ETV Bharat / state

ಬೆಳಗಾವಿ ಮಹಿಳಾ ವಿವಸ್ತ್ರ ಘಟನೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ

author img

By ETV Bharat Karnataka Team

Published : Dec 16, 2023, 3:48 PM IST

Updated : Dec 16, 2023, 7:02 PM IST

ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ಖಂಡಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

bjp protest
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿದರು.

ಶಿವಮೊಗ್ಗ:ಬೆಳಗಾವಿಯಲ್ಲಿ ನಡೆದಿದ್ದ ಮಹಿಳಾ ವಿವಸ್ತ್ರ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಳಗಾವಿ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಘಟನೆ ರಾಜ್ಯವೇ ತಲೆ ತಗ್ಗಿಸುವಂತದ್ದು, ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ದುರದುಷ್ಟಕರ. ಆದರೆ, ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸತ್ಯ ಶೋಧನ ಸಮಿತಿ ರಚನೆ ಮಾಡಿದ್ದಾರೆ. ಈ ತಂಡವು ಇಂದು ಬೆಳಗಾವಿಗೆ ಭೇಟಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಅವಮಾನಕ್ಕೊಳಗಾದ ಮಹಿಳೆಗೆ ಸಾಂತ್ವನ ಸಹ ಹೇಳಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.

ಕಾಂಗ್ರೆಸ್​​ಗೆ ಮಹಿಳೆಯರ ಓಟ್ ಬೇಕು ರಕ್ಷಣೆ ಬೇಡ: ಈಶ್ವರಪ್ಪ ಆರೋಪ- ಈ ವೇಳೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ‌ ನಡೆಸಿದರು. ಮೊನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಏನೂ ಭಾಷೆ ಬಳಸಬೇಕು ಅಂತ ಗೊತ್ತಾಗುತ್ತಿಲ್ಲ. ಹಿಂದೂ ಸಮಾಜದಲ್ಲಿ ಭಾರತೀಯ ಸಂಸ್ಕೃತಿ ಇದೆಯೋ ಇಲ್ವೋ, ಆದರೆ ಈ ಘಟನೆ ನಡೆದ ಬಗ್ಗೆ ಮಾಹಿತಿ ಕೇಳಿಯಾದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಲ್ಲಿಗೆ ಹೋಗಬೇಕಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಈ ಘಟನೆ ಕುರಿತು ಮಾತಾಡಬೇಕಿತ್ತು. ಆಗ ಅವರಿಗೆ ಅಕ್ಕ ತಂಗಿಯರು ಇದ್ದಾರೆ ಅನ್ನಬಹುದಿತ್ತು. ಇವರಿಗ್ಯಾರಿಗೂ ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದಿರುವುದು ಸ್ಪಷ್ಟ ಆಗುತ್ತದೆ ಎಂದು ಆರೋಪಿಸಿದರು.

ಸಿಎಂ ಇವತ್ತಿನ ವರೆಗೆ ರಾಜ್ಯದ ಜನರ ಕ್ಷೇಮೆ ಕೇಳಿಲ್ಲ‌. ನನ್ನ ಆಡಳಿತದಲ್ಲಿ ಹೀಗಾಗಿದೆ ಅಂತ ಸಿಎಂ ಕ್ಷಮೆ ಕೇಳಬೇಕಿತ್ತು. ಮಹಿಳೆಯರ ವೋಟ್​​ ಬೇಕು ಆದರೆ, ಅವರ ರಕ್ಷಣೆ ಬೇಡ, ಇಂತಹ ಘಟನೆ ನಡೆದಿರುವುದು ರಾಜ್ಯದಲ್ಲಿ ಇದುವರೆಗೂ ಕೇಳಿಲ್ಲ. ನಮ್ಮ ರಾಜ್ಯದಲ್ಲಿ ನನ್ನ ಅಕ್ಕ ತಂಗಿಯರಿಗೆ ಅಪಮಾನ ಆಗಿದೆ ಅಂತ ಕೇಂದ್ರಕ್ಕೆ ತಿಳಿಸಬೇಕಿತ್ತು. ಆಗ ಸಿದ್ದರಾಮಯ್ಯಗೆ ಅಕ್ಕ ತಂಗಿಯರು ಇದ್ದಾರೆ ಅನ್ನಬಹುದಿತ್ತು. ಮುಂದಿನ ದಿನಗಳಲ್ಲಿ ಇಂಥ ಘಟನೆ ಸಂಭವಿಸಬಾರದೆಂದು ಈ ಪ್ರತಿಭಟನೆಗೆ ಬಂದಿದ್ದೇನೆ ಎಂದು ಹೇಳಿದರು.

ಬರುವಂತಹ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೇಜವಾಬ್ದಾರಿ ಕಾಂಗ್ರೆಸ್​ಗೆ ಜನ ತಮ್ಮ ತಕ್ಕ ಪಾಠ ಕಲಿಸ್ತಾರೆ. ಈ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ ಎಂದರು.

ಇದನ್ನೂಓದಿ: ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ ಸಹಿಸಲಾಗದ ದುಷ್ಕೃತ್ಯ: ಬಿಜೆಪಿ ಪ್ರತಿಭಟನೆಯಲ್ಲಿ ಡಿವಿಎಸ್​ ಆಕ್ರೋಶ

Last Updated :Dec 16, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.