ETV Bharat / state

ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ : ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹ

author img

By

Published : Mar 26, 2022, 1:37 PM IST

ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪಿಗೆ ಸಿದ್ದರಾಮಯ್ಯ ಗೌರವ ತೋರಿಲ್ಲ. ಕೋರ್ಟ್ ಮಧ್ಯಂತರ ತೀರ್ಪು ನೀಡಿದಾಗಿನಿಂದ ಹಿಂದೂ ವಿದ್ಯಾರ್ಥಿಗಳು ಯಾರು ಕೇಸರಿ ಶಾಲು ಧರಿಸಿಕೊಂಡು ಶಾಲಾ-ಕಾಲೇಜಿಗೆ ಹೋಗಿಲ್ಲ. ಆದರೆ, ಮುಸ್ಲಿಂ ವಿದ್ಯಾರ್ಥಿನಿಯರು ಮಾತ್ರ ನಾವು ಶಿಕ್ಷಣ ಬಿಡುತ್ತೇವೆ. ಆದರೆ, ಧರ್ಮ ಬಿಡಲ್ಲ ಎಂದು ಹೇಳುತ್ತಾರೆ..

KS Eshwarappa
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್​​ ಈಶ್ವರಪ್ಪ

ಶಿವಮೊಗ್ಗ : ರಾಜಕಾರಣಕ್ಕೆ ಕಪ್ಪು ಚುಕ್ಕೆ ರೂಪದಲ್ಲಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಈ ದೇಶದ ಸಂಸ್ಕೃತಿ ಉಳಿಸುತ್ತಿರುವ ಸಾಧು ಸಂತರ ಕುರಿತು. ಅವರ ರಾಜಕೀಯ ತೆವಲು ತೀರಿಸಿಕೊಳ್ಳುವುದಕ್ಕೋಸ್ಕರ ಹಿಜಾಬ್ ಮತ್ತು ಸಾಧು ಸಂತರ ಕೇಸರಿ ಬಟ್ಟೆ ಹೋಲಿಕೆ ನಿಜಕ್ಕೂ ಅಕ್ಷಮ್ಯ ಅಪರಾಧ. ಅವರು ಕೇವಲ ರಾಜ್ಯದ ಜನರ ಕ್ಷಮೆ ಕೇಳುವುದಲ್ಲ, ಬದಲಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಸಚಿವ ಕೆ.ಎಸ್​​ ಈಶ್ವರಪ್ಪ ಆಗ್ರಹಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿರುವುದು..

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಯನ್ನು ರಾಜ್ಯದ ಜನತೆ ಕ್ಷಮಿಸಲ್ಲ. ಹಿಂದೂ, ಮುಸಲ್ಮಾನರು ಸಹಬಾಳ್ವೆಯಿಂದ ಇರಬೇಕು ಅಂತಾ ಹೇಳ್ತಾರೆ. ಆದರೆ, ಅವರ ನಡವಳಿಕೆ ಮಾತ್ರ ಹಿಂದೂ ವಿರೋಧಿಯಾಗಿದೆ. ಸಿದ್ದರಾಮಯ್ಯ ಬಹಳ ಭಂಡರು, ಯಾವುದೇ ರೀತಿಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರನ್ನು ವಜಾ ಮಾಡಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಧು ಸಂತರ ಬಗ್ಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಬೇಕು.‌ ಕೆಪಿಸಿಸಿಯ ಅಲ್ಪಸಂಖ್ಯಾತರ ಅಧ್ಯಕ್ಷರನ್ನು ವಜಾ ಮಾಡಿದಂತೆ, ಸಿದ್ದರಾಮಯ್ಯ ಅವರನ್ನು ವಜಾ ಮಾಡಬೇಕು. ಈ ಕುರಿತು ಕಾಂಗ್ರೆಸ್​​ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಲಿ ಎಂದು ಆಗ್ರಹಿಸಿದರು.

ಕೋರ್ಟ್ ತೀರ್ಪಿನ ಬಗ್ಗೆ ಗೌರವವಿಲ್ಲ : ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತೀರ್ಪಿಗೆ ಸಿದ್ದರಾಮಯ್ಯ ಗೌರವ ತೋರಿಲ್ಲ. ಕೋರ್ಟ್ ಮಧ್ಯಂತರ ತೀರ್ಪು ನೀಡಿದಾಗಿನಿಂದ ಹಿಂದೂ ವಿದ್ಯಾರ್ಥಿಗಳು ಯಾರು ಕೇಸರಿ ಶಾಲು ಧರಿಸಿಕೊಂಡು ಶಾಲಾ-ಕಾಲೇಜಿಗೆ ಹೋಗಿಲ್ಲ. ಆದರೆ, ಮುಸ್ಲಿಂ ವಿದ್ಯಾರ್ಥಿನಿಯರು ಮಾತ್ರ ನಾವು ಶಿಕ್ಷಣ ಬಿಡುತ್ತೇವೆ. ಆದರೆ, ಧರ್ಮ ಬಿಡಲ್ಲ ಎಂದು ಹೇಳುತ್ತಾರೆ.

ಅವರು ಹಿಜಾಬ್ ಬಿಡಲ್ಲ ಅಂದ್ರೆ ಹೇಗೆ?. ಕೋರ್ಟ್ ತೀರ್ಪಿನ ವಿರುದ್ಧ ವ್ಯಾಪಾರ ಬಂದ್ ಮಾಡಿದಕ್ಕೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಅಂದು ಆರು ಜನ ವಿದ್ಯಾರ್ಥಿನಿಯರಿಗೆ ಬುದ್ದಿ ಹೇಳಿದ್ರೆ, ಹೀಗೆ ಆಗುತ್ತಿರಲಿಲ್ಲ. ನಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದನ್ನು ರಾಜ್ಯದ ಜನತೆ ಕ್ಷಮಿಸಲ್ಲ ಎಂದರು.

ಜರಾಸಂಧನಂತೆ ನೂರು ತಪ್ಪು ಮಾಡಿದ್ದಾರೆ : ಸಿದ್ದರಾಮಯ್ಯ ರಾಕ್ಷಸ ಜರಾಸಂಧನಂತೆ ನೂರು ತಪ್ಪು ಮಾಡಿದ್ದಾರೆ. ಇದರಿಂದ ಅವರು ರಾಜಕೀಯ ನಿವೃತ್ತಿ ಪಡೆಯಬೇಕು. ಇಲ್ಲವಾದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ವಜಾ ಮಾಡಬೇಕು. ಸಿದ್ದರಾಮಯ್ಯ ಸಿಎಂ ಆದಾಗ ಕೊಲೆಯಾದ ಹಿಂದೂಗಳಿಗೆ ಎಷ್ಟು ಪರಿಹಾರ ನೀಡಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಹಿಂದೂ ದೇವಾಲಯಗಳ ಬಳಿ ಅನ್ಯ ಧರ್ಮಿಯರು ಅಂಗಡಿಗಳನ್ನು ಹಾಕುವಂತಿಲ್ಲ ಎಂಬ ಕಾನೂನು ತಂದವರು ಕಾಂಗ್ರೆಸ್​​ನವರು. ಇದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಕೋರ್ಟ್ ತೀರ್ಪಿಗೆ ಬೆಲೆ ನೀಡಬೇಕು ಎಂದು ಮುಸಲ್ಮಾನರಿಗೆ ಒಬ್ಬರೇ ಒಬ್ಬ ಕಾಂಗ್ರೆಸ್ ನಾಯಕರು ಹೇಳಿಲ್ಲ ಎಂದರು.

ಕಾಂಗ್ರೆಸ್ ಕರ್ನಾಟಕದಲ್ಲಿ ಉಸಿರಾಡುತ್ತಿದೆ : ಕಾಂಗ್ರೆಸ್ ಎಲ್ಲಾ ಕಡೆ ಹೋಗಿದೆ. ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಇಷ್ಟು ಸೀಟು ಸಹ ಬರಲ್ಲ. ಸಿದ್ದರಾಮಯ್ಯ ಇದೇ ನನ್ನ ಕೊನೆಯ ಚುನಾವಣೆ ಅಂತಾ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಚುನಾವಣೆಗೆ ನಿಂತರೆ, ಕಾಂಗ್ರೆಸ್‌ಗೆ ಇದೆ ಕೊನೆಯ ಚುನಾವಣೆಯಾಗಲಿದೆ‌. ಮುಸ್ಲಿಂರಿಗೆ ಕಾಂಗ್ರೆಸ್ ಬಿಜೆಪಿ ಗುಮ್ಮ ಎಂದು ತೋರಿಸಿ ದೂರವಿಡುವ ಪ್ರಯತ್ನ ಮಾಡ್ತಾ ಇದೆ. ಆದರೆ, ಮುಂದೆ ಮುಸ್ಲಿಂರು ಸಹ ಬಿಜೆಪಿಗೆ ಬರುತ್ತಾರೆ ಎಂದರು.

ಕೇಸ್​​ ದಾಖಲಿಸಿದರೂ ನಾನು ಹೆದರಲ್ಲ: ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದವನು. ಡಿ.ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹಾಗೂ ನಲಪಾಡ್ ಪರಪ್ಪನ ಆಗ್ರಹಾರ ಜೈಲಿಗೆ ಏನೂ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದ್ರಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ನನ್ನ ವಿರುದ್ದ ಎಷ್ಟು ಕೇಸ್ ​​ದಾಖಲಿಸಿದರೂ ನಾನು ಹೆದರಲ್ಲ ಎಂದರು.

ಇದನ್ನೂ ಓದಿ: ಸ್ವಾಮೀಜಿಗಳ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ: ಮನಗೂಳಿ ಸಂಗನಬಸವ ಶ್ರೀ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.