ETV Bharat / state

ಮುಕ್ತ ವಿವಿಯ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣ : ಇಬ್ಬರು ವಿದ್ಯಾರ್ಥಿಗಳ ಬಂಧನ

author img

By ETV Bharat Karnataka Team

Published : Sep 22, 2023, 5:27 PM IST

Updated : Sep 22, 2023, 6:18 PM IST

ಮುಕ್ತ ವಿವಿಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿಕಾಂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿ ನೀಡಿದ ದೂರಿನ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಮರು ಪರೀಕ್ಷೆ ನಡೆಸಲು ಮುಕ್ತ ವಿವಿ ನಿರ್ಧರಿಸಿದೆ.

ಬಿಕಾಂ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಬಂಧಿತರಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಸೆ. 4ರಿಂದ ಪದವಿ ವಿಭಾಗದ ಪರೀಕ್ಷೆಗಳು ಆರಂಭವಾಗಿವೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಅನುಮಾನವಿದ್ದ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಯೊಬ್ಬ ಸೆ.20 ರಂದು ನಡೆಯಲಿದ್ದ ಕಂಪ್ಯೂಟರ್ ಇನ್ ಬ್ಯುಸಿನೆಸ್ ವಿಷಯದ ಪ್ರಶ್ನೆಪತ್ರಿಕೆ ತರಿಸಿಕೊಂಡಿದ್ದ. ಪರೀಕ್ಷೆಯ ವೇಳೆ ಎರಡು ಪತ್ರಿಕೆಯಲ್ಲೂ ಹೋಲಿಕೆ ಇದ್ದ ವಿಚಾರ ತಿಳಿದು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ಗುರುವಾರ ಬೆಳಿಗ್ಗೆ ಜಯಲಕ್ಷ್ಮಿಪುರಂ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದ. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕಾಲೇಜಿಗೆ ಭೇಟಿ ನೀಡಿ ಮಹಜರು ನಡೆಸಿದಾಗ ಸೋರಿಕೆ ಆಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಂಧಿತ ವಿದ್ಯಾರ್ಥಿಗಳು 3 ಸಾವಿರ ರೂ. ಪಡೆದು ವಾಟ್ಸ್​ಆ್ಯಪ್​ಗೆ ಕಳುಹಿಸಿದ್ದರು. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಧೃಡಪಟ್ಟಿದ್ದು. ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದವರು ಯಾರು?. ಎಲ್ಲಿಂದ ಕಳುಹಿಸಲಾಗಿದೆ? ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತು ರಾಜ್ 'ಈಟಿವಿ ಭಾರತ್'​ಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮುಕ್ತ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ವಿ ಪ್ರವೀಣ್ ಪ್ರತಿಕ್ರಿಯಿಸಿ, ಅಂತಿಮ ವರ್ಷದ ಬಿ.ಕಾಂ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ದೂರಿನ ಮೇರೆಗೆ ಜಯಲಕ್ಷ್ಮಿಪುರಂ ಪೊಲೀಸರು ಪರೀಕ್ಷಾಂಗ ಕೊಠಡಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಾದ ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಮರು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸೈಬರ್ ಠಾಣೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ದೂರು : ಪ್ರಥಮ ಪಿಯುಸಿ ಆಂಗ್ಲಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ(ಫೆಬ್ರವರಿ 21-2023) ನಡೆಯಬೇಕಿದ್ದ ಆಂಗ್ಲ ಭಾಷೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಜಿಲ್ಲೆಯಲ್ಲಿ ಆರಂಭವಾಗಿದ್ದ ಪ್ರಥಮ ಪಿಯುಸಿ ಪರೀಕ್ಷೆಗಳು, ಅಂದು ನಡೆಯಬೇಕಿದ್ದ ಆಂಗ್ಲಭಾಷೆ ಪರೀಕ್ಷೆಯನ್ನು ಮಾರ್ಚ್​ 6ಕ್ಕೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಾಟ್ಸಾಪ್​ಗಳಲ್ಲಿ ಹರಿದಾಡುತಿತ್ತು ಎಂಬ ವದಂತಿ ಹಿನ್ನೆಲೆ, ತನಿಖೆಗೆ ಹಿರಿಯ ಪ್ರಾಂಶುಪಾಲರ ನೇತೃತ್ವದಲ್ಲಿ ತ್ರಿಸದಸ್ಯರ ಕಮಿಟಿ ರಚನೆ ಮಾಡಲಾಗಿತ್ತು.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪೊಲೀಸರಿಂದ ಮೌಲ್ಯಮಾಪನ ರಿಜಿಸ್ಟ್ರಾರ್​ ವಿಚಾರಣೆ

Last Updated : Sep 22, 2023, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.