ಜೆಡಿಎಸ್‌ನಿಂದ 'ಘರ್‌ ವಾಪಸಿ' ಪ್ರಯತ್ನ: ಮತ್ತೆ ಪಕ್ಷಕ್ಕೆ ಬರ್ತಾರಾ ಉಚ್ಛಾಟಿತ ಶಾಸಕ ಶ್ರೀನಿವಾಸ್‌?

author img

By

Published : Nov 10, 2022, 11:22 AM IST

Updated : Nov 10, 2022, 2:31 PM IST

sr mahesh

ಗುಬ್ಬಿಯ ಜೆಡಿಎಸ್‌ ಉಚ್ಛಾಟಿತ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ಅವರನ್ನು ಜೆಡಿಎಸ್‌ ಶಾಸಕ ಸಾರಾ ಮಹೇಶ್‌ ಭೇಟಿಯಾಗಿದ್ದಾರೆ.

ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಬೆಳವಣಿಗೆಗಳು ಭಾರಿ ಕುತೂಹಲ ಉಂಟುಮಾಡಿದೆ. ಇಬ್ಬರು ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ. ಮತ್ತೋರ್ವ ಶಾಸಕ ಮುಂದಿನ ಚುನಾವಣೆಯಲ್ಲಿ ನಾನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ತಳಮಳ ಶುರುವಾಗಿದ್ದು, ಪಕ್ಷ ಬಿಟ್ಟು ಹೋಗುತ್ತಿರುವ ಶಾಸಕರನ್ನು ಮನವೊಲಿಸುವ ಪ್ರಯತ್ನ ಆರಂಭವಾಗಿದೆ.

ಈಗಾಗಲೇ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾಗಿದ್ದ ಬೆಮೆಲ್ ಕಾಂತರಾಜು ತಮ್ಮ ಅವಧಿ ಮುಗಿಯುತ್ತಿದ್ದಂತೆ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಜೊತೆಗೆ ತುರುವೆಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ, ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್‌ಆರ್‌ ಶ್ರೀನಿವಾಸ್ ಸಹ ಹೆಚ್ ಡಿ ಕುಮಾರಸ್ವಾಮಿಗೆ ಬಹಿರಂಗ ಹೇಳಿಕೆ ನೀಡಿ ಸಾಕಷ್ಟು ಅಸಮಾಧಾನ ಹೊರಹಾಕಿದ್ದರು. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾದ ಹಿನ್ನೆಲೆ ಅವರನ್ನು ಸಹ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದ್ರೆ, ಶ್ರೀನಿವಾಸ್​ ಮಾತ್ರ ತಮ್ಮ ರಾಜಕೀಯ ಭವಿಷ್ಯಕ್ಕೆ ಭದ್ರಬುನಾದಿ ಹಾಕುವ ಮೂಲಕ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಅಲ್ಲದೇ, ಜೆಡಿಎಸ್ ಪಕ್ಷ ಹೊರತುಪಡಿಸಿ ತಮ್ಮ ವೈಯಕ್ತಿಕ ವರ್ಚಸ್​ ಅನ್ನು ಪ್ರಬಲವಾಗಿ ಬೆಳೆಸಿಕೊಳ್ಳುತ್ತಿದ್ದಾರೆ.

ಉಚ್ಛಾಟಿತ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ಮನೆಗೆ ಸಾರಾ ಮಹೇಶ್‌ ಭೇಟಿ

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಬ್ಬ ಜೆಡಿಎಸ್ ನಾಯಕನನ್ನು ಶ್ರೀನಿವಾಸ್ ವಿರುದ್ಧ ಹುಟ್ಟು ಹಾಕಲು ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಧಿ ಇಲ್ಲದೇ ಉಚ್ಛಾಟಿತ ಜೆಡಿಎಸ್ ಶಾಸಕನನ್ನು ವಾಪಸ್ ಪಕ್ಷಕ್ಕೆ ಕರೆತರಲು ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ಶಾಸಕ ಶ್ರೀನಿವಾಸ್ ಬಿಟ್ಟರೆ ಜೆಡಿಎಸ್ ಪಕ್ಷಕ್ಕೂ ನಷ್ಟ : ಶಾಸಕ ಸಾ ರಾ ಮಹೇಶ್

ಮೈಸೂರಿನ ಜೆಡಿಎಸ್ ಶಾಸಕ ಸಾರಾ ಮಹೇಶ್, ಜೆಡಿಎಸ್ ಮುಖಂಡ ಅನ್ನದಾನಿ ಸೇರಿದಂತೆ ಹಿರಿಯ ನಾಯಕರು ಉಚ್ಛಾಟಿತ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್​ ಮನೆಗೆ ದೌಡಾಯಿಸಿ ಹಲವು ಸುತ್ತಿನ ಮಾತುಕತೆ ನಡೆಸಲು ಆರಂಭಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಆಗಿರುವ ನಷ್ಟವನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಗುಬ್ಬಿ ಶಾಸಕ ಶ್ರೀನಿವಾಸ್​​​​ ತರಾಟೆಗೆ ತೆಗೆದುಕೊಂಡ ಹೆಚ್​ಡಿಕೆ ಅಭಿಮಾನಿ - ಆಡಿಯೋ ವೈರಲ್!

ಇನ್ನೊಂದೆಡೆ, ಮಧುಗಿರಿ ಜೆಡಿಎಸ್ ಶಾಸಕ ವೀರಭದ್ರಯ್ಯ ಕೂಡ ಪಕ್ಷದ ಮುಖಂಡರೊಂದಿಗೆ ಅಸಮಾಧಾನ ಹೊರಹಾಕಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಬ್ಬ ಜೆಡಿಎಸ್ ಅಭ್ಯರ್ಥಿಯನ್ನು ಹೊಸದಾಗಿ ಕಣಕ್ಕಿಳಿಸುವುದು ಜೆಡಿಎಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಜೆಡಿಎಸ್ ಪಕ್ಷದೊಂದಿಗೆ ವಿಮುಖರಾಗುತ್ತಿರುವ ಮುಖಂಡರನ್ನು ವಾಪಸ್ ಪಕ್ಷಕ್ಕೆ ಕರೆತರಲು ಮುಖಂಡರು ಹರಸಾಹಸ ಪಡುತ್ತಿದ್ದಾರೆ.

Last Updated :Nov 10, 2022, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.