ETV Bharat / state

ಉತ್ತರ ಕನ್ನಡ: ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಿದ ಜಿಲ್ಲಾಧಿಕಾರಿ

author img

By ETV Bharat Karnataka Team

Published : Oct 14, 2023, 6:37 PM IST

district collector host baby shower for pregnant women
ಉತ್ತರ ಕನ್ನಡ: ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲೇ ಚೊಚ್ಚಲ ಹೆರಿಗೆ ಖುಷಿಯಲ್ಲಿರುವ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಿಸಿದ್ದಾರೆ.

ಉತ್ತರ ಕನ್ನಡ: ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಿದ ಜಿಲ್ಲಾಧಿಕಾರಿ

ಕಾರವಾರ: ಹಿಂದೂ ಸಂಪ್ರದಾಯದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ವೇಳೆ ಸೀಮಂತ ಶಾಸ್ತ್ರ ಸಾಮಾನ್ಯ. ಶಾಸ್ತ್ರೋಕ್ತವಾಗಿ ನಡೆಯುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಮನೆ ಮಂದಿಯೆಲ್ಲ ಸೇರಿ ಗರ್ಭಿಣಿಗೆ ಅರಿಶಿನ, ಕುಂಕುಮವಿಟ್ಟು ಉಡಿ ತುಂಬಿ ಹಾರೈಸುತ್ತಾರೆ. ಆದರೆ ಉತ್ತರ ಕನ್ನಡದಲ್ಲಿ ಇಂತಹದೊಂದು ಸಂಪ್ರದಾಯವನ್ನು ಸ್ವತಃ ಜಿಲ್ಲಾಧಿಕಾರಿಯೇ ತಮ್ಮ‌ ಕಚೇರಿಯಲ್ಲಿ ಆಯೋಜಿಸುವ ಮೂಲಕ ಚೊಚ್ಚಲ ಹೆರಿಗೆ ಖುಷಿಯಲ್ಲಿರುವ ಗರ್ಭಿಣಿಯರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂರಾರು ಮಹಿಳೆಯರ ಉಪಸ್ಥಿತಿಯಲ್ಲಿ ಇಂತಹದೊಂದು ಅಪರೂಪದ ಕಾರ್ಯಕ್ರಮ ನಡೆಯಿತು. ಸ್ವತಃ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೇ ಐವರು ಗರ್ಭಿಣಿಯರಿಗೆ ಅರಿಶಿನ- ಕುಂಕುಮ ಹಚ್ಚಿ, ಹೂವು ಮೂಡಿಸಿ, ಹಸಿರು ಗಾಜಿನ ಬಳೆಗಳನ್ನು ತೊಡಿಸಿ, ಹೊಸ ಸೀರೆ ನೀಡಿ, ಆರತಿ ಬೆಳಗಿ, ಉಡಿ ತುಂಬಿಸಿದರು. ಬಳಿಕ ಸಿಹಿ ತಿನ್ನಿಸಿ, ಸುಖ ಪ್ರಸವವಾಗಿ ತಾಯಿ ಮಗು ಸದಾ ಆರೋಗ್ಯವಾಗಿರಲಿ ಎಂದು ಹಾರೈಸಿದರು.

ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸೀಮಂತ ಕಾರ್ಯಕ್ರಮವು ಉಳ್ಳವರ ಮನೆಯಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಸಾಮಾನ್ಯ ಕುಟುಂಬದ ಮಹಿಳೆಯರಿಗೂ ಈ ಸೀಮಂತ ಸಂಭ್ರಮ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: ಗಣೇಶ ಹಬ್ಬದ ದಿನದಂದೆ ಪೊಲೀಸ್​ ಠಾಣೆಯಲ್ಲಿ ಮಹಿಳಾ ಕಾನ್ಸ್‌ ಟೇಬಲ್​ಗೆ ಸೀಮಂತ ಕಾರ್ಯಕ್ರಮ: ವಿಡಿಯೋ

ಇನ್ನು ಪೋಷಣ್ ಮಾಸಾಚರಣೆಯಡಿ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮ ನಡೆಯಲಿದ್ದು, ಗರ್ಭಿಣಿ ಸ್ತ್ರೀಯರು ಪೂರಕ ಪೌಷ್ಟಿಕ ಆಹಾರ ಸ್ವೀಕರಿಸಬೇಕೆನ್ನುವ ಉದ್ದೇಶದಿಂದ ಸೀಮಂತ ಶಾಸ್ತ್ರ ನೆರವೇರಿಸಲಾಗುತ್ತಿದೆ. ಮುಂದೆ ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶುಕ್ರವಾರ ಮತ್ತು ತೃತೀಯ ಶುಕ್ರವಾರ ಇಂತಹ ಕಾರ್ಯಕ್ರಮ ನಡೆಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಹಿಳೆಯರು ತಯಾರಿಸಿದ ಸಿಹಿ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ‌ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇದ್ದ 105 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಮಹಿಳೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.‌ ಕೆಲಸವನ್ನು ಶ್ರದ್ದೆಯಿಂದ ಮಾಡುವಂತೆ ಸೂಚನೆ ನೀಡಿದರು.

ಇದರ ಜೊತೆಯಲ್ಲಿ ಶಿಶುಗಳಿಗೆ 6 ತಿಂಗಳ ನಂತರ ತಾಯಿಯ ಎದೆ ಹಾಲಿನ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಆರಂಭಿಸುವ ಕಾರ್ಯಕ್ರಮವಾದ ಶಿಶುಪ್ರಾಶನದಲ್ಲಿ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ತಿನ್ನಿಸಿದರು. ಚೊಚ್ಚಲ ಹೆರಿಗೆ ಖುಷಿಯಲ್ಲಿರುವ ಮಹಿಳೆಯರಿಗೆ ಸ್ವತಃ ಜಿಲ್ಲಾಧಿಕಾರಿಯೇ ಸೀಮಂತ ಮಾಡಿರುವುದು ಗರ್ಭಿಣಿಯರ ಸಂತಸಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಮುಂಜಾಗ್ರತೆ, ಆರೈಕೆಗಳ ಬಗ್ಗೆಯೂ ತಿಳುವಳಿಕೆ ನೀಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮಂಡ್ಯ: ಉಪವಿಭಾಗಾಧಿಕಾರಿಗೆ ಗ್ರಾಮಸ್ಥರಿಂದ ಸೀಮಂತ ಶಾಸ್ತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.