ETV Bharat / state

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ.. ದುರುದ್ದೇಶದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಪ್ರತಿಭಟನೆ : ಆರಗ ಜ್ಞಾನೇಂದ್ರ

author img

By ETV Bharat Karnataka Team

Published : Sep 13, 2023, 4:36 PM IST

former-minister-araga-jnanendra-spoke-at-shivamogga
ಆರಗ ಜ್ಞಾನೇಂದ್ರ

ದುರುದ್ದೇಶದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ನಮ್ಮ ಪ್ರತಿಭಟನೆ ಇರುತ್ತದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ.. ದುರುದ್ದೇಶದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಪ್ರತಿಭಟನೆ : ಆರಗ ಜ್ಞಾನೇಂದ್ರ

ಶಿವಮೊಗ್ಗ : ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಯಾರು ವಂಚನೆ ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ. ಆದರೆ ದುರುದ್ದೇಶದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ನಮ್ಮ ಪ್ರತಿಭಟನೆ ಇರುತ್ತದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಚೈತ್ರಾ ಕುಂದಾಪುರ ಬಂಧನದ ಕುರಿತು ಪ್ರತಿಕ್ರಿಯಿಸಿದರು. ಯಾರು ವಂಚನೆ ಮಾಡಿದ್ದರೋ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ. ನಮಗೆ ಯಾವುದೇ ಆಕ್ಷೇಪ ಇಲ್ಲ ಎಂದರು.

ಸುಧಾಕರ್ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು : ಸಚಿವ ಸುಧಾಕರ್ ವಂಚನೆ ಪ್ರಕರಣ ಕುರಿತು ನಾನು ಮಾಧ್ಯಮದಲ್ಲಿ ನೋಡಿದೆ. ಸುಧಾಕರ್​ ಅವರಿಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನು ಇಲ್ಲ. ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಸುಧಾಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ವಿಚಾರಣೆ ನಡೆಯಲಿ. ಏನಾಗಿದೆ ಎಂಬ ಸತ್ಯ ಹೊರಬರಲಿ ಎಂದು ಒತ್ತಾಯಿಸಿದರು.

ಸುಧಾಕರ್ ಬಗ್ಗೆ ಡಿಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ‌. ಆದರೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎಂದು ಗೊತ್ತಿಲ್ಲ. ಒಟ್ಟಾರೆ, ದಲಿತರಿಗೆ ಅನ್ಯಾಯ ಆಗಬಾರದು. ದಲಿತರ ಮೇಲೆ ದೌರ್ಜನ್ಯ ಆಗಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಆದಷ್ಟು ಬೇಗ ಬರ ಘೋಷಣೆ ಮಾಡಬೇಕು : ಮಲೆನಾಡಿನಲ್ಲಿ ಇಷ್ಟು ಕಡಿಮೆ ಮಳೆಯಾಗಿದ್ದು ನಾನು ನೋಡೇ ಇರಲಿಲ್ಲ. ಈ ವರ್ಷ ಅಷ್ಟು ಕಡಿಮೆ ಮಳೆ ಬಿದ್ದಿದೆ. ಜಮೀನಿನಲ್ಲಿ ನಾಟಿ ಕೂಡ ಸರಿಯಾಗಿ ಆಗಿಲ್ಲ. ನೀರಿನ ಕೊರತೆ ಇದೆ. ಇದು ಹೀಗೆ ಮುಂದುವರೆದರೆ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಲು ಮೀನಾಮೇಷ ಎಣಿಸಬಾರದು. ಕೇಂದ್ರ ಸರ್ಕಾರ ಏನು ಕೊಡುತ್ತದೆಯೇ ಕೊಡಲಿ. ರಾಜ್ಯದಲ್ಲಿ ಅತಿವೃಷ್ಟಿಯಾದಾಗ ನಮ್ಮ ಸರ್ಕಾರ ಪರಿಹಾರ ನೀಡಿತ್ತು. ಅದೇ ರೀತಿ ರಾಜ್ಯ ಸರ್ಕಾರ ಕೂಡ ಪರಿಹಾರ ನೀಡಬೇಕು. ರೈತರಿಗೆ ಭತ್ತದ ಬೀಜದ, ಗೊಬ್ಬರ ಎಲ್ಲವನ್ನು ನೀಡಬೇಕು. ಈಗಾಗಲೇ ಬೆಳೆ ಒಣಗಿ ಹೋಗಿದೆ. ಇದರ ಬಗ್ಗೆ ಸರ್ಕಾರ ಗಮನಹರಿಸಿರುವಂತೆ ಕಾಣುತ್ತಿಲ್ಲ ಎಂದರು.

ರೈತರಿಗೆ ಪರಿಹಾರ ನೀಡಬೇಕು : ರೈತರು ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ಭತ್ತಕ್ಕೆ ಒಳ್ಳೆ ದರ ಇದೆ. ಆದರೆ ಭತ್ತ ಬೆಳೆಯಲು ಆಗುತ್ತಿಲ್ಲ. ಈಗ ಬೆಂಕಿ ರೋಗ ಬಂದಿದೆ. ಔಷಧ ಸಿಂಪಡಣೆ ಮಾಡಿದರೂ ಸರಿ ಆಗುತ್ತಿಲ್ಲ. ಈಗ ಕರೆಂಟ್​ ಲೋಡ್​ ಶೆಡ್ಡಿಂಗ್​ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು. ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕೋರ್ಟ್​ಗೆ ಮಾಹಿತಿ ಒದಗಿಸಲು ಹಾಗೂ ಮನವರಿಕೆ ಮಾಡಲು ವಿಫಲವಾಗಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಇದನ್ನೂ ಓದಿ : ಸರ್ಕಾರಕ್ಕೆ ಧಮ್ಮು, ತಾಕತ್ತು ಎರಡೂ ಇಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.