ETV Bharat / state

ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ.. ಜನತೆಗೆ ಧನ್ಯವಾದ!

author img

By

Published : Sep 28, 2021, 12:47 PM IST

ತುಮಕೂರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್ ಗೌಡ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಸುರೇಶ್​ಗೌಡ
ಸುರೇಶ್​ಗೌಡ

ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್ ಗೌಡ ರಾಜೀನಾಮೆ ನೀಡಿರುವುದಾಗಿ ತಮ್ಮ ಫೇಸ್​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿಗೆ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿದ್ದ ಬಿ.ಸುರೇಶ್ ಗೌಡ ರಾಜೀನಾಮೆಗೆ ಕಾರಣ ಮಾತ್ರ ಸಾಕಷ್ಟು ನಿಗೂಢವಾಗಿದೆ.

ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದರು. ಇನ್ನೂ ಒಂದು ವರ್ಷ ಅಧಿಕಾರವಧಿ ಇರುವಾಗಲೇ ರಾಜೀನಾಮೆ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಸುರೇಶ್​ಗೌಡರ ಫೇಸ್​ಬುಕ್ ಪೋಸ್ಟ್​​ ಬರಹ: ಜಿಲ್ಲೆಯ ಜನರು ತೋರಿಸಿದ ಪ್ರೀತಿ, ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ. ಜಿಲ್ಲೆಯ ಜನರ ಸಹಕಾರಕ್ಕೆ ಧನ್ಯವಾದ. ನಾನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾದ ನನಗೆ ಹಲವು ಸವಾಲುಗಳು ಎದುರಾದವು. ಲೋಕಸಭಾ ಚುನಾವಣೆ, ಶಿರಾ ವಿಧಾನಸಭಾ ಚುನಾವಣೆಯನ್ನು ಜಿಲ್ಲಾ ಜನರ ಸಹಕಾರದಿಂದ ಸಲೀಸಾಗಿ ಎದುರಿಸಿದೆ. ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ನಾನು ಎರಡು ಸಲ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕನಾಗಿ, ಎರಡು ಸಲ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿ, ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಯಶಸ್ವಿಯಾಗಲು, ನನ್ನ ಕ್ಷೇತ್ರದ ಜನರು ತೋರಿದ ಪ್ರೀತಿ, ಸಹಕಾರ, ಬೆಂಬಲ ಕಾರಣವಾಗಿತ್ತೇ ಹೊರತು ಬೇರೇನೂ ಅಲ್ಲ. ಜಿಲ್ಲಾ ಘಟಕದ ಅಧ್ಯಕ್ಷನಾದ ಮೇಲೆ ಪಕ್ಷದ ಕೆಲಸಗಳ ಕಾರಣ ನನ್ನ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು. ಅವರ ಕಷ್ಟಸುಖಗಳಲ್ಲಿ ಭಾಗಿಯಾಗಲು ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಳಿಕ ಮೊದಲ ಉಪಸಮರ: ಬೊಮ್ಮಾಯಿಗೆ ಅಗ್ನಿ ಪರೀಕ್ಷೆ, ಬಿಜೆಪಿಗಿದು ಸತ್ವ ಪರೀಕ್ಷೆ..!

ಕೋವಿಡ್​​ನಿಂದ ಆರ್ಥಿಕ ಹಿಂಜರಿತ, ನೀರಾವರಿ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ಬವಣೆ, ಶಿಕ್ಷಣದ ಗುಣಮಟ್ಟ ಕುಸಿತದಿಂದ ಕ್ಷೇತ್ರದ ಮಕ್ಕಳು ಅನುಭವಿಸುತ್ತಿರುವ ಯಾತನೆಯ ಹಿನ್ನೆಲೆ ಅವರೊಂದಿಗೆ ಸದಾ ಸಮಯ ಇರಬೇಕೆಂದು ಮನಸ್ಸು ಹೇಳುತ್ತಿತ್ತು. ನನ್ನ ಕ್ಷೇತ್ರದ ಜನರೇ ನನಗೆ ಎಲ್ಲವೂ ಆಗಿರುವುದರಿಂದ ಅವರೊಂದಿಗೆ ಇರಲು ರಾಜೀನಾಮೆ ನಿರ್ಧಾರ ಮಾಡಿದೆ ಎಂಬುದನ್ನು ನನ್ನ ಕ್ಷೇತ್ರದ ಜನರಿಗೆ ಈ ಮೂಲಕ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದಾಗ ಜಿಲ್ಲೆಯ ಮೂಲೆ ಮೂಲೆಗಳಿಂದ ಎಲ್ಲ ಜಾತಿ, ಧರ್ಮಗಳ ಜನರು ನನಗೆ ತೋರಿಸಿದ ಪ್ರೀತಿ, ಕೊಟ್ಟ ಸಹಕಾರಕ್ಕೆ ಧನ್ಯವಾದವನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ. ಇದೇ ರೀತಿಯ ಪ್ರೀತಿ, ಹಾರೈಕೆ, ಬೆಂಬಲ ಇನ್ನು ಮುಂದೆಯೂ ನೀಡುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.