ETV Bharat / state

ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ ಸಹಿಸಲಾಗದ ದುಷ್ಕೃತ್ಯ: ಬಿಜೆಪಿ ಪ್ರತಿಭಟನೆಯಲ್ಲಿ ಡಿವಿಎಸ್​ ಆಕ್ರೋಶ

author img

By ETV Bharat Karnataka Team

Published : Dec 16, 2023, 1:26 PM IST

Updated : Dec 16, 2023, 1:42 PM IST

Case where a woman was paraded naked: ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಬೆಂಗಳೂರು ನಗರದಲ್ಲಿ ಇಂದು (ಶನಿವಾರ) ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

Case of Belgaum woman's undressing and assault
ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಬೆಳಗಾವಿಯ ಜಿಲ್ಲೆಯ ಗ್ರಾಮಯೊಂದರಲ್ಲಿ ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಬೆಂಗಳೂರು ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಮುಖ್ಯಮಂತ್ರಿ, ಸಂಸದ ಡಿ ವಿ ಸದಾನಂದಗೌಡ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ನೇತೃತ್ವದಲ್ಲಿ ಇಂದು ಮೇಖ್ರಿ ಸರ್ಕಲ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಸ್​ಗಳಲ್ಲಿ ಕರೆದೊಯ್ದರು.

ರಾಜ್ಯದಲ್ಲಿ ಹದಗೆಟ್ಟ ಕಾನೂನು, ಸುವ್ಯವಸ್ಥೆ- ಮಾಜಿ ಸಿಎಂ ಆರೋಪ: ಮಾಜಿ ಸಿಎಂ ಡಿ ವಿ ಸದಾನಂದಗೌಡ ಮಾತನಾಡಿ, ''ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರ ಮಾಡಿ, ಹಲ್ಲೆ ನಡೆಸಿ ಮೆರವಣಿಗೆ ಮಾಡಿರುವ ಘಟನೆಯನ್ನು ಯಾರು ಕೂಡ ಸಹಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟು ಹೋಗಿದೆ'' ಎಂದು ಆಕ್ಷೇಪ ವ್ಯಕ್ತಪಡಿಸಿದರು.

''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದರಿಂದ ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಪೊಲೀಸರು ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಹೇಳಿದ್ದಾರೆ. ಇಷ್ಟು ಕೆಟ್ಟ ಆಡಳಿತವನ್ನು ನನ್ನ ಜೀವನದಲ್ಲೇ ನೋಡಿಲ್ಲ. ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗಿದೆ'' ಎಂದು ಟೀಕಿಸಿದರು.

''ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ರಾಜ್ಯದ ಆಡಳಿತವೇ ಬೇಡ ಎಂಬಂತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ಇಳಿಸಿ ಹೊಸ ಸಿಎಂ ಮಾಡಲು ಪ್ರಯತ್ನದಲ್ಲಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತಗೊಂಡು ಸರ್ಕಾರ ಕೆಲಸ ಮಾಡುತ್ತಿಲ್ಲ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಎಚ್ಚೆತ್ತುಕೊಳ್ಳುವವರೆಗೂ ಹೋರಾಟ ಮಾಡುತ್ತೇವೆ'' ಎಂದು ಎಚ್ಚರಿಸಿದರು.

ಇಂದು ಬೆಳಗಾವಿಗೆ ಮಹಿಳಾ ಸಂಸದರ ನಿಯೋಗ ಕೂಡ ಭೇಟಿ ಕೊಟ್ಟಿದೆ. ನಾವು ಈಗಾಗಲೇ ಇದನ್ನು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ. ಸೋಮವಾರ ನಡೆಯಲಿರುವ ಸಂಸತ್ ಅಧಿವೇಶನದಲ್ಲೂ ಇದನ್ನು ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು. ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಲಾಯಿತು. ಇದೇ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ, ಬಿಜೆಪಿ ಮಹಿಳಾ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಆಶಾ ರಾವ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ವಿಜಯಲಕ್ಷ್ಮೀ ಆನಂದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿ, ಹಲ್ಲೆ ಪ್ರಕರಣ: ರಾಜ್ಯ ಸರ್ಕಾರ, ಡಿಜಿಪಿಗೆ ಎನ್​ಹೆಚ್​ಆರ್​ಸಿ ನೋಟಿಸ್

Last Updated : Dec 16, 2023, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.