ETV Bharat / state

ನಾನು ಹೋಂ ಮಿನಿಸ್ಟರ್ ಅಷ್ಟೇ, ಸಿಎಂ ರೇಸ್​ನಲ್ಲಿಲ್ಲ: ಸಚಿವ ಬೊಮ್ಮಾಯಿ ಸ್ಪಷ್ಟನೆ

author img

By

Published : Jul 14, 2021, 12:22 PM IST

ಹೋಂ ಮಿನಿಸ್ಟರ್ ಚೀಪ್ ಮಿನಿಸ್ಟರ್ ಆಗೋದು ಯಾವಾಗ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಾನು ಸಿಎಂ ರೇಸ್​ನಲ್ಲಿ ಇಲ್ಲ ಎಂದರು.

Basavraj Bommai Press meet
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಮೈಸೂರು: ನಾನು ಹೋಂ ಮಿನಿಸ್ಟರ್ ಅಷ್ಟೆ, ಸಿಎಂ ರೇಸ್​ನಲ್ಲಿ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ತನ್ನದೇ ಆದ ಭವ್ಯ ಇತಿಹಾಸ ಹೊಂದಿದೆ. ಇಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಇದ್ದು, ವರ್ಷ ಪೂರ್ತಿ ತರಬೇತಿ ನಡೆಯುತ್ತಿರುತ್ತದೆ ಎಂದರು.

ಅನ್​ಲಾಕ್ ಬಳಿಕ ಅಪರಾಧ ಹೆಚ್ಚಳ: ಲಾಕ್​ಡೌನ್​ನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಇದ್ದವು. ಅನ್​ಲಾಕ್ ಆದ ಬಳಿಕ ಶೇ. 15 ರಿಂದ 20 ರಷ್ಟು ದರೋಡೆ , ಚೈನ್ ಕಳ್ಳತನ , ಸೈಬರ್ ಪ್ರಕರಣಗಳು ಹೆಚ್ಚಳವಾಗಿವೆ. ಇದರ ಜೊತೆಗೆ ಡ್ರಗ್ಸ್ ಪ್ರಕರಣಗಳು ಜಾಸ್ತಿಯಾಗಿದೆ.

ಇತ್ತೀಚೆಗೆ ಕಾಮನ್ ಪೋಸ್ಟ್ ಮೂಲಕವೂ ಡ್ರಗ್ಸ್ ಸರಬರಾಜು ಆಗುತ್ತಿದ್ದು, ಅಂಚೆ ಕಚೇರಿಯ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

100 ಕೋಟಿ ದಂಡ ವಸೂಲಿ: ರಾಜ್ಯದಲ್ಲಿ ಅದರಲ್ಲೂ, ಬೆಂಗಳೂರು ಒಂದರಲ್ಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 100 ಕೋಟಿ ರೂ. ದಂಡ ವಸೂಲು ಮಾಡಲಾಗಿದೆ. ಈ ಹಣವನ್ನು ನೇರವಾಗಿ ರಸ್ತೆ ಅಭಿವೃದ್ಧಿಗೆ ಬಳಸಲು ಸಂಬಂಧಪಟ್ಟ ಇಲಾಖೆಯನ್ನು ಕೋರಿದ್ದೇವೆ. ಅವರಿಂದ ಉತ್ತರ ಬಂದಿಲ್ಲ ಎಂದು ಸಚಿವ ಬೊಮ್ಮಾಯಿ ಹೇಳಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಪ್ರತಿಕ್ರಿಯೆ ನೀಡಲು ನಿರಾಕರಣೆ : ರಮೇಶ್ ಜಾರಕಿಹೊಳಿ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹಾಗಾಗಿ, ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವರು ಹೇಳಿದರು. ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಯತ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಸಹ ಅವರು ನಿರಾಕರಿಸಿದರು.

ಕೋರ್ಟ್​ ಆದೇಶದಂತೆ ಮೇಕೆದಾಟು ಯೋಜನೆ : ಮೇಕೆದಾಟು ಯೋಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ನಾನು ಹೋಂ ಮಿನಿಸ್ಟರ್ ಅಷ್ಟೇ : ಇನ್ನು, ಹೊಂ ಮಿನಿಸ್ಟರ್ ಚೀಫ್ ಮಿನಿಸ್ಟರ್ ಆಗುತ್ತಾರಾ ಎಂಬ ಮಾ‍ಧ್ಯಮದವರ ಪ್ರಶ್ನೆಗೆ, ನಾನು ಹೊಂ ಮಿನಿಸ್ಟರ್ ಅಷ್ಟೆ, ಸಿಎಂ ರೇಸ್​ನಲ್ಲಿ ಇಲ್ಲ. ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಸಚಿವ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಡ್ರಗ್ಸ್ ಕೇಸ್​ನಲ್ಲಿ ಕಳೆದ ವರ್ಷ 15 ರಿಂದ 20 ಮಂದಿ ವಿದೇಶಿಗರ ಬಂಧನವಾಗಿದೆ, ಈ ಪೈಕಿ ಆಫ್ರಿಕಾದವರು ಹೆಚ್ಚಿದ್ದಾರೆ. ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗದಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಪೊಲೀಸ್ ವರ್ಗಾವಣೆಯಲ್ಲಿ ಲಂಚ ಪಡೆಯುವ ವ್ಯವಸ್ಥೆ ಇಲ್ಲ. ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.