ETV Bharat / state

144 ಸೆಕ್ಷನ್ ರಾಗಿಗುಡ್ಡಕ್ಕೆ ಸಿಮಿತಗೊಳಿಸಿ, ಇಡೀ ನಗರಕ್ಕೆ ಅನ್ವಯ ಬೇಡ: ಕೆ ಎಸ್​ ಈಶ್ವರಪ್ಪ, ಗೋಪಿನಾಥ್ ಮನವಿ

author img

By ETV Bharat Karnataka Team

Published : Oct 2, 2023, 4:39 PM IST

Updated : Oct 2, 2023, 10:50 PM IST

ಸೆಕ್ಷನ್ 144 ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟು‌ ಸ್ಥಗಿತಗೊಂಡಿದ್ದು, ಇದರಿಂದ ಸೆಕ್ಷನ್ ಇಡೀ​ ನಗರಕ್ಕೆ ಅನ್ವಯ ಬೇಡ ಎಂದು ಕೆ ಎಸ್​ ಈಶ್ವರಪ್ಪ ಮತ್ತು ಗೋಪಿನಾಥ್ ಮನವಿ ಮಾಡಿದ್ದಾರೆ.

ಕೆ ಎಸ್​ ಈಶ್ವರಪ್ಪ
ಕೆ ಎಸ್​ ಈಶ್ವರಪ್ಪ

ರಾಗಿ ಗುಡ್ಡದಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಶಿವಮೊಗ್ಗ : ರಾಗಿಗುಡ್ಡದಲ್ಲಿ ಭಾನುವಾರ ನಡೆದ ಅಹಿತಕರ ಘಟನೆಯಿಂದ 144 ಸೆಕ್ಷನ್ ಹಾಕಲಾಗಿದೆ. ಶಿವಮೊಗ್ಗ ನಗರಕ್ಕೆ ಸೆಕ್ಷನ್ ಅನ್ವಯ ಮಾಡುವುದು ಬೇಡ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಗೋಪಿನಾಥ್ ಮತ್ತು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಮನವಿ‌ ಮಾಡಿದ್ದಾರೆ.

ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಪೊಲೀಸ್ ಇಲಾಖೆಯು ನಿಷೇಧಾಜ್ಞೆ ಜಾರಿ ಮಾಡಿದ್ದು ಸ್ವಾಗರ್ತವಾಗಿದೆ. ಆದರೆ ಅದೇ ಸೆಕ್ಷನ್ ಅನ್ನು ಇಡೀ ನಗರಕ್ಕೆ ವಿಸ್ತರಿಸಿರುವುದು‌ ಖಂಡನೀಯವಾಗಿದೆ. ಸೆಕ್ಷನ್ ಇದೆ ಎಂದು ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ತುಂಬ ನಷ್ಟ ಉಂಟಾಗುತ್ತಿದೆ ಎಂದಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಗಾಂಧಿ ಬಜಾರ್ ನಲ್ಲಿ ವ್ಯಾಪಾರ ವಹಿವಾಟು‌ ನಡೆದಿಲ್ಲ. ಈಗ ಮತ್ತೆ ಸೆಕ್ಷನ್ ಎಂದು ಹಾಕಿದರೆ ವ್ಯಾಪಾರಿಗಳು ಹೇಗೆ ವ್ಯಾಪಾರ ಮಾಡಬೇಕು ಗೋಪಿನಾಥ್ ಎಂದು ಪ್ರಶ್ನಿಸಿದರು. ಇದರಿಂದ ನಮ್ಮ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆಯು ಎಸ್ಪಿ ಅವರಿಗೆ ನಗರ ಭಾಗದಲ್ಲಿ ಸೆಕ್ಷನ್ ಹಾಕುವುದನ್ನು ತೆಗೆದುಬೇಕೆಂದು ವಿನಂತಿಕೊಂಡರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ವಸಂತ ಹೋಬಳಿದಾರ್ ಸೇರಿದಂತೆ ನಿರ್ದೇಶಕರುಗಳು ಹಾಜರಿದ್ದರು.

ಆಸ್ಪತ್ರೆಗೆ ಭೇಟಿ ಕೊಟ್ಟ ಬಿಜೆಪಿ ಮುಖಂಡರು : ಘಟನೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಸೋಮವಾರ ಬಿಜೆಪಿ ಹಿರಿಯ ನಾಯಕರಾದ ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಇತರರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಂಸದ ರಾಘವೇಂದ್ರ ಹಾಗೂ ಶಾಸಕ ಚನ್ನಬಸಪ್ಪ ಅವರು ಎಸ್ಪಿ ಮಿಥುನ್ ಕುಮಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ‌ ಮಾಡಿ ಶಿವಮೊಗ್ಗ ನಗರದಾದ್ಯಂತ ಹಾಕಿರುವ ಸೆಕ್ಷನ್ ತೆರವು ಹಾಗೂ ರಾಗಿ ಗುಡ್ಡ ಗಲಾಟೆಯ ಕುರಿತು ಮಾಹಿತಿ ಪಡೆದುಕೊಂಡರು.

144 ಸೆಕ್ಷನ್ ಶಿವಮೊಗ್ಗ ನಗರದಾದ್ಯಂತ ವಿಸ್ತರಣೆ ಮಾಡಿದ್ದು ಸರಿಯಲ್ಲ. ತಕ್ಷಣ ಶಿವಮೊಗ್ಗ ನಗರದ 144 ಸೆಕ್ಷನ್ ತೆಗೆಯಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೂಡ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆಯದ್ದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಗಲಾಟೆ ನಡೆಯಲು ಕಾರಣರಾದವರನ್ನು ತಕ್ಷಣ ಪೊಲೀಸ್ ಇಲಾಖೆ ಬಂಧಿಸಬೇಕು ಎಂದು ಪೊಲೀಸ್​ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ ಈಶ್ವರಪ್ಪ, ಗೃಹ ಸಚಿವರು ತಮ್ಮ ಪದವಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಎಸ್ಪಿ ಪ್ರತಿಕ್ರಿಯೆ : ''ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಸಣ್ಣ ಪ್ರಮಾಣದ ಘರ್ಷಣೆ ಉಂಟಾಗಿದೆ. ಮಾಹಿತಿ ಬಂದಾಕ್ಷಣ ನಮ್ಮ ಪೊಲೀಸ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಾನು ಎರಡು ಗುಂಪುಗಳ ಜೊತೆ ಮಾತನಾಡಿದ್ದೇನೆ. ಆದರೆ, ಮೆರವಣಿಗೆ ವೇಳೆ ಕೆಲ ಯುವಕರ ಗುಂಪು ದಾಂಧಲೆ ನಡೆಸಿದೆ.

ನಂತರ ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು. ಘಟನೆಯಿಂದ ನಮ್ಮ ಕೆಲ ಸಿಬ್ಬಂದಿಗಳು ಹಾಗು ಅಲ್ಲಿನ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದ್ದರ ಕುರಿತು ದೂರು ನೀಡಲು ತಿಳಸಲಾಗಿದೆ. ಈಗ ವಿಡಿಯೋ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು'' ಎಂದು ಎಸ್ಪಿ ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಕಲ್ಲು ತೂರಾಟ: ಐಜಿಪಿ ತ್ಯಾಗರಾಜನ್​​ ಭೇಟಿ, ಪರಿಸ್ಥಿತಿ ಶಾಂತ

Last Updated : Oct 2, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.