ETV Bharat / state

ಮೈಸೂರು ದರೋಡೆ ಕೇಸ್: ಚಿನ್ನದಂಗಡಿ ಮಾಲೀಕ ನೀಡಿದ್ದ ಸುಪಾರಿಗೆ ಮುಂಬೈ ಜೈಲಲ್ಲೇ ರೆಡಿಯಾಗಿತ್ತಂತೆ ಪ್ಲ್ಯಾನ್!

author img

By

Published : Sep 1, 2021, 3:46 PM IST

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿಯಲ್ಲಿ ಆಗಸ್ಟ್‌ 23 ರಂದು ನಡೆದ ದರೋಡೆ ಹಾಗೂ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿ ಹೊರಬರುತ್ತಿದೆ.

Mysore Gold shop robbery and Shootout case complete details
ಮೈಸೂರು ದರೋಡೆ ಹಾಗೂ ಶೂಟೌಟ್​ ಪ್ರಕರಣ ತನಿಖೆ

ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿಯಲ್ಲಿ ಆಗಸ್ಟ್‌ 23ರಂದು ನಡೆದ ದರೋಡೆ ಹಾಗೂ ಶೂಟೌಟ್​ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೊಂದು ಪಕ್ಕಾ ಯೋಜಿತ​ ದರೋಡೆ ಎಂಬ ಸಂಗತಿ ಗೊತ್ತಾಗಿದೆ.

ಈ ಪ್ರಕರಣದ ತನಿಖೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಬೆಂಗಳೂರಿನ 120 ಪೊಲೀಸರನ್ನು ಒಳಗೊಂಡ 7 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ದರೋಡೆಕೋರರ ಸುಳಿವು ಬೆನ್ನಟ್ಟಿದ ಖಾಕಿಪಡೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ.

ಮೈಸೂರಿನಲ್ಲಿ ದರೋಡೆ ಮಾಡಿ ಮುಂಬೈಗೆ ಪರಾರಿ:

ಮೈಸೂರಿನಲ್ಲಿ ಕೃತ್ಯ ಎಸಗಿದ ದರೋಡೆಕೋರರು ಪೊಲೀಸರ ಹದ್ದಿನ ಕಣ್ಣಿಗೆ ಸಿಗದಂತೆ ಮುಂಬೈಗೆ ಪರಾರಿಯಾಗಿದ್ದರು. ಕದ್ದಿರುವ ಒಡವೆಗಳನ್ನು ಮುಂಬೈನಲ್ಲಿ ಹಂಚಿಕೊಂಡು, ಇಬ್ಬರೂ ಮಹಾರಾಷ್ಟ್ರದಲ್ಲಿ ಉಳಿದುಕೊಂಡಿದ್ದಾರೆ. ಒಬ್ಬ ಪಶ್ಚಿಮ ಬಂಗಾಳಕ್ಕೆ, ಇನ್ನಿಬ್ಬರು ರಾಜಸ್ಥಾನ, ಮತ್ತೊಬ್ಬ ಕಾಶ್ಮೀರಕ್ಕೆ ತೆರಳಿ ಕಣ್ಮರೆಯಾಗಿದ್ದರು. ಒಟ್ಟು ಐವರು ಹೀಗೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ತಲೆಮರೆಸಿಕೊಂಡಿದ್ದರು.

ಚಿನ್ನದ ಅಂಗಡಿ ಮಾಲೀಕನಿಂದಲೇ ದರೋಡೆಗೆ ಸುಪಾರಿ:

ಈ ಪ್ರಕರಣದಲ್ಲಿ ಇಲ್ಲಿಯವರೆಗೆ 7 ಜನರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಇಬ್ಬರು ಮಾಸ್ಟರ್ ಮೈಂಡ್​ಗಳು ಸೇರಿದ್ದಾರೆ. ಅದರಲ್ಲಿ ಓರ್ವ ಬೆಂಗಳೂರಿನವನು ಹಾಗೂ ಇನ್ನೋರ್ವ ಮೈಸೂರಿನ ಚಿನ್ನದ ಅಂಗಡಿಯೊಂದರ ವ್ಯಾಪಾರಿಯಾಗಿದ್ದು, ಈತನೇ ದರೋಡೆಗೆ ಸುಪಾರಿಕೊಟ್ಟಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ 6 ಜನರ ಬಂಧನ : ಡಿಜಿಪಿ ಪ್ರವೀಣ್ ಸೂದ್

ನಗರದ ಮಹದೇವಪುರದಲ್ಲಿ ಬಾಲಾಜಿ ಬ್ಯಾಂಕರ್ಸ್ ಮಾಲೀಕ ಮಹೇಂದ್ರ ವೃತ್ತಿ ವೈಷಮ್ಯದಿಂದ ಚಿನ್ನದಂಗಡಿ ದರೋಡೆಗೆ ಬೆಂಗಳೂರಿನ ವಿಜಯ ಸೇನಾ ಎಂಬುವವರಿಗೆ ಸುಪಾರಿ ನೀಡಿದ್ದರಂತೆ. ಅದರಂತೆ ಹೊರ ರಾಜ್ಯದ ದರೋಡೆಕೋರರನ್ನು ಕರೆಸಿ ಆಗಸ್ಟ್ 23 ರಂದು ಈ ಅಂಗಡಿ ದರೋಡೆ ಮಾಡಿಸಿದ್ದಾರೆ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಮುಂಬೈನ ಮೋರಿಯಲ್ಲಿ ಸಿಕ್ಕಿತು ಪಿಸ್ತೂಲ್:

ದರೋಡೆ ಸಂದರ್ಭದಲ್ಲಿ ಶೂಟ್​ಔಟ್​ಗೆ ಬಳಸಿದ್ದ ಪಿಸ್ತೂಲ್​ ಅನ್ನು ಚಾಲಾಕಿ ದರೋಡೆಕೋರರು ಮುಂಬೈನ ಮನೆಯೊಂದರ ಮೋರಿಯಲ್ಲಿ ಬಚ್ಚಿಟ್ಟಿದ್ದರು. ಆ ಪಿಸ್ತೂಲನ್ನು ಮೈಸೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈ ಜೈಲಿನಲ್ಲೇ ರೆಡಿಯಾಗಿತ್ತು ದರೋಡೆ ಪ್ಲ್ಯಾನ್:

ಮೈಸೂರಿನ ವಿದ್ಯಾರಣ್ಯಾಪುರಂನ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿಯ ದರೋಡೆಗೆ ಮುಂಬೈನ ಜೈಲಿನಲ್ಲೇ ಯೋಜನೆ ತಯಾರಾಗಿತ್ತು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಬಂಧಿತ ಏಳು ಜನ ಆರೋಪಿಗಳ ಪೈಕಿ ಬೆಂಗಳೂರಿನ ನಿವಾಸಿ ವಿಜಯಸೇನಾ ದರೋಡೆಯ ಮಾಸ್ಟರ್​ ಮೈಂಡ್​ ಆಗಿದ್ದಾನೆ. ಈತ ಪ್ರಕರಣವೊಂದರಲ್ಲಿ ಮುಂಬೈ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅಲ್ಲಿ ಮಂಜೂರ್, ಬಫಿ, ಮದನ್ ಸಿಂಗ್, ಜಹಂಗೀರ್ ಹಾಗೂ ತೌಸಿಫ್ ಎಂಬುವವರ ಪರಿಚಯವಾಗಿತ್ತು.

ಇದನ್ನೂ ಓದಿ: ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಆರೋಪಿಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಸೆರೆ

ಅವರೆಲ್ಲಾ ಸೇರಿ ಜೀವನದಲ್ಲಿ ಸುಖವಾಗಿರಲು ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡುವ ಸಂಚು ರೂಪಿಸಿದ್ದರು. ಅದರಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ಬೆಂಗಳೂರಿನ ಎರಡು ಕಡೆ ಚಿನ್ನಾಭರಣ ಅಂಗಡಿಯ ದರೋಡೆಗೆ ಕುತಂತ್ರ ರೂಪಿಸಿ, ಬಳಿಕ ಅದನ್ನು ಕೈಬಿಟ್ಟಿದ್ದರು.

ಇದೇ ಸಂದರ್ಭದಲ್ಲಿ ಲಡ್ಡು ಬಂದು ಬಾಯಿಗೆ ಬಿದ್ದಂತೆ ಮೈಸೂರು ನಗರದ ಮಹದೇವಪುರದಲ್ಲಿ ಬಾಲಾಜಿ ಬ್ಯಾಂಕರ್ಸ್ ಮಾಲೀಕ ಮಹೇಂದ್ರ ವೃತ್ತಿ ವೈಷಮ್ಯದಿಂದ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿಯ ದರೋಡೆಗೆ ಬೆಂಗಳೂರಿನ ವಿಜಯ ಸೇನಾ ಎಂಬುವವರಿಗೆ ಸುಪಾರಿ ನೀಡಿದ್ದರು. ಇದೇ ಸಮಯವನ್ನು ಬಳಸಿಕೊಂಡ ಕಿಲಾಡಿಗಳು ಮೈಸೂರಿನ ಅಮೃತ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿಯಲ್ಲಿ ದರೋಡೆ ಮಾಡಿದ್ದು, ಈ ವೇಳೆ ಗುಂಡು ಹಾರಿಸಿದಾಗ ಅದು ಅಲ್ಲೇ ಇದ್ದ ಇನ್ನೋರ್ವ ವ್ಯಕ್ತಿಗೆ ತಗುಲಿತ್ತು.

ಆರೋಪಿಗಳ ಹೆಚ್ಚಿನ ವಿಚಾರಣೆ:

ದರೋಡೆಕೋರರ ಜಾಡು ಬೆನ್ನಟ್ಟಿದ್ದ ಕರ್ನಾಟಕ ಪೊಲೀಸರು ಈ ಪ್ರಕರಣವನ್ನು ಎಳೆಎಳೆಯಾಗಿ ಭೇದಿಸಿದ್ದಾರೆ. ಸದ್ಯ ಬಂಧಿತ ಏಳು ಆರೋಪಿಗಳನ್ನು 12 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಚಿನ್ನ ದರೋಡೆ, ಶೂಟೌಟ್‌ ಪ್ರಕರಣದ ದುಷ್ಕರ್ಮಿಗಳ ಬಂಧನ: ಮೈಸೂರು ಪೊಲೀಸರ ಕಾರ್ಯಾಚರಣೆ ಬಲು ರೋಚಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.