ETV Bharat / state

ಮಂಡ್ಯದಲ್ಲಿ ಕಾವೇರಿ ಕಿಚ್ಚು: ಸರ್ಕಾರದ ವಿರುದ್ದ ಚಡ್ಡಿ, ಮದ್ಯ ಬಾಟಲ್‌ಗಳೊಂದಿಗೆ ಪ್ರತಿಭಟನೆ

author img

By ETV Bharat Karnataka Team

Published : Oct 3, 2023, 10:25 PM IST

ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿಯಲ್ಲ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಡಾ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ದ ಚಡ್ಡಿ, ಎಣ್ಣೆ, ಬಾಟಲ್ ಪ್ರೊಟೆಸ್ಟ್​
ಸರ್ಕಾರದ ವಿರುದ್ದ ಚಡ್ಡಿ, ಎಣ್ಣೆ, ಬಾಟಲ್ ಪ್ರೊಟೆಸ್ಟ್​

ಹೋರಾಟಗಾರ ಮಂಜುನಾಥ್

ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದೂ ಸಹ ಮಂಡ್ಯದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗೆ ಜೆಡಿಎಸ್ ನಾಯಕರು ಸಾಥ್ ನೀಡಿದ್ರು. ಇನ್ನೊಂದೆಡೆ, ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಕಳೆದ 29 ದಿನಗಳಿಂದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸರ್ಕಾರದ ವಿರುದ್ದ ಮದ್ಯದ ಬಾಟಲಿ, ಚಡ್ಡಿ ಹಿಡಿದು ಪ್ರತಿಭಟಿಸಿದರು. ಸರ್ಕಾರದ ಮಂತ್ರಿಗಳಿಗೆ ಚಡ್ಡಿ ಚಿಂತೆ, ರಾಜ್ಯದ ರೈತರಿಗೆ ನೀರಿನ ಚಿಂತೆ, ಹಳ್ಳಿ ಹಳ್ಳಿಗಳಿಗೆ ಬೀರು-ಬಾರು ಬೇಡ, ನೀರಾವರಿ ಯೋಜನೆ ಜಾರಿ ಮಾಡಿ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. 124.80 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 99 ಅಡಿಗಳಷ್ಟು ಮಾತ್ರ ನೀರು ಸಂಗ್ರಹವಿದೆ. 49 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 22 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇನ್ನು ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, 11,800 ಕ್ಯೂಸೆಕ್ ಒಳಹರಿವು ಇದ್ದರೆ, ಜಲಾಶಯದಿಂದ 1,592 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮಾಜಿ ಶಾಸಕ ಡಾ ಅನ್ನದಾನಿ

ಇಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಡಾ.ಅನ್ನದಾನಿ ಮಾತನಾಡಿ, 135 ಸೀಟ್ ಗೆದ್ದಿದ್ದೇವೆಂದು ಕಾಂಗ್ರೆಸ್​ಗೆ ಜಂಬ ಬಂದಿದೆ. ರೈತರ ಹೋರಾಟ ನಿರಂತರವಾಗಿದೆ. ಆದರೆ ಫಲ ಶೂನ್ಯ. ಸರ್ಕಾರಕ್ಕೆ ಇದರ ಬಗ್ಗೆ ಪರಿಜ್ಞಾನ ಇಲ್ಲ. ಅಧಿಕಾರಕ್ಕೆ ಬರುವ ಮುನ್ನ ಏನು ಭರವಸೆ ಕೊಟ್ರಿ? ಅನ್ನದಾತರ ಪರ ಇರ್ತೇನೆ ಅಂತ ಹೇಳಿ ನೀವೇ ಅರ್ಜಿ ಹಾಕಿ ಅಂತೀರಾ.? ಕಾವೇರಿಗಾಗಿ ತ್ಯಾಗ ಮಾಡಿ ಏನೂ ಆಗಲ್ಲ. ಪ್ರತಿ ಜಿಲ್ಲೆಯಲ್ಲಿ ರೈತರು ನಿಮಗೆ ಶಾಪ ಹಾಕ್ತಿದ್ದಾರೆ. ಬೆಳೆ ಹಾಕದಂತೆ ನೋಟಿಸ್ ಕೊಡ್ತೀರಾ? ತಮಿಳುನಾಡಿನವರು 3ನೇ ಬೆಳೆಗೆ ನೀರು ಕೇಳ್ತಿದ್ದಾರೆ. ಮಂಡ್ಯ ಜಿಲ್ಲೆಯ ಹಿಂದಿನ ಹೋರಾಟ ನೋಡಿ ಸಿದ್ದರಾಮಯ್ಯನವರೇ. ರೈತರನ್ನು ಕೆಣಕುವ ಕೆಲಸ ಮಾಡಬೇಡಿ. ಮಂಡ್ಯ ಜನ ಸಿಡಿದೆದ್ದು ನಿಂತರೆ ನಿಮ್ಮ ಚೇರು, ಸರ್ಕಾರ ನಡುಗುತ್ತೆ. ಸರ್ಕಾರ ಕಳೆದುಕೊಳ್ತೀರಿ. ನಿಮ್ಮ ಸರ್ಕಾರಕ್ಕೆ ಕಿವಿ, ಕಣ್ಣು ಕಾಣ್ತಿಲ್ವ? ಸುಮ್ಮನೆ ಕುಳಿತು ಹೋರಾಟ ಮಾಡ್ತಿದ್ದಾರೆ ಅಂತ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದರು.

ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸ್ಲಿಮರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನ ಮಾಡುತ್ತಿಲ್ಲ. ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆಗೆ ಮಾತ್ರ ನಮ್ಮ ಹೊಂದಾಣಿಕೆ ಸೀಮಿತ. ನಮ್ಮ ಪಕ್ಷದ ಸೆಕ್ಯುಲರ್ ಸಿದ್ಧತೆ ಇದ್ದೇ ಇರುತ್ತದೆ. ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಮುಸಲ್ಮಾನ ಬಾಂಧವರು ನಮ್ಮ ಜೊತೆ ಇರಿ. ನಿಮ್ಮನ್ನು ರಕ್ಷಣೆ ಮಾಡೋದಕ್ಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕೊಡ್ತೀವಿ ಅಂದಿದ್ರು. ಆದರೆ ಈವರೆಗೂ ಮೀಸಲಾತಿ ಕೊಡಲಿಲ್ಲ. ಕಾಂಗ್ರೆಸ್ ಮುಸ್ಲಿಮರು ಪರವಾಗಿ ಇಲ್ಲ. ಜೆಡಿಎಸ್ ಸೆಕ್ಯುಲರ್ ಪಾರ್ಟಿ, ನಿಮ್ಮ ಜೊತೆ ನಾವು ಇರುತ್ತೇವೆ ಎಂದರು.

ಕುಮಾರಸ್ವಾಮಿ ಪ್ಯಾಂಟ್ ಒಳಗೆ ಚಡ್ಡಿ ಇದೆ ಎಂದು ಗೊತ್ತಾಯ್ತು ಎಂಬ ಜಮೀರ್ ಹೇಳಿಕೆ ವಿಚಾರಕ್ಕೆ, 2006ರಲ್ಲಿ ಜಮೀರ್ ಖಾಕಿ ಚಡ್ಡಿ ಹಾಕಿಕೊಂಡು ಬಿಜೆಪಿ ಜೊತೆ ಮಂತ್ರಿ ಆಗಿದ್ರಲ್ಲ. ಕುಮಾರಸ್ವಾಮಿ ಖಾಕಿ ಚಡ್ಡಿ ಬಗ್ಗೆ ಮಾತನಾಡುತ್ತೀರಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯ ರೈತರ ಧರಣಿಗೆ ಬಸವರಾಜ ಬೊಮ್ಮಯಿ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.