜನಿಕರದ್ದು. ಒಟ್ಟಿನಲ್ಲಿ ಗಡಿಭಾಗದ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗಡಿ ಜಿಲ್ಲೆ ಕಾರವಾರದಲ್ಲಿ ಸುಸಜ್ಜಿತ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಾಗಿದೆ.

ಇದನ್ನೂ ಓದಿ : ಮೈಸೂರು: ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.