ETV Bharat / state

ರಾಯಚೂರು: 'ಕಲ್ಯಾಣ ರಥ' ಮಲ್ಟಿ ಎಕ್ಸಲ್​ ವೋಲ್ವೋ ಬಸ್ ಸಂಚಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

author img

By ETV Bharat Karnataka Team

Published : Aug 28, 2023, 6:06 PM IST

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಸಿಂಧನೂರು ಕೇಂದ್ರೀಯ ಬಸ್​ ನಿಲ್ಧಾಣದಲ್ಲಿ ಮಲ್ಟಿ ಎಕ್ಸಲ್​ ವೋಲ್ವೋ ಬಸ್​ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಚಾಲನೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ರಾಯಚೂರು : ಬಿಜೆಪಿಯವರಿಗೆ ಕಾಂಗ್ರೆಸ್ ಮೇಲೆ ಏನಾದರೂ ಹೇಳದೇ ಇದ್ದರೆ ತಿಂದ ಊಟ ಜೀರ್ಣವಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರು ಕೇಂದ್ರೀಯ ಬಸ್ ನಿಲ್ದಾಣದಲ್ಲಿ 'ಕಲ್ಯಾಣ ರಥ' ಮಲ್ಟಿ ಎಕ್ಸಲ್​ ವೋಲ್ವೋ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿ, ಕಾನೂನು ವ್ಯವಸ್ಥೆ ಚೆನ್ನಾಗಿದೆ. ಬೊಮ್ಮಾಯಿಯವರು ವಿರೋಧ ಪಕ್ಷದಲ್ಲಿದ್ದಾರಲ್ಲ, ಏನೋ ಮಾತಾಡ್ಬೇಕು ಮಾತಾಡ್ತಾರೆ. ಅವರಿಗೂ ಎರಡು ವರ್ಷ ಅವಕಾಶ ಸಿಕ್ಕಿತ್ತು. ಸರಿಯಾಗಿ ಆಡಳಿತ ಕೊಟ್ರಾ?. ಒಳ್ಳೆಯ ಆಡಳಿತ ಕೊಟ್ಟಿದ್ದರೆ ಅವರನ್ನೇಕೆ ಜನರು ಮನೆಗೆ ಕಳಿಸ್ತಿದ್ರು?. ನಮ್ಮಲ್ಲಿ ಯಾವುದೇ ತಿಕ್ಕಾಟಗಳಿಲ್ಲ ಎಂದ ಅವರು, ಸುಳ್ಳು ಹೇಳಿ ಹೇಳಿ ಬಿಜೆಪಿಯವರಿಗೆ ರೂಢಿಯಾಗಿದೆ ಎಂದು ಟೀಕಿಸಿದರು.

ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಾವು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಜಾರಿ ಮಾಡಿದ್ದೇವೆ. ಇನ್ನು ಕೆಲವು ದಿನಗಳಲ್ಲಿ ಇನ್ನೊಂದು ಗ್ಯಾರಂಟಿ ಯೋಜನೆಯನ್ನೂ ಜಾರಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಸಹ ಎಲೆಕ್ಟ್ರಾನಿಕ್​ ಬಸ್ ನೀಡುತ್ತೇವೆ. ಹೊಸ ಬಸ್ ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೆಕೆಆರ್​ಟಿಸಿಯಿಂದ 'ಕಲ್ಯಾಣ ರಥ' ಹೈಟೆಕ್ ಸ್ಲೀಪರ್ ಬಸ್ ಸೇವೆ: 'ಕಲ್ಯಾಣ ರಥ' ಎಂಬ ಹೆಸರಿನ ಐಷಾರಾಮಿ ಬಸ್ ಇಂದಿನಿಂದ (ಆಗಸ್ಟ್ 28) ರಸ್ತೆಗಿಳಿದಿದೆ. ಮೊದಲ ಹಂತದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದೆ.

''ಸಂಸ್ಥೆಗೆ ಕಲ್ಯಾಣ ರಥ ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ರಸ್ತೆಗಿಳಿಸಲಾಗುತ್ತಿದೆ. ತದನಂತರ ಪ್ರದೇಶದ ಇತರೆ ಭಾಗಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ'' ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ (ಆಗಸ್ಟ್​- 27-2023ರಂದು) ತಿಳಿಸಿದ್ದರು.

ಸಿಂಧನೂರು-ಬೆಂಗಳೂರು ನಡುವಿನ ಈ ಐಷಾರಾಮಿ ಬಸ್ ಪ್ರತಿದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ - ಗಂಗಾವತಿ - ಬೂದುಗುಂಪ ಕ್ರಾಸ್ - ಹೊಸಪೇಟೆ - ಕೂಡ್ಲಿಗಿ - ಹಿರಿಯೂರು - ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ ಬೆಳಗ್ಗೆ 5:30 ಗಂಟೆಗೆ ತಲುಪಲಿದೆ. ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10:15 ಗಂಟೆಗೆ ಹೊರಟು ನಂತರದ ದಿನ ಬೆಳಗ್ಗೆ 5:45 ಗಂಟೆಗೆ ಸಿಂಧನೂರು ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕೆಕೆಆರ್​ಟಿಸಿಯಿಂದ 'ಕಲ್ಯಾಣ ರಥ' ಹೈಟೆಕ್ ಸ್ಲೀಪರ್ ಬಸ್ ಸೇವೆ: ಆಗಸ್ಟ್ 28ರಂದು ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.