ETV Bharat / state

ಯಲ್ಲಾಪುರದಲ್ಲಿ ಹೊಸ ಕುಲದ ಏಡಿ ಪತ್ತೆ: "ಆರಾಧ್ಯ ಪ್ಲಾಸಿಡಾ" ಎಂದು ನಾಮಕರಣ

author img

By

Published : May 27, 2023, 10:58 AM IST

crab
ಏಡಿ ಪತ್ತೆ

ಯಲ್ಲಾಪುರದಲ್ಲಿ ಸೌಮ್ಯ ಸ್ವಭಾವದ ಹೊಸ ಕುಲದ ಏಡಿಯನ್ನು ಪತ್ತೆ ಆಗಿದೆ.

ಕಾರವಾರ(ಉತ್ತರಕನ್ನಡ): ಸಿಹಿ ನೀರಿನಲ್ಲಿ ಕಂಡುಬರುವ ಹೊಸ ಕುಲದ ಏಡಿಯೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಭಾಗದಲ್ಲಿ ಪತ್ತೆಯಾಗಿದ್ದು, ಇದಕ್ಕೆ 'ಆರಾಧ್ಯ ಪ್ಲಾಸಿಡಾ' ಎಂದು ನಾಮಕರಣ ಮಾಡಲಾಗಿದೆ. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿಯವರು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಡಾ.ಸಮೀರಕುಮಾರ ಪಾಟಿ ಅವರೊಂದಿಗೆ ಸೇರಿ ಈ ಹೊಸ ಕುಲದ ಏಡಿಯನ್ನು ಪತ್ತೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದೊಂದು ಹೊಸ ಕುಲದ ಏಡಿ ಪತ್ತೆ ಕಾರ್ಯ ನಡೆಸಲಾಗಿದೆ.

ಹೊಸ ಕುಲಕ್ಕೆ ಆರಾಧ್ಯ ಎಂದು ನಾಮಕರಣ: ಯಲ್ಲಾಪುರ ಭಾಗದಲ್ಲಿ ಪತ್ತೆಯಾದ ಏಡಿಯ ಹೊಸ ಕುಲಕ್ಕೆ ಆರಾಧ್ಯ ಎಂದೂ, ಹೊಸ ಪ್ರಭೇದಕ್ಕೆ ಪ್ಲಾಸಿಡಾ ಎಂದೂ ಹೆಸರಿಸಲಾಗಿದೆ. ಆರಾಧ್ಯ, ಏಡಿ ಪತ್ತೆ ಮಾಡಿದ ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆಯವರ ಕಿರಿಯ ಮಗಳ ಹೆಸರಾಗಿದೆ. ಅದೇ ಹೆಸರನ್ನು ಈ ಏಡಿಯ ಕುಲಕ್ಕೆ ಇಡಲಾಗಿದೆ. ಇದು ಸಿಹಿ ನೀರಿನ ಏಡಿಯಾಗಿದ್ದು, ಗೋಪಾಲಕೃಷ್ಣ ಹೆಗಡೆಯವರ ತೋಟದಲ್ಲೇ ಪತ್ತೆಯಾಗಿದೆ.

ಹೊಸ ಜಾತಿಯ ಗುಣಲಕ್ಷಣಗಳು: 'ಆರಾಧ್ಯ' ಕುಲದ ಏಡಿಗಳು ಸಿಹಿ ನೀರಿನಲ್ಲಿ ಕಂಡುಬರುವ ಹಾಗೂ ಬಹಳ ಸೌಮ್ಯ ಸ್ವಭಾವದ್ದಾಗಿದೆ ಎಂದು ಗುರುತಿಸಲಾಗಿದೆ. ‌ಸಾಮಾನ್ಯವಾಗಿ ಯಾವುದೇ ಏಡಿಗಳನ್ನು ಒಂದು ಕಡೆಯಲ್ಲಿ ಗುಂಪಾಗಿಸಿಟ್ಟರೆ ಅವು ಕೊಂಬುಗಳನ್ನು ಮುರಿದುಕೊಳ್ಳುವವರೆಗೂ ಹೊಡೆದಾಡಿಕೊಳ್ಳುತ್ತವೆ. ಆದರೆ ಈ ಏಡಿಗಳು ಮಾತ್ರ ಯಾವುದೇ ಆಕ್ರಮಣ ಮಾಡದೆ, ಒಂದು ಜಾಗದಲ್ಲಿ ನಿಶ್ಯಬ್ಧವಾಗಿ ಕುಳಿತುಕೊಂಡಿರುತ್ತವೆ ಎಂಬುದು ಸಂಶೋಧಕರಿಗೆ ತಿಳಿದುಬಂದಿದೆ.

ಎರಡು ವರ್ಷಗಳಲ್ಲಿ ಮೂರು ಏಡಿಗಳ ಪತ್ತೆ: ಮೂಲಗಳ ಪ್ರಕಾರ, ಗುಜರಾತ್​ನಿಂದ ತಮಿಳುನಾಡಿನವರೆಗೆ ಚಾಚಿರುವ ಪಶ್ಚಿಮ ಘಟ್ಟದಲ್ಲಿ ಈವರೆಗೆ 21 ಕುಲದ ಏಡಿಗಳನ್ನು ಪತ್ತೆ ಹಚ್ಚಲಾಗಿದ್ದು, ಯಲ್ಲಾಪುರದಲ್ಲಿ ಪತ್ತೆಯಾದ 'ಆರಾಧ್ಯಾ ಪ್ಲಾಸಿಡಾ' 22 ನೆಯದ್ದಾಗಿದೆ. ಈವರೆಗೆ 76 ಪ್ರಭೇದದ ಏಡಿಗಳನ್ನು ಪಶ್ಚಿಮ ಘಟ್ಟದಲ್ಲಿ ಸಂಶೋಧನೆ ಮಾಡಲಾಗಿದೆ. ಭಾರತದ 75ನೇ ಏಡಿ 'ಘಟಿಯಾನ ದ್ವಿ ವರ್ಣ'ದ ನಂತರ 76ನೇ ಪ್ರಭೇದ 'ವೇಲಾ ಬಾಂಧವ್ಯ'ವನ್ನೂ ಕೂಡ ಗೋಪಾಲಕೃಷ್ಣ ಹಾಗೂ ಭಜಂತ್ರಿಯವರ ತಂಡ ಕಳೆದ ಎರಡು ವರ್ಷಗಳಲ್ಲಿ ಪತ್ತೆ ಮಾಡಿತ್ತು. ಇದೀಗ 77ನೇ ಹೊಸ ಜಾತಿಯ, ಹೊಸ ಪ್ರಭೇದದ ಏಡಿಯನ್ನೂ ಇದೇ ಜೋಡಿ ಪತ್ತೆ ಮಾಡಿರುವುದು ವಿಶೇಷವಾಗಿದೆ.

ತೋಟದಲ್ಲಿ ಕಾಣಿಸಿಕೊಂಡಿದ್ದ ವೇಲಾ ಬಾಂಧವ್ಯ: ಏಡಿ ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಂಡು ಬಂದಿತ್ತು. ಈ ಏಡಿಯನ್ನು ಕೂಡ ಗೋಪಾಲಕೃಷ್ಣ ಹೆಗಡೆಯವರ ತಂಡವೇ ಪತ್ತೆ ಮಾಡಿತ್ತು. ಈ ಏಡಿ ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಹೊಂದಿದ್ದು, ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಂಡುಬರುತ್ತದೆ. ನಾಲ್ಕಿಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ. ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ‌ ಕೊರೆದು ಇದು ವಾಸ ಮಾಡುತ್ತದೆ.

ಇದನ್ನೂ ಓದಿ: ಸಿಹಿ ನೀರಿನ ಘಟಿಯಾನ ಜಾತಿಯ ದ್ವಿವರ್ಣ ಏಡಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.