ETV Bharat / state

ರಾಮನಗರದಲ್ಲಿ ಇಬ್ಬರು ರೈತರ ಬಲಿ ಪಡೆದ ಒಂಟಿ ಸಲಗ ಕೊನೆಗೂ ಸೆರೆ

author img

By

Published : Jun 8, 2023, 3:59 PM IST

Updated : Jun 8, 2023, 8:28 PM IST

ರಾಮನಗರದಲ್ಲಿ ರೈತರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

wild-elephant-that-killed-the-farmers-was-captured-in-ramnagar
ರಾಮನಗರದಲ್ಲಿ ರೈತರನ್ನು ಬಲಿಪಡೆದಿದ್ದ ಒಂಟಿ ಸಲಗ ಸೆರೆ

ರಾಮನಗರದಲ್ಲಿ ಇಬ್ಬರು ರೈತರ ಬಲಿ ಪಡೆದ ಒಂಟಿ ಸಲಗ ಕೊನೆಗೂ ಸೆರೆ

ರಾಮನಗರ : ಕಳೆದ ಕೆಲವು ದಿನಗಳಿಂದ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಚನ್ನಪಟ್ಟಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು. ನಾಲ್ಕು ದಿನಗಳ ಹಿಂದೆ ಕಾರ್ಯಾಚರಣೆಗೆ ಆಗಮಿಸಿದ್ದ ಅಭಿಮನ್ಯು ನೇತೃತ್ವದ ಐದು ಸಾಕಾನೆಗಳ ತಂಡ ಶೋಧ ಕೈಗೊಂಡಿತ್ತು. ಈ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡಿದ್ದ ಸಲಗವನ್ನು ಇದೀಗ ತೆಂಗಿನಕಲ್ಲು ಅರಣ್ಯ ಪ್ರದೇಶದ ಅರಳಾಳುಸಂದ್ರ ಕಾಡನಕುಪ್ಪೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಬ್ಬರು ರೈತ ಸಾವನ್ನಪ್ಪಿದ್ದರು. ಮಾವಿನ ತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿತ್ತು. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ವೀರಭದ್ರಯ್ಯ ಸಾವನ್ನಪ್ಪಿದ್ದರು.

ವೀರಭದ್ರಯ್ಯ ಅವರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಲೋಕೇಶ್ ಎಂಬವರ ಮಾವಿನ ತೋಟವನ್ನು ಕಾಯುತ್ತಿದ್ದರು. ತೋಟಕ್ಕೆ ಮುಂಜಾನೆ ಆನೆ ದಾಳಿ ನಡೆಸಿದೆ. ದಾಳಿಯಲ್ಲಿ ವೀರಭದ್ರಯ್ಯ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ, ಕಬ್ಬಾಳು ಗ್ರಾಮ ಬಳಿಯೂ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದರು. ಅಂದು ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ ಸೆರೆಗೆ ಆಗಮಿಸಿದ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡದ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಒಂಟಿ ಸಲಗವನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಕಾಡಾನೆಯನ್ನು ತಾತ್ಕಾಲಿಕ ಕ್ಯಾಂಪ್‌ಗೆ ಕರೆತಂದು ಇಂದು ರಾತ್ರಿ ಬೇರೆಡೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?: ಆನೆ ದಾಳಿಯಿಂದ ರಾಮನಗರ ಜಿಲ್ಲೆಯ ಇಬ್ಬರು ರೈತರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದರು. ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷಪುರ ಹೋಬಳಿ ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ (40) ಮತ್ತು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ರೈತ ರವಿ (40) ಮೃತಪಟ್ಟಿದ್ದರು.

ಯಾವುದೇ ವ್ಯಕ್ತಿ ಕಾಡು ಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು. ಇನ್ನು ಮುಂದೆ ಪ್ರಾಣಿ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದರು.

15 ಲಕ್ಷ ರೂ ಪರಿಹಾರ: ಮೃತ ವೀರಭದ್ರಯ್ಯ ಹಾಗೂ ರವಿಯವರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರ ಒದಗಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದರು.

ಇದನ್ನೂ ಓದಿ : ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ

Last Updated : Jun 8, 2023, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.