ETV Bharat / state

ರಾಜ್ಯದಲ್ಲಿ ಒಂದೇ ಹಂತದ ಚುನಾವಣೆಗೆ ಸ್ವಾಗತ : ಎಲೆಕ್ಷನ್​ ನಂತ್ರ ರಾಜಕೀಯ ನಿವೃತ್ತಿ - ಸಿದ್ದರಾಮಯ್ಯ

author img

By

Published : Mar 29, 2023, 4:16 PM IST

ಕಾಂಗ್ರೆಸ್​ ಪಕ್ಷ ಈ ಬಾರಿ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Former CM Siddaramaiah
ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುತ್ತಿರುವುದು ಸ್ವಾಗತ, ಈ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ. ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚುನಾವಣೆಯನ್ನು ಮೇ 10 ರಂದು ನಡೆಸಲು ಘೋಷಣೆ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದು ಪ್ರತಿಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ ತಿಂಗಳಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ಘೋಷಣೆ ಮಾಡಿರುವುದು ಒಳ್ಳೆಯದರು. ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಜವಾಬ್ದಾರಿ ಆಗಿದೆ. ಇಡೀ ಚುನಾವಣೆ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದು ಬಿಜೆಪಿ, ದೇಶದಲ್ಲಿ ಅಪರೇಷನ್ ಕಮಲ ಮಾಡಿದ್ದು ಬಿಜೆಪಿ ಎಂದು ಕಿಡಿಕಾರಿದರು.

ಖಾಸಗಿ ಕಾರ್​ನಲ್ಲಿ ಸಿದ್ದರಾಮಯ್ಯ ಪ್ರಯಾಣ : ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು, ಇಂದು ಖಾಸಗಿ ಕಾರ್ಯಕ್ರಮ ಹಾಗೂ ವರುಣಾ ಕ್ಷೇತ್ರದ ಪ್ರವಾಸಕ್ಕೆ ಖಾಸಗಿ ಕಾರ್​ನಲ್ಲಿ ಹೊರಟರು. ಪ್ರತಿಪಕ್ಷದ ನಾಯಕರಿಗೆ ನೀಡಿದ್ದ ಸರ್ಕಾರಿ ಕಾರನ್ನು ಅಧಿಕಾರಿಗಳು ವಾಪಸ್ ಪಡೆದಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಯಮಯ್ಯ ಅವರ, ಬಿಜೆಪಿಯವರು ಪೊಲೀಸರು, ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ನಡೆಸುವ ಸಾಧ್ಯತೆ ಇದ್ದು, ಈಗಾಗಲೇ 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳನ್ನು ಬಳಸಿಕೊಂಡು, ಕಾಂಗ್ರೆಸ್ ಅನ್ನು ಕಟ್ಟಿ ಹಾಕುವ ಪ್ಲಾನ್ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಚುನಾವಣೆ ನಂತರ ರಾಜಕೀಯ ನಿವೃತ್ತಿ : ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ, ಆದ್ದರಿಂದಲೇ ಹುಟ್ಟೂರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಅನುಮಾನ ಇತ್ತು. ಹಾಗಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ ಈ ಬಾರಿ ವರುಣಾದಿಂದ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಕೋಲಾರ ಕ್ಷೇತ್ರದಿಂದ ಅಲ್ಲಿನ ಅಭಿಮಾನಿಗಳು ನನ್ನನ್ನು ಒತ್ತಾಯ ಮಾಡುತ್ತಿದ್ದಾರೆ, ಆ ಕಾರಣಕ್ಕಾಗಿ ಕೋಲಾರದಿಂದಲೂ ಟಿಕೇಟ್ ನೀಡಿ ಎಂದು ಕೇಳಿದ್ದೇನೆ, ಅದು ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದು ವಿವರಿಸಿದರು.

ಈ ಬಾರಿಯೂ ಜೆಡಿಎಸ್ -ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳಬಹುದು- ಸಿದ್ದರಾಮಯ್ಯ : ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಒಳ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತಳ್ಳಿ ಹಾಕುವಂತಿಲ್ಲ. ರಾಜ್ಯದ ಎಲ್ಲಾ ಕಡೆ ಇಬ್ಬರ ನಡುವೆ ಒಳ ಒಪ್ಪಂದ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು. ನಿಮ್ಮ ವಿರುದ್ಧ ಬಿ ವೈ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಮಾತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಹೆದರುವುದಿಲ್ಲ. ಯಾರೇ ನಿಂತರೂ ವರುಣಾದಿಂದ ನಾನು ಗೆಲ್ಲುತ್ತೇನೆ.‌ ಈ ಬಾರಿ ಜನ ನನ್ನ ಪರವಾಗಿ ಇದ್ದಾರೆ, ನಾನು ವರುಣಾದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧಿಸುವೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.