ETV Bharat / state

ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ, ತನಿಖೆಗೆ ಆದೇಶ

author img

By

Published : Jul 21, 2022, 7:42 AM IST

ಪ್ರಾಯೋಗಿಕ ಕಾರ್ಯಾಚಣೆ ನಡೆಸುವಾಗ ದೇಶದ ಅತಿ ದೊಡ್ಡ ಯುದ್ಧನೌಕೆ ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

INS Vikramaditya
ಐಎನ್ಎಸ್ ವಿಕ್ರಮಾದಿತ್ಯ

ಕಾರವಾರ: ಕಾರ್ಯಾಚರಣೆಯಲ್ಲಿದ್ದ ದೇಶದ ಪ್ರತಿಷ್ಠಿತ ಯುದ್ಧ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಭಾರತೀಯ ನೌಕಾಸೇನೆ ಮಾಹಿತಿ ನೀಡಿದೆ.

ಯುದ್ಧನೌಕೆಯಲ್ಲಿ ಪ್ರಾಯೋಗಿಕ ಕಾರ್ಯಾಚಣೆ ನಡೆಸುವಾಗ ಘಟನೆ ನಡೆದಿದೆ. ತಕ್ಷಣ ನೌಕೆಯಲ್ಲಿ ಅಳವಡಿಸಲಾದ ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. 47,000 ಟನ್ ತೂಕದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ, ಅದರ ಮರುಹೊಂದಾಣಿಕೆ ಕಾರ್ಯದ ನಂತರ ಸಮುದ್ರದಲ್ಲಿ ನಿಗದಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಸಮುದ್ರದಲ್ಲಿ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾಗ ಅಗ್ನಿ ಅವಘಡ ಉಂಟಾಗಿದೆ ಎಂದು ನೌಕಾಪಡೆ ತಿಳಿಸಿದೆ.


ಕ್ಯಾಪ್ಟನ್ ಸುಶೀಲ್ ಮೆನನ್ ವಿಕ್ರಮಾದಿತ್ಯದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಯುದ್ಧನೌಕೆ ಆಳ ಸಮುದ್ರದಲ್ಲಿದ್ದು, ಗುರುವಾರ ಕಾರವಾರದ ಸೀಬರ್ಡ್ ನೌಕಾನೆಲೆಯ ಜಟ್ಟಿಗೆ ತರಲಾಗುತ್ತದೆ. ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ತಿಳಿದುಬಂದಿಲ್ಲ. ಈ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದೆ.

ವಿಕ್ರಮಾದಿತ್ಯದ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಕೆಲವು ತಿಂಗಳುಗಳಿಂದ ನೌಕೆ ಬಳಕೆಯಲ್ಲಿರಲಿಲ್ಲ. ಈ ಘಟನೆಯು ನಮಗೆ ಆಘಾತಕಾರಿಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿರುವ ನೌಕಾಪಡೆಯ ಅಧಿಕಾರಿಯೊಬ್ಬರು, ನಮ್ಮ ಎರಡನೇ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಆಗಸ್ಟ್ 15ರೊಳಗೆ ಕೊಚ್ಚಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೃತಹಸ್ತದಿಂದ ಕಡಲಿಗಿಳಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಮಲಬಾರ್ 2020' 2ನೇ ಆವೃತ್ತಿ: ಐಎನ್​ಎಸ್​​ ವಿಕ್ರಮಾದಿತ್ಯ ಮೂಲಕ ಮಿಗ್ -29 ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.