ETV Bharat / state

ಐದು ವರ್ಷದಿಂದ ಕುಂಟುತ್ತ ಸಾಗಿದ ಗೋವಾ ಬೆಳಗಾವಿ ಹೆದ್ದಾರಿ ಕಾಮಗಾರಿ: ವಾಹನ ಸವಾರರಿಗೆ ನಿತ್ಯ ಕಿರಿ ಕಿರಿ !

author img

By

Published : Mar 9, 2023, 5:09 PM IST

Updated : Mar 9, 2023, 11:02 PM IST

ಅರೆಬರೆ ಗೋವಾ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಆಕ್ಷೇಪ, ನಾಲ್ಕೈದು ಕಿಮೀ ಹೆದ್ದಾರಿ ಮುಗಿಸಲು ಗುತ್ತಿಗೆದಾರರು ಮೀನಮೇಷ, ಭಾರಿ ವಾಹನಗಳಿಗೆ ಸಂಚಾರ ನಿಷೇಧ, ಸುತ್ತಿ ಬಳಿಸಿ ತೆರಳಿ ನಷ್ಟ ಅನುಭವಿಸುತ್ತಿರುವ ಭಾರೀ ವಾಹನ ಸವಾರರು. ಹೆದ್ದಾರಿ ಪ್ರಾಧಿಕಾರ ಕ್ರಮಕ್ಕೆ ಹಿಂದೇಟು.

Goa Belgaum National Highway work
ಗೋವಾ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಗೋವಾ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ

ಕಾರವಾರ: ರಾಮನಗರ ಅನಮೋಡ ನಡುವಿನ ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗಿದೆ. 20 ಕಿಲೊ ಮೀಟರ್ ಹೆದ್ದಾರಿ ಅಭಿವೃದ್ಧಿಗೆ ಐದು ವರ್ಷ ಪಡೆದರೂ ಇದೀಗ ನಾಲ್ಕೈದು ಕಿಲೊ ಮೀಟರ್ ಹೆದ್ದಾರಿ ಕಾಮಗಾರಿ ಮುಗಿಸಲು ಮೀನಮೇಷ ಏಣಿಸುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವ ಭಾರಿ ವಾಹನ ಸವಾರರು ಸುತ್ತಿ ಬಳಿಸಿ ತೆರಳಿ ಭಾರಿ ನಷ್ಟ ಅನುಭವಿಸುವಂತಾಗಿದೆ. ಈ ಕುರಿತು ಸ್ಪೇಷಲ್ ರಿಪೋರ್ಟ್ ಈಟಿವಿ ಭಾರತ ತೆರೆದಿಟ್ಟಿದೆ.

ಹೌದು.. ಗೋವಾ ಬೆಳಗಾವಿ ಹೆದ್ದಾರಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕ ಕೊಂಡಿಯಾಗಿರುವ ಪ್ರಮುಖ ಮಾರ್ಗವಾಗಿದೆ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಆದರೆ, ಕಳೆದ ಐದು ವರ್ಷದಿಂದ ಈ ಹೆದ್ದಾರಿ ವಿಸ್ತರಣೆ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಮಾಡಲಾಗುತ್ತಿದೆ, ಇನ್ನೂ ಕೂಡ ಅರೆಬರೆಯಾಗಿದೆ.‌ ಕಳೆದ‌ ಮಳೆಗಾಲದಲ್ಲಿ ಈ ಹೆದ್ದಾರಿ ಸಂಪೂರ್ಣ ಬಂದ್‌ ಮಾಡಿರುವ ಕಾರಣ ಗೋವಾದಿಂದ ಬೆಳಗಾವಿ, ಹುಬ್ಬಳ್ಳಿ ಸಂಪರ್ಕಿಸಬೇಕಿರುವ ವಾಹನ ಸವಾರರಿಗೆ ಅನ್ಯ ಮಾರ್ಗ ಬಳಸುವಂತೆ ಉತ್ತರಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿತು. ಆದರೆ ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಳಿಸಿದ್ದು ನಾಲ್ಕೈದು ಕಿ.ಮೀ ಕಾಮಗಾರಿ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.

ಆದರೆ, ಇದೇ ಮಾರ್ಗದಲ್ಲಿ ಬಸ್, ಲಾರಿ, ಕಾರು ಬೈಕ್ ಎಲ್ಲವೂ ಓಡಾಟ ನಡೆಸುತ್ತಿವೆ. ಆದರೆ ಭಾರಿ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಕಾರವಾರ ಯಲ್ಲಾಪುರ ಮೂಲಕ ನೂರಾರು ಕಿ.ಮೀ ಹೆಚ್ಚುವರಿ ಸುತ್ತಿಕೊಂಡು ತೆರಳಬೇಕು. ಇದರಿಂದ ಸುಮಾರು 7 ಸಾವಿರ ನಷ್ಟವಾಗುತ್ತಿರುವುದಲ್ಲದೇ ಒಂದು ದಿನಕ್ಕೆ ತಲುಪುವ ದಾರಿಯನ್ನು ಬಿಟ್ಟು ಎರಡ್ಮೂರು ದಿನ ಸುತ್ತಿ ಬಳಸಿ ತೆರಳಬೇಕಾಗಿದೆ.‌ ಕೂಡಲೇ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭಾರಿ ವಾಹನ ಚಾಲಕರ ಅಸೋಸಿಯೇಷನ್ ಅಧ್ಯಕ್ಷ ಜಹೀರ್ ತಡಕೋಡ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬೆಳಗಾವಿ - ಗೋವಾ ರಾಷ್ಟ್ರೀಯ ಹೆದ್ದಾರಿ ತಿನೈಘಾಟದಿಂದ ಗೋವಾ ಗಡಿ ತನಕ ಅಭಿವೃದ್ಧಿ ಪಡಿಸುತ್ತಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಎಲ್ಲ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಿತು. ಆದರೆ, ಇದೀಗ ಅಧಿಕೃತವಾಗಿ ಸಾರಿಗೆ ವಾಹನಗಳು ಓಡಾಡುತ್ತಿವೆ. ವಾಹನ ಬಿಡುವುದಾದಲ್ಲಿ ಎಲ್ಲ ವಾಹನಗಳನ್ನು ಬಿಡಬೇಕು. ಇಲ್ಲವಾದಲ್ಲಿ ಎಲ್ಲವನ್ನು ಬಂದ್ ಮಾಡಿ ಬೇಗ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಭಾರಿ ವಾಹನ ಚಾಲಕರ ಆಗ್ರಹವಾಗಿದೆ.

ಇನ್ನು ಜಿಲ್ಲಾಧಿಕಾರಿ ಅವರಲ್ಲಿ ಈ ಬಗ್ಗೆ ಕೇಳಿದಾಗ ಸಮಸ್ಯೆ ಗಮನಕ್ಕೆ ಬಂದಿದೆ. ಆದರೆ ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಹಾಗೂ ಸ್ಥಳೀಯ ಪಿಡಿಒ ಬಳಿ ಮಾಹಿತಿ ಪಡೆದಿದ್ದು ಆನೇಕಾರಿಡಾರ್ ಮಾಡುವುದು ಬಾಕಿ ಉಳಿದ ಕಾರಣ ವಾಹನ ಬಿಡಲಾಗುತ್ತಿಲ್ಲ. ಮೇ ವೇಳೆಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇರುವ ಬಗ್ಗೆ ತಿಳಿಸಿದ್ದಾರೆ.

ಒಂದು ಬದಿ ವಾಹನ ಸಂಚಾರಕ್ಕೆ ಅವಕಾಶದ ಅ ಬಗ್ಗೆ ಆರ್​​​ಟಿಓ ಅವರಿಗೂ ಪರಿಶೀಲಿಸಲು ಸೂಚಿಸಿದಾಗ ಸುರಕ್ಷಿತವಲ್ಲದ ಕಾರಣ ಯಾವುದೇ ವಾಹನಕ್ಕೂ ಅಧಿಕೃತವಾಗಿ ಬಿಟ್ಟಿಲ್ಲ.‌ ಯಾವುದಾದರೂ ವಾಹನ ಸಂಚಾರ ಮಾಡುತ್ತಿದ್ದರೆ ಅದು ತಪ್ಪು. ಏನಾದರೂ ಅವಘಡಗಳು ಸಂಭವಿಸಿದ್ದಲ್ಲಿ ತೊಂದರೆಯಾಗಲಿದ್ದು ಕಾಮಗಾರಿ ಪೂರ್ಣಗೊಂಡು ಎನ್​​ಎಚ್ಐ‌ ಅವರು ರೋಡ್ ಕ್ಲಿಯರೆನ್ಸ್ ನೀಡಿದ ಬಳಿಕ ಬಿಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಒಟ್ಟಾರೆ ಅರೆಬರೆ ಹೆದ್ದಾರಿ ಕಾಮಗಾರಿಯಿಂದ ವಾಹನ‌ ಸವಾರರು ಪರದಾಡುತ್ತಿದ್ದು ಗೋವಾ ಕರ್ನಾಟಕ ನಡುವಿನ ಸಂಪರ್ಕ‌ಕೊಂಡಿಯೇ ಕಳಚಿದಂತಾಗಿದೆ. ಕೂಡಲೇ ಕಾಮಗಾರಿ ಮುಗಿಸಲು ಅಧಿಕಾರಿಗಳು ಅಗತ್ಯ ಕ್ರಮ‌ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಎದುರಾಗಿರುವ ತೊಂದರೆ ತಪ್ಪಿಸಬೇಕಿದೆ.

ಇದನ್ನೂಓದಿ:ಚುನಾವಣೆ ಹೊತ್ತಲ್ಲಿ ಶಾಸಕ ಜಮೀರ್​ಗೆ ಸಂಕಷ್ಟ: ಇಡಿ ಮುಂದೆ ವಿಚಾರಣೆಗೆ ಹಾಜರ್

Last Updated : Mar 9, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.