ETV Bharat / state

ಹವಾಮಾನ ವೈಪರೀತ್ಯದಿಂದ ಆರಂಭವಾಗದ ಮೀನುಗಾರಿಕೆ: ಕೆಲಸವಿಲ್ಲದೇ ಖಾಲಿ ಕುಳಿತ ಕಡಲ ಮಕ್ಕಳು!

author img

By

Published : Aug 8, 2022, 2:19 PM IST

60 ದಿನಗಳ ನಿಷೇಧದ ಅವಧಿ ಮುಗಿದು ಮತ್ತೆ ಮೀನುಗಾರಿಕೆಗೆ ಹೊರಟಿದ್ದ ಮೀನುಗಾರರಿಗೆ ಮತ್ತೆ ಆಘಾತವಾಗಿದೆ. ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು, ಮೀನುಗಾರಿಕೆ ಇಲ್ಲದೇ ಕಡಲ ಮಕ್ಕಳು ಪರದಾಡುವಂತಾಗಿದೆ.

fishing-not-started-due-to-inclement-weather
ಹವಾಮಾನ ವೈಪರೀತ್ಯದಿಂದಾಗಿ ಆರಂಭವಾಗದ ಮೀನುಗಾರಿಕೆ : ಕೆಲಸವಿಲ್ಲದೆ ಖಾಲಿ ಕುಳಿತ ಕಡಲ ಮಕ್ಕಳು!

ಕಾರವಾರ : ಕರಾವಳಿಯಲ್ಲಿ ಸರ್ಕಾರದ ನಿಯಮದಂತೆ ಮೀನುಗಾರಿಕೆ ಮೇಲಿನ 60 ದಿನಗಳ ನಿಷೇಧದ ಅವಧಿ ಮುಕ್ತಾಯವಾಗಿದೆ. ಮೀನುಗಾರರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟು, ಬಲೆಗಳ ರಿಪೇರಿ ಮಾಡಿಸಿಕೊಂಡು ಮೀನುಗಾರಿಕೆಗೆ ಇಳಿಯಲು ಸಿದ್ಧರಾಗಿದ್ದರು. ಆದರೆ, ಮೀನುಗಾರಿಕೆಗೆ ತೆರಳಬೇಕಾದ ಬೋಟುಗಳು ಮಾತ್ರ ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ.

ಹವಾಮಾನ ವೈಪರೀತ್ಯದಿಂದಾಗಿ ಆರಂಭವಾಗದ ಮೀನುಗಾರಿಕೆ : ಕೆಲಸವಿಲ್ಲದೆ ಖಾಲಿ ಕುಳಿತ ಕಡಲ ಮಕ್ಕಳು!

ವರುಣನ ಅಬ್ಬರದಿಂದಾಗಿ ಕರಾವಳಿಯಲ್ಲಿ ಮತ್ತೆ ಮೀನುಗಾರಿಕೆ ಆರಂಭವಾದ ಬೆನ್ನಲ್ಲೇ ಸ್ಥಗಿತಗೊಂಡಿದೆ. ಹವಾಮಾನ ಇಲಾಖೆ ಆಗಸ್ಟ್ 11ರ ವರೆಗೆ ಭಾರಿ ಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲೇ ನೂರಾರು ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳದೇ ಲಂಗರು ಹಾಕಿ ನಿಂತಿವೆ.

60 ದಿನಗಳ ಮೀನುಗಾರಿಕೆ ನಿರ್ಬಂಧದ ಬಳಿಕ ಮತ್ತೆ ನಿರ್ಬಂಧ : ಜೂನ್ ಹಾಗೂ ಜುಲೈ ತಿಂಗಳ 61 ದಿನಗಳ ನಿಷೇಧ ಅವಧಿ ಬಳಿಕ ಸಂಪ್ರದಾಯದಂತೆ ಆಗಸ್ಟ್ 1 ರಿಂದ ಮೀನುಗಾರಿಕೆ ಪ್ರಾರಂಭವಾಗುತ್ತದೆ. ಅದರಂತೆ ಈ ಬಾರಿ ಕಾರವಾರದ ಮೀನುಗಾರರು ಮೀನುಗಾರಿಕೆಯನ್ನು ಪ್ರಾರಂಭಿಸಿದ್ದರಾದರೂ ಅಗಸ್ಟ್ 2 ರಿಂದಲೇ ಮಳೆಯ ಮುನ್ಸೂಚನೆ ನೀಡಿದ ಹಿನ್ನಲೆ ಬಂದರಿಗೆ ವಾಪಸ್​ ಆಗಿದ್ದರು.

ಜಿಲ್ಲೆಯಷ್ಟೇ ಅಲ್ಲದೇ ನೆರೆಯ ಉಡುಪಿ, ಮಲ್ಪೆ ಸೇರಿದಂತೆ ಗೋವಾ, ತಮಿಳುನಾಡಿನ ಹೊರರಾಜ್ಯದ ಬೋಟುಗಳು ಸಹ ಕಾರವಾರ ಬಂದರು ಪ್ರದೇಶದಲ್ಲಿ ಲಂಗರು ಹಾಕಿ ನಿಂತಿವೆ. ಇದರಿಂದ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದ ಬೋಟುಗಳ ಕಾರ್ಮಿಕರಿಗೆ ನಿರಾಸೆಯಾಗಿದ್ದು, ಕೆಲಸವಿಲ್ಲದೇ ಖಾಲಿ ಕೂರುವಂತಾಗಿದೆ.

ನಷ್ಟ ಅನುಭವಿಸುತ್ತಿರುವ ಬೋಟ್ ಮಾಲೀಕರು : ಇನ್ನು ಪ್ರತಿವರ್ಷ ಮೀನುಗಾರಿಕಾ ನಿಷೇಧದ ಅವಧಿಯಲ್ಲಿ ಬೋಟುಗಳ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋಟು ಹಾಗೂ ಬಲೆಗಳ ರಿಪೇರಿ ಮಾಡುತ್ತಾರೆ. ಮೀನುಗಾರಿಕೆ ಅವಧಿ ಪ್ರಾರಂಭವಾದ ಬಳಿಕ ಉತ್ತಮ ಮೀನುಗಾರಿಕೆಯಾದಲ್ಲಿ ಸಾಲ ತೀರಿಸಿ ಲಾಭವಾಗುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ, ಮಳೆಯ ಕಾರಣದಿಂದಾಗಿ ಮೀನುಗಾರಿಕೆ ಸ್ಥಗಿತಗೊಂಡಿದ್ದು ಲಾಭಕ್ಕಿಂತ ನಷ್ಟವನ್ನೇ ತಂದೊಡ್ಡಿದೆ.

ಇನ್ನು ಬೋಟುಗಳು ಬಂದರಿನಲ್ಲೇ ನಿಂತಿದ್ದರೂ ಕಾರ್ಮಿಕರಿಗೆ ವೇತನ ನೀಡಲೇಬೇಕಿದ್ದು, ಮೀನುಗಾರಿಕೆ ನಡೆಯದಿದ್ದಲ್ಲಿ ಮಾಲೀಕರಿಗೆ ಸಾಕಷ್ಟು ನಷ್ಟ ಉಂಟಾಗಲಿದೆ. ಕಳೆದ ಬಾರಿ ಸಹ ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ಮೀನುಗಾರರು ನಷ್ಟ ಅನುಭವಿಸುವಂತಾಗಿತ್ತು. ಇದೀಗ ಮತ್ತೆ ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟ ಎದುರಾಗಿದ್ದು, ಸರ್ಕಾರ ಮೀನುಗಾರರಿಗೆ ನೆರವು ನೀಡಬೇಕು ಬೋಟ್ ಮಾಲೀಕ ಸುರೇಶ ತಾಂಡೇಲ ಹೇಳಿದ್ದಾರೆ.

ಒಟ್ಟಾರೇ ಮೀನುಗಾರಿಕೆ ಅವಧಿ ಪ್ರಾರಂಭವಾಗಿದ್ದರೂ ಸಹ ಸಮುದ್ರಕ್ಕೆ ತೆರಳಲಾಗದೇ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದು, ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ನಿರಾಸೆಯಾಗಿದೆ.

ಓದಿ : ಕಾವೇರಿ ನದಿ ಪ್ರವಾಹ ದಾಟಿ ಮಹಿಳೆಯ ಅಂತ್ಯಕ್ರಿಯೆ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.