ETV Bharat / state

Shivamogga Airport: ಆಗಸ್ಟ್‌ನಿಂದ ಮಲೆನಾಡಿನಲ್ಲಿ ಲೋಹದ ಹಕ್ಕಿ ಹಾರಾಟ ಸಾಧ್ಯತೆ?

author img

By

Published : Jun 14, 2023, 9:47 AM IST

Updated : Jun 14, 2023, 1:10 PM IST

ಮಲೆನಾಡು ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್‌ ತಿಂಗಳಿನಲ್ಲಿ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ ಎನ್ನಲಾಗಿದೆ.

shivamogga airport
ಶಿವಮೊಗ್ಗ ವಿಮಾನ ನಿಲ್ದಾಣ

ಶೀಘ್ರದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಹಾರಾಟ ಯಾವಾಗ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸೋಗಾನೆ ಬಳಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಯಾಗಿ ನಾಲ್ಕು ತಿಂಗಳು ಕಳೆದಿವೆ. ಆದರೂ ಇನ್ನೂ ವಿಮಾನ ಹಾರಾಟ ಪ್ರಾರಂಭವಾಗಿಲ್ಲ. ಇದು ಮಲೆನಾಡಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ.

ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 28 ರಂದು ಲೋಕಾರ್ಪಣೆ ಮಾಡಿದರು. ಸುಮಾರು 750 ಎಕರೆ ಪ್ರದೇಶದಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಹೊರತು ಪಡಿಸಿ ಎರಡನೇ ಅತಿ ದೊಡ್ಡ ರನ್ ವೇ ಇದಾಗಿದೆ. ಇಲ್ಲಿ ಬೃಹತ್ ಗಾತ್ರದ ವಿಮಾನಗಳನ್ನು ಸಹ ಲ್ಯಾಂಡ್ ಮಾಡಬಹುದಾಗಿದೆ. ರಾತ್ರಿ ವೇಳೆ ಕೂಡ ವಿಮಾನ ಲ್ಯಾಂಡ್ ಆಗುವ ಸೌಕರ್ಯವಿದೆ.

ಟರ್ಮಿನಲ್ ಅನ್ನು ಅತ್ಯಂತ ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್​ನ ಮುಂಭಾಗ ಕಮಲಾಕೃತಿಯನ್ನು ಹೊಂದಿದ್ದರೆ, ಹಿಂಭಾಗ ಹದ್ದಿನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕಿಂತ ವಿಭಿನ್ನವಾದ ವಿನ್ಯಾಸವನ್ನು ಇದು ಹೊಂದಿದೆ. ಈ ವಿಮಾನ ನಿಲ್ದಾಣವನ್ನು ಹೈದರಾಬಾದ್ ಮೂಲದ ಕಂಪನಿ ನಿರ್ಮಾಣ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿದೆ.

ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ರಾಜ್ಯದ ಏಕೈಕ ವಿಮಾನ ನಿಲ್ದಾಣ: ಶಿವಮೊಗ್ಗದ ಕುವೆಂಪು ವಿಮಾನ‌ ನಿಲ್ದಾಣವು ರಾಜ್ಯ ಸರ್ಕಾರದ ಸುರ್ಪದಿಯಲ್ಲಿ ಇರುವ ಏಕೈಕ‌ ವಿಮಾನ‌ ನಿಲ್ದಾಣವಾಗಿದೆ. ರಾಜ್ಯದ ಉಳಿದ ವಿಮಾನ‌‌ ನಿಲ್ದಾಣಗಳು‌ ಕೇಂದ್ರದ ಏರ್ಪೋರ್ಟ್ ಅಥಾರಿಟಿ‌ ಆಫ್ ಇಂಡಿಯಾದ ವ್ಯಾಪ್ತಿಯಲ್ಲಿವೆ.

ವಿಮಾನ ನಿಲ್ದಾಣ ಉದ್ಘಾಟನೆಯಾದಾಗ ಜೂನ್ ವೇಳೆಗಾಗಲೇ ವಿಮಾನ ಹಾರಾಟ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಜೂನ್ ಪ್ರಾರಂಭವಾದರೂ ವಿಮಾನ ಹಾರಾಟ ಪ್ರಾರಂಭವಾಗಿಲ್ಲ. ಇದು ಮಲೆನಾಡಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ. ಮೂಲಗಳ ಪ್ರಕಾರ, ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಆಗಸ್ಟ್ 08 ಕ್ಕೆ ವಿಮಾನ ಹಾರಾಟವಾಗಬಹುದು ಎನ್ನಲಾಗುತ್ತಿದೆ. ಈ ಕುರಿತು ಮಾತನಾಡಿರುವ ಸಂಸದರಾದ ಬಿ.ವೈ.ರಾಘವೇಂದ್ರರವರು, "ಶಿವಮೊಗ್ಗದಿಂದ ಹಾರಾಟ ಮಾಡಲು ಇಂಡಿಗೋ ವಿಮಾನ ಸಂಸ್ಥೆ ಜೊತೆ ಮಾತುಕತೆ ಮಾಡಲಾಗಿದೆ. ಇಂಡಿಗೋ ವಿಮಾನ ಸಂಸ್ಥೆಯು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲು ತೀರ್ಮಾನಿಸಿದೆ. ನಂತರದ ದಿನಗಳಲ್ಲಿ ಬೆಂಗಳೂರಿನಿಂದ ದೆಹಲಿ, ಮುಂಬೈಗೆ ಹಾರಾಟ ನಡೆಸಲಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಮಲದ ರೂಪದಲ್ಲಿರುವ ಶಿವಮೊಗ್ಗ ವಿಮಾನ ಟರ್ಮಿನಲ್: ಹೊದಿಕೆ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ

ವಿಮಾನ ಹಾರಾಟದ ಕುರಿತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಗೋಪಿನಾಥ್ ಅವರು, "ಶಿವಮೊಗ್ಗದಿಂದ ವಿಮಾನ ಹಾರಾಟ ಆಗಬೇಕು ಎಂಬುದು ಜಿಲ್ಲೆಯ ಜನತೆಯ ಬಹು ವರ್ಷದ ಕನಸು. ಕಳೆದ 15 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ವಿಮಾನ ನಿಲ್ದಾಣವನ್ನು ಕಳೆದ ಫೆಬ್ರವರಿಯಲ್ಲಿ ಉದ್ಘಾಟನೆ ಮಾಡಲಾಗಿದೆ.

ನಿಲ್ದಾಣ ಪ್ರಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಾಟ ಪ್ರಾರಂಭವಾಗಲ್ಲ. ಅದಕ್ಕೆ ಸಂಬಂಧಿಸಿದಂತೆ ಕೆಲ ಕೆಲಸಗಳು ಇರುತ್ತವೆ. ಈಗ ಅದೆಲ್ಲಾ ಮುಗಿದು ಆಗಸ್ಟ್​ನಲ್ಲಿ ವಿಮಾನ ಹಾರಾಟ ಆಗುವ ನಿರೀಕ್ಷೆ ಇದೆ. ಮೊದಲು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟ ಇರುತ್ತದೆ‌. ಅಲ್ಲಿಂದ ಪ್ರಪಂಚದ ವಿವಿಧೆಡೆ ಸಂಚರಿಸಬಹುದಾಗಿದೆ. ಇದಕ್ಕೆ ನಾವು ಶಿವಮೊಗ್ಗದಿಂದಲೇ ಟಿಕೇಟ್ ಬುಕ್ ಮಾಡಬಹುದಾಗಿದೆ. ಶಿವಮೊಗ್ಗದಿಂದ ವಿಮಾನ ಹಾರಾಟ ಪ್ರಾರಂಭವಾದರೆ, ಕೈಗಾರಿಕೆ, ವಾಣಿಜ್ಯ ಸೇರಿದಂತೆ ಎಲ್ಲಾ ರೀತಿಯ ಅನುಕೂಲ ಆಗಲಿದೆ. ಅಲ್ಲದೆ,‌ ಶಿವಮೊಗ್ಗ ಸೇರಿದಂತೆ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಸಹ ಇದು ಅನುಕೂಲಕರವಾಗಲಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆಗೆ ಒಪ್ಪಿಗೆ ಸಿಕ್ಕಿದೆ: ಸಚಿವ ಎಂ.ಬಿ.ಪಾಟೀಲ್

Last Updated : Jun 14, 2023, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.