ETV Bharat / state

ಹಿಂದೂಗಳ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿರುವುದು ಸಂತಸದ ವಿಚಾರ: ಕೆ ಎಸ್ ಈಶ್ವರಪ್ಪ

author img

By

Published : Sep 12, 2022, 9:03 PM IST

ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶೃಂಗಾರ ಗೌರಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಐವರು ಹಿಂದೂ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆಗೆ ಕೋರ್ಟ್​ ಅನುಮತಿಸಿರುವುದು ಸಂತೋಷದ ವಿಚಾರವಾಗಿದೆ. ಇದು ಹಿಂದೂಗಳ ಜಯವಾಗಿದೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.

ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಹಿಂದೂಗಳ ಶ್ರದ್ಧಾ ಕೇಂದ್ರದ ಬಗ್ಗೆ ಭೂಮಿ‌ ಮೇಲಿನ ಯಾವುದೇ ಕೋರ್ಟ್​ಗೆ ಹೋದ್ರೂ ಸಹ ಅಲ್ಲಿ ನಮಗೆ ಜಯ ಸಿಗುತ್ತದೆ. ಗ್ಯಾನವಾಪಿ ಮಸೀದಿಯಲ್ಲಿ ವರ್ಷ ಪೂರ್ತಿ ಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿ ಐದು ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಹಿಂದೂಗಳ ಅರ್ಜಿಯನ್ನು ಜಿಲ್ಲಾ ಕೋರ್ಟ್ ಪುರಸ್ಕರಿಸಿರುವುದು ಸಂತೋಷದ ವಿಚಾರವಾಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಹಿಂದೂಗಳ ಎರಡನೇ ಜಯ: ಇಂದು ರಾಷ್ಟ್ರಭಕ್ತರು ಸಂತೋಷ ಪಡುವ ದಿನವಾಗಿದೆ. ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿನ ಮಸೀದಿಯಲ್ಲಿ ಶೃಂಗಾರ ಗೌರಿ ಸೇರಿ ವಿವಿಧ ದೇವತೆಗಳಿವೆ.‌ ಇಲ್ಲಿ ವರ್ಷಕ್ಕೊಮ್ಮೆ ಐವರು ಮಹಿಳೆಯರಿಗೆ ಪೂಜೆಗೆ ಅವಕಾಶ ನೀಡಲಾಗುತಿತ್ತು. ಈಗ ವರ್ಷವಿಡಿ ಪೂಜೆಗೆ ಅವಕಾಶ ನೀಡುವ ವಿಚಾರವನ್ನು ಚರ್ಚೆಗೆ ತೆಗೆದುಕೊಂಡಿರುವುದು ಹಿಂದೂಗಳ ಎರಡನೇ ಜಯವಾಗಿದೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಮೊದಲನೆಯದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿರುವುದು. ‌ನಮಗೆ ಕಾಶಿ, ಮಥುರಾ ಹಾಗೂ ಅಯೋಧ್ಯೆ ಮೂರು ಶ್ರದ್ಧಾ ಕೇಂದ್ರಗಳಾಗಿವೆ. ಈ ಮೂರು ಕಡೆ ಮುಸಲ್ಮಾನರು ದಾಳಿ ನಡೆಸಿ, ಅಲ್ಲಿ ತಮ್ಮ ಮಸೀದಿಗಳನ್ನು ನಿರ್ಮಿಸಿದ್ದರು. ಅಯೋಧ್ಯೆಯಲ್ಲಿ ಬಾಬರ್ ಮಸೀದಿ ನಿರ್ಮಾಣ ಮಾಡಲಾಗಿತ್ತು. ಸ್ವಾತಂತ್ರ್ಯ ಬಂದರೂ ಸಹ ಅದು ಗುಲಾಮರ ಸಂಕೇತವಾಗಿತ್ತು. ಈಗ ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಅದೇ ರೀತಿ ಕಾಶಿಯಲ್ಲೂ ಸಹ ಗ್ಯಾನವಾಪಿ ಮಸೀದಿ ಒಳಗೆ ಇರುವ ಎಲ್ಲ ದೇವತೆಗಳಿಗೆ ಪೂಜೆ ನಡೆಯಬೇಕೆಂಬ ಬಯಕೆ ಇದೆ. ಪೂಜೆಯ ವಿಚಾರವಾಗಿ ಸೆಪ್ಟಂಬರ್ 22 ರಿಂದ ವಿಚಾರಣೆ ನಡೆಯಲಿದೆ. ಮಥುರಾದಲ್ಲಿ ಶ್ರೀಕೃಷ್ಣನ ದೇವಾಲಯದ ಪಕ್ಕದಲ್ಲೊಂದು ಮಸೀದಿ ಇದೆ.‌ ಅಲ್ಲೂ ಪೂರ್ಣ ಪ್ರಮಾಣದ ದೇವಾಲಯ ನಿರ್ಮಾಣವಾಗಲಿ ಎಂದು ಆಶೀಸುತ್ತೇನೆ ಎಂದರು.

ಕಾಂಗ್ರೆಸ್ ಬೆತ್ತಲಾಗುತ್ತದೆ: ಬಿಜೆಪಿಯನ್ನು ಟೀಕಿಸಲು ಹೋಗಿ ಕಾಂಗ್ರೆಸ್ ಬೆತ್ತಲಾಗುತ್ತದೆ. ಕಾಂಗ್ರೆಸ್​​ನನ್ನು ರಾಜ್ಯ ಹಾಗೂ ದೇಶದ ಜನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ಮಾಡ್ತಾ ಇದ್ದಾರೆ.‌ ಕಾಂಗ್ರೆಸ್​ನಲ್ಲಿ ಸಿಎಂ ಆಗಬೇಕೆಂಬ ಗುಂಪುಗಾರಿಕೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಬೆತ್ತಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಜ್ಞಾನವಾಪಿ ಶೃಂಗಾರಗೌರಿಗೆ ಪೂಜೆ: ಮಹಿಳೆಯರ ಅರ್ಜಿ ಪುರಸ್ಕರಿಸಿದ ವಾರಾಣಸಿ ಕೋರ್ಟ್​

ಭಾರತ್ ಜೋಡೋ ಪಾದಯಾತ್ರೆ ಯಾಕೆ?: ಕಾಂಗ್ರೆಸ್ ಯಾಕೆ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು. ‌ಕಾಂಗ್ರೆಸ್ ತನ್ನ ಅಧಿಕಾರಕ್ಕಾಗಿ ಭಾರತವನ್ನು ಎರಡು ತುಂಡು ಮಾಡಿತು. ಮೊದಲು ಅಖಂಡ ಭಾರತವನ್ನು ತುಂಡು ಮಾಡಿ, ಈಗ ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾಡಿದ್ದು, ಅಖಂಡ ಭಾರತಕ್ಕಾಗಿ, ಭಾರತ ಮತ್ತೆ ಅಖಂಡವಾಗಬೇಕು. ಆಗ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಲಭಿಸುತ್ತದೆ. ರಾಹುಲ್ ಗಾಂಧಿ ಮೊದಲು ತಮ್ಮ ಪಕ್ಷ ಮಾಡಿದ್ದು ತಪ್ಪು ಎಂದು ಹೇಳಲಿ, ನಂತರ ಪಾದಯಾತ್ರೆ ನಡೆಸಲಿ ಎಂದು ಕುಟುಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.