ETV Bharat / state

ವೇಣುಗೋಪಾಲ್ ಕೊಲೆ ಪ್ರಕರಣ ಧರ್ಮ, ರಾಜಕೀಯದ ವ್ಯಾಪ್ತಿಗೆ ಬರುವುದಿಲ್ಲ: ಡಾ. ಎಚ್ ಸಿ ಮಹಾದೇವಪ್ಪ

author img

By

Published : Jul 13, 2023, 4:09 PM IST

Updated : Jul 13, 2023, 4:46 PM IST

ಟಿ. ನರಸೀಪುರದಲ್ಲಿ ಕೊಲೆಗೀಡಾದ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

Venugopal murder case
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೃತರ ಕುಟುಂಬಸ್ಥರಿಗೆ 4.12 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಮಾತನಾಡಿದರು.

ಮೈಸೂರು: ''ಟಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣ ಧರ್ಮ ಮತ್ತು ರಾಜಕೀಯ ವ್ಯಾಪ್ತಿಗೆ ಬರುವುದಿಲ್ಲ'' ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು.

ಟಿ. ನರಸೀಪುರದಲ್ಲಿ ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ''ಯುವ ಬ್ರಿಗೇಡ್​ನ ಕಾರ್ಯಕರ್ತ ವೇಣುಗೋಪಾಲ ನಾಯಕ್ ಅವರು ಚೆನ್ನಾಗಿ ಹನುಮ ಜಯಂತಿ ಮಾಡಿದ್ದಾರೆ‌. ಜಯಂತಿ ವೇಳೆ ಬ್ರಿಗೇಡ್​ನಲ್ಲಿ ಇದ್ದವರೇ ಬೈಕ್ ನಿಲ್ಲಿಸುವ ವಿಚಾರಕ್ಕೆ ಹಾಗೂ ಫೋಟೋ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ನಂತರ ಬ್ರಿಗೇಡ್​ನಲ್ಲಿ ಇದ್ದವರೇ ಜಗಳ ಮಾಡಿದ್ದಾರೆ. ಆ ವೇಳೆ ಕೊಲೆಯಾಗಿದೆ. ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು. ಈ ಕೊಲೆ ಪ್ರಕರಣಕ್ಕೆ ಹಿಂದುತ್ವ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಬಿಜೆಪಿಯವರ ಚಾಳಿ, ಈ ಆಟ ಬಹಳ ದಿನ ನಡೆಯುವುದಿಲ್ಲ'' ಎಂದರು.

ಬಿಜೆಪಿ ವಿರುದ್ಧ ಸಚಿವ ಮಹದೇವಪ್ಪ ವಾಗ್ದಾಳಿ: ''ವೇಣುಗೋಪಾಲ ನಾಯಕ್ ಹತ್ಯೆ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ವಿನಾಕಾರಣ ಎಳೆಯಲಾಗುತ್ತಿದೆ. ಹಿಂದೆಯೂ ಸಹ ಈ ರೀತಿ ಆರೋಪಗಳನ್ನು ನನ್ನ ಮಗನ ಮೇಲೆ ಬಿಜೆಪಿಯವರು ಮಾಡುತ್ತಿದ್ದರು. ಬಿಜೆಪಿಯವರಿಗೆ ಸುಳ್ಳನ್ನು ಸತ್ಯ ಮಾಡುವುದೇ ಕೆಲಸವಾಗಿದೆ. ಟಿ. ನರಸೀಪುರ ಕೊಲೆ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿದ್ದು, ಘಟನೆ ನಡೆದ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಬಿಜೆಪಿಯವರು ಧರ್ಮದ ಲೇಪನ ಕೊಡಲು ಹೊರಟಿದ್ದಾರೆ'' ಎಂದು ಸಚಿವ ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

''ಟಿ. ನರಸೀಪುರದಲ್ಲಿ ಕೊಲೆ ಪ್ರಕರಣವಾಗಿದೆ. ಅದು ದೌರ್ಜನ್ಯ ಪ್ರಕರಣ ಅಲ್ಲ. ಎಸ್ಸಿ ಅಥವಾ ಎಸ್ಟಿ ಸಮುದಾಯದವರು ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ರೂ. ಪರಿಹಾರ ನೀಡಬಹುದು. ಈಗ ಪರಿಹಾರದ ಮೊದಲ ಕಂತು 4.12 ಲಕ್ಷ ರೂ. ಚೆಕ್ ನೀಡಲಾಗಿದ್ದು, ಉಳಿದ ಹಣವನ್ನು ಪ್ರಕರಣದ ಚಾರ್ಜ್ ಶೀಟ್ ಆದ ನಂತರ ನೀಡುತ್ತೇವೆ. ಜೊತೆಗೆ ಕೊಲೆಯಾದ ವ್ಯಕ್ತಿಯ ಪತ್ನಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುವುದು'' ಎಂದು ಉಸ್ತುವಾರಿ ಸಚಿವ ಎಚ್ ಸಿ ಮಹಾದೇವಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಇದ್ದರು.

ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು: ಕೊಲೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಮಾತನಾಡಿ, ''ನನ್ನ ಗಂಡ ಮೂರು ವರ್ಷಗಳಿಂದ ಹನುಮ ಜಯಂತಿ ಮಾಡುತ್ತಾ ಬಂದಿದ್ದರು. ನನ್ನ ಗಂಡನ ಬಳಿ ಹಣವೂ ಇಲ್ಲ, ಅಧಿಕಾರವೂ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಇದನ್ನು ಸಹಿಸದೇ ಕೊಲೆ ಮಾಡಿದ್ದಾರೆ. ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು'' ಎಂದು ಒತ್ತಾಯಿಸಿದರು.

ವಸತಿ ಶಾಲೆಗೆ ಸಚಿವ ಅನಿರೀಕ್ಷಿತ ಭೇಟಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಗುರುವಾರ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದರು. ಶಾಲೆಯ ಮೂಲಭೂತ ಸೌಕರ್ಯವನ್ನು ಪರಿಶೀಲಿಸಿದರು. ಶಾಲೆಯ ಗ್ರಂಥಾಲಯ, ವಿಜ್ಙಾನ ಪ್ರಯೋಗಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ವಿದ್ಯಾರ್ಥಿ ನಿಲಯದ ಶೌಚಾಯಲವನ್ನು ಪರಿಶೀಲಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Mysore crime: ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ.. ಎಸ್​ಪಿ ಹೇಳಿದ್ದೇನು?

Last Updated : Jul 13, 2023, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.