ETV Bharat / state

ಮೈಸೂರಲ್ಲಿ ಪ್ರತ್ಯೇಕ ಘಟನೆ: ಮನೆಗೆ ಬಾರದ ಪತ್ನಿಯನ್ನೇ ಕೊಂದ ಪತಿ, ಕಾವೇರಿ ಹಿನ್ನೀರಲ್ಲಿ ಮುಳುಗಿ 3 ವಿದ್ಯಾರ್ಥಿಗಳ ಸಾವು

author img

By

Published : Jul 15, 2023, 10:55 PM IST

ಮೈಸೂರಿನಲ್ಲಿ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತರಾಗಿದ್ದಾರೆ. ಒಂದೆಡೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದು, ಇನ್ನೊಂದು ಕಡೆ ಕಾವೇರಿ ಹಿನ್ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.

crime-husband-killed-his-wife-for-refusing-to-come-to-his-home
ಮೈಸೂರಲ್ಲಿ ಪ್ರತ್ಯೇಕ ಘಟನೆ: ಮನೆಗೆ ಬಾರದ ಪತ್ನಿಯನ್ನೇ ಕೊಂದ ಪತಿ, ಕಾವೇರಿ ಹಿನ್ನೀರಲ್ಲಿ ಮೂವರು ವಿದ್ಯಾರ್ಥಿಗಳ ಸಾವು

ಮೈಸೂರು: ಮನೆಗೆ ಬರುವಂತೆ ಕರೆದರೂ ಬರಲು ನಿರಾಕರಿಸಿದ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ಶನಿವಾರ ನಡೆದಿದೆ. ಕುಂಬಾರ ಕೊಪ್ಪಲು ಗ್ರಾಮದ ನಿವಾಸಿ ಹರ್ಷಿತಾ (21) ಕೊಲೆಯಾದ ವಿವಾಹಿತೆ. ಚಾಮರಾಜನಗರದ ಗುಂಡ್ಲುಪೇಟೆಯ ಬೀರಂಬಾಡಿ ಗ್ರಾಮದ ಮಹದೇವ್ (30) ಎಂಬಾತನೇ ಕೊಲೆ ಮಾಡಿರುವ ಆರೋಪಿ ಪತಿಯಾಗಿದ್ದಾನೆ.

ಹರ್ಷಿತಾ ಹಾಗೂ ಮಹದೇವ್ ವಿವಾಹ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಆದರೆ ಪತಿ ಮತ್ತು ಪತ್ನಿಯ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಬಗ್ಗೆ ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ನಡೆಸಿ, ಒಟ್ಟಿಗೆ ಬಾಳುವಂತೆ ಬುದ್ದಿಮಾತು ಹೇಳಿದ್ದರು. ಆದರೂ ಕೂಡ ಸಂಸಾರ ಸರಿಹೋಗಿರಲಿಲ್ಲ. ಕೆಲ ದಿನಗಳ ಹಿಂದೆ ಪತಿಯೊಂದಿಗೆ ಮನಸ್ತಾಪ ಮಾಡಿಕೊಂಡು ಹರ್ಷಿತಾ ತವರು ಮನೆ ಸೇರಿದ್ದರು ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ ಪತ್ನಿ ಹರ್ಷಿತಾರನ್ನು ಕರೆದುಕೊಂಡು ಹೋಗಲು ಕುಂಬಾರ ಕೊಪ್ಪಲಿಗೆ ಮಹದೇವ್ ಬಂದಿದ್ದ. ಈ ವೇಳೆ ಗಂಡನೊಂದಿಗೆ ಹೋಗಲು ಹರ್ಷಿತಾ ನಿರಾಕರಿಸಿದ್ದಾಳೆ. ಆಗ ಕೋಪಗೊಂಡ ಮಹದೇವ್, ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ನೆರೆಹೊರೆಯವರು ಮಹದೇವ್​​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ಗಾಯಗೊಂಡ ಹರ್ಷಿತಾಳನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮೃತ ಹರ್ಷಿತಾ ಕುಟುಂಬದವರು ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕಾವೇರಿ ಹಿನ್ನೀರಿನಲ್ಲಿ ಮುಳುಗಿದ ಮೂವರು ವಿದ್ಯಾರ್ಥಿಗಳು : ಇನ್ನೊಂದು ಘಟನೆಯಲ್ಲಿ ಕಾವೇರಿ ನದಿಯ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳು ಪೈಕಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೀನಾಕ್ಷಿಪುರದ ಬಳಿ ಶನಿವಾರ ಸಂಜೆ ಘಟನೆ ಸಂಭವಿಸಿದೆ. ಪಡುವಾರಹಳ್ಳಿಯ ಭರತ್ (20), ರಾಮಕೃಷ್ಣ ನಗರದ ಪ್ರವೀಣ್ ಮೊಯಿಲ್ (20) ಹಾಗೂ ಹೆಬ್ಬಾಳಿನ ಸೂರ್ಯಬೇಕರಿಯ ವರುಣ್ (21) ಮೃತ ವಿದ್ಯಾರ್ಥಿಗಳು. ಮನೋಜ್ ಮತ್ತು ವಿಘ್ನೇಶ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಈ ಐವರು ಶನಿವಾರ ಸಂಜೆ ಮೂರು ಬೈಕ್‌ಗಳಲ್ಲಿ ಕಾವೇರಿ ಹಿನ್ನೀರಿನ ಬಳಿ ತೆರಳಿದ್ದರು. ಹಿನ್ನೀರಿನಲ್ಲಿ ಆಟವಾಡುವಾಗ ಭರತ್, ಪ್ರವೀಣ್ ಮೊಯಿಲ್ ಮತ್ತು ವರುಣ್ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ. ತಕ್ಷಣ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಭರತ್ ಶವ ಪತ್ತೆಯಾಗಿದೆ. ಇನ್ನುಳಿದ ಇಬ್ಬರ ಶವ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರ ಬಂಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.