ETV Bharat / state

ಅವಳಿಲ್ಲದ ಬದುಕೇಕೆ?: ಪ್ರಿಯಕರನ ಜೊತೆ ಪತ್ನಿ ಮರು ಮದುವೆ.. ಮನನೊಂದ ಪತಿ ನೇಣಿಗೆ ಶರಣು

author img

By

Published : Oct 31, 2022, 12:02 PM IST

a-man-committed-suicide-in-mysore
ಮನನೊಂದ ಪತಿ ನೇಣಿಗೆ ಶರಣು

ತನ್ನನ್ನು ತೊರೆದು ಪ್ರಿಯಕರನ ಜೊತೆ ವಿವಾಹವಾಗಿದ್ದಕ್ಕೆ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ದ್ರೋಹಿ ಪತ್ನಿಯ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಮೈಸೂರು: ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿ ಮಾಡಿದ ಮೋಸಕ್ಕೆ ಪತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ತನ್ನನ್ನು ತಿರಸ್ಕರಿಸಿ ಪ್ರಿಯಕರನೊಂದಿಗೆ ಮರು ಮದುವೆಯಾದ ವಿಷಯ ತಿಳಿದ ಮೊದಲ ಪತಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನ ಕೊಯಮತ್ತೂರು ಕಾಲೊನಿಯಲ್ಲಿ ನಡೆದಿದೆ. ಸುರೇಶ್ ಕುಮಾರ್(37) ಮೃತ ದುರ್ದೈವಿ.

ಕೊಯಮತ್ತೂರು ಕಾಲೊನಿ ಗ್ರಾಮದ ಕೃಷ್ಣಗೌಡ ಎಂಬುವರ ಪುತ್ರ ಸುರೇಶ್​ಕುಮಾರ್​ಗೆ ನೇತ್ರಾ ಎಂಬಾಕೆಯ ಜೊತೆಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಸುರೇಶ್ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ನೇತ್ರಾ ಹುಣಸೂರಿನ ಮಾರೀಷ್ ಸ್ಪಿನ್ನರ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು.

ನಾಪತ್ತೆಯಾಗಿದ್ದ ನೇತ್ರಾ: ನೇತ್ರಾ ಕಳೆದ ತಿಂಗಳಿಂದ ನಾಪತ್ತೆಯಾಗಿದ್ದರು. ಕೆಲಸಕ್ಕೆ ಎಂದು ಫ್ಯಾಕ್ಟರಿಗೆ ಹೋದವರು ಮತ್ತೆ ವಾಪಸ್ ಆಗಿರಲಿಲ್ಲ. ಇತ್ತ ಪತಿ ಸುರೇಶ್​ಕುಮಾರ್ ಎಲ್ಲೆಡೆ ಹುಡುಕಾಡಿ, ಆಕೆಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತಿಂಗಳ ಬಳಿಕ ನೇತ್ರಾಳನ್ನು ಶಿವಮೊಗ್ಗದಲ್ಲಿ ಪತ್ತೆಹಚ್ಚಿದ್ದರು. ಈ ವೇಳೆ, ನೇತ್ರಾ, ಪತಿ ಸುರೇಶ್​ಕುಮಾರ್​ ಜೊತೆಗೆ ಬದುಕಲು ಇಷ್ಟವಿಲ್ಲ. ಅವರು ನನ್ನೊಂದಿಗೆ ಹೊಂದಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ, ಆಘಾತಕಾರಿ ಎಂಬಂತೆ ತಾನು ಇನ್ನೊಬ್ಬರ ಜೊತೆ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾಳೆ.

ಗಂಡನ ಬಿಟ್ಟು ಪ್ರಿಯಕರನ ಕೈ ಹಿಡಿದಿದ್ದಳು: ತಿಂಗಳ ಹಿಂದೆ ನಾಪತ್ತೆಯಾಗಿದ್ದ ನೇತ್ರಾ ಪಕ್ಕದ ಗ್ರಾಮ ಉದ್ದೂರಿನ ಪ್ರಿಯಕರನೊಂದಿಗೆ ಶಿವಮೊಗ್ಗಕ್ಕೆ ತೆರಳಿ 15 ದಿನಗಳ ಹಿಂದೆ ಸೊರಬ ತಾಲೂಕಿನ ಹೊಳೆ ಜೋಳದ ಗುಡ್ಡಗ್ರಾಮದ ಗೋಮಂತೇಶ್ವರ ದೇವಸ್ಥಾನದಲ್ಲಿ ಇಬ್ಬರು ವಿವಾಹ ಮಾಡಿಕೊಂಡಿದ್ದರು. ಪ್ರಿಯಕರನೊಂದಿಗೆ ಮದುವೆಯಾಗಿರುವ ಫೋಟೋವನ್ನು ನೇತ್ರಾ ತನ್ನ ಗಂಡನಿಗೆ ಕಳುಹಿಸಿದ್ದಳು.

ಇದನ್ನು ನೋಡಿದ ಸುರೇಶ್​ಕುಮಾರ್​ ತೀವ್ರ ಮನನೊಂದಿದ್ದ. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುರೇಶ್ ಅವರ ತಂದೆ ಕೃಷ್ಣಗೌಡರು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗನ ಸಾವಿಗೆ ಸೊಸೆ ನೇತ್ರಾ ನೇರ ಕಾರಣ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಓದಿ: ಕ್ಲಬ್​​ನಲ್ಲಿ ಆಡುತ್ತಿರುವಾಗಲೇ ಹೃದಯಾಘಾತದಿಂದ ಜೆಡಿಎಸ್ ಮುಖಂಡ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.