ETV Bharat / state

ಮರೆಯಾದ 'ಕಾವೇರಿ ಪುತ್ರ' : ಮಾದೇಗೌಡರ ಜೀವನ, ಹೋರಾಟದ ಹಾದಿ

author img

By

Published : Jul 18, 2021, 9:30 AM IST

ಮಾಜಿ ಸಂಸದ, ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಂಡ್ಯದ ಜಿ. ಮಾದೇಗೌಡರು ನಿನ್ನೆ ನಿಧನರಾಗಿದ್ದಾರೆ. ಮಾದೇಗೌಡರು ರಾಜಕಾರಣಿಯಾಗಿ ಸಲ್ಲಿಸಿದ ಸೇವೆ ಮತ್ತು ಅವರ ಹೋರಾಟದ ಹಾದಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

life and achievement of Madegowda
ಮಾದೇಗೌಡರ ಜೀವನ ಮತ್ತು ಹೋರಾಟ

ಮಂಡ್ಯ: ವಯೋಸಹಜ ಕಾಯಿಲೆಯಿಂದ ನಿಧನರಾದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕಾಂಗ್ರೆಸ್​ ಮುಖಂಡ, ಮಾಜಿ ಸಂಸದ ಜಿ. ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆ ಅಪಾರವಾದದ್ದು. ರೈತ ಕುಟುಂಬದಲ್ಲಿ ಜನಿಸಿದ ಮಾದೇಗೌಡರು, ರೈತರಿಗಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ.

ಕಾವೇರಿ ನದಿ ನೀರಿನ ಹಕ್ಕಿಗಾಗಿ ಮಾದೇಗೌಡರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದಾರೆ. ಅವರು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ರೈತಪರ ಧ್ವನಿಯಾಗಿದ್ದರು.

ಸಕ್ಕರೆ ಕಾರ್ಖಾನೆ ಸ್ಥಾಪನೆ : ಮಂಡ್ಯ, ಮೈಸೂರು ಭಾಗದ ರೈತರ ಪ್ರಮುಖ ಬೆಳೆಯಾದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಮಾದೇಗೌಡರು ಶ್ರಮಿಸಿದವರು. ಅಲ್ಲದೆ ಭಾರತಿ ನಗರದಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ರೈತರಿಗೆ ನೆರವಾದರು.

ಜನನ : ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿಯಲ್ಲಿ 1928 ಜುಲೈ 14 ರಂದು ಮಾದೇಗೌಡರು ಜನಿಸಿದರು. ಗ್ರಾಮದ ಪುಟ್ಟೇಗೌಡ - ಕಾಳಮ್ಮ ದಂಪತಿಯ ಆರು ಮಕ್ಕಳಲ್ಲಿ ಮಾದೇಗೌಡರು ಕೊನೆಯವರು.

ಜನ ಸೇವೆಯ ತುಡಿತ : ಹುಟ್ಟೂರು ಗುರುದೇವರಹಳ್ಳಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ. ಆದ್ದರಿಂದ ಅವರ ತಾಯಿಯ ತವರೂರು ಮಂಡ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಮಾದೇಗೌಡರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಬೆಂಗಳೂರಿಗೆ ತೆರಳಿ ವಕೀಲ ಪದವಿ ಪಡೆದರು. ಬಳಿಕ ವಕೀಲರಾದರೂ, ಮಾದೇಗೌಡರು ಆ ವೃತ್ತಿಯನ್ನು ಮುಂದುವರೆಸಲಿಲ್ಲ. ರಾಜಕೀಯ ರಂಗ ಪ್ರವೇಶಿಸಿ ಜನ ಸೇವೆಗೆ ಮುಂದಾದರು.

ರಾಜಕೀಯ ಪ್ರವೇಶ : 1959ರಲ್ಲಿ ತಾಲೂಕು ಬೋರ್ಡ್ ಚುನಾವಣೆ ಬಂದಾಗ, ಅಂದು ಮಂಡ್ಯ ಮತ್ತು ಮದ್ದೂರಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾಗಿದ್ದ ಕೆ.ವಿ. ಶಂಕರಗೌಡ ಮತ್ತು ಹೆಚ್.ಕೆ. ವೀರಣ್ಣಗೌಡರು ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದ ಮಾದೇಗೌಡರನ್ನು ಕರೆದು, ತಾಲೂಕು ಬೋರ್ಡ್ ಚುನಾವಣೆಗೆ ನಿಲ್ಲಿಸಿದರು. ಚುನಾವಣೆಯಲ್ಲಿ ಗೆದ್ದು ಬಂದ ಮಾದೇಗೌಡರು, ಬಳಿಕ ತಿರುಗಿ ನೋಡಿದ್ದೇ ಇಲ್ಲ. ಸುಮಾರು ಮೂರು ದಶಕಗಳ ಕಾಲ ರಾಜಕೀಯ ರಂಗದಲ್ಲಿ ಅವರು ಮಾದೇಗೌಡರು ಸೋಲು ಕಂಡಿದ್ದೇ ಇಲ್ಲ.

ವಿಧಾನಸಭೆ ಚುನಾವಣೆ : 1962ರಲ್ಲಿ ವಿಧಾನಸಭೆ ಚುನಾವಣೆ ಬಂದಾಗ, ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದ ಹಿಟ್ಟನಹಳ್ಳಿ ಕೊಪ್ಪಲಿನ ಹೆಚ್.ವಿ. ವೀರೇಗೌಡರು ಬಿಟ್ಟುಕೊಟ್ಟ ಸ್ಥಾನಕ್ಕೆ ಮಾದೇಗೌಡರು ನಿಂತು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಮಾದೇಗೌಡರಿಗೆ ಕೇವಲ 32 ವರ್ಷ. ಮಳವಳ್ಳಿ, ಕಿರುಗಾವಲು ಕ್ಷೇತ್ರದ ಕೇಂದ್ರವಾದ ಕುಗ್ರಾಮ ಕಾಳಮುದ್ದನದೊಡ್ಡಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಒಂದೊಂದೇ ಜನಪರ ಕೆಲಸಗಳನ್ನು ಮಾಡತೊಡಗಿದರು.

ಕೃಷಿ, ಆರ್ಥಿಕ, ಶಿಕ್ಷಣ ಕ್ಷೇತ್ರಗಳ ಬಗ್ಗೆ ಗೌಡರು ಕೈಗೊಂಡ ಪ್ರಗತಿಪರ ಕೆಲಸಗಳು ಜನಮೆಚ್ಚುಗೆ ಗಳಿಸಿದ್ದವು. ಈ ಕಾರಣದಿಂದಲೇ ಅವರು ಚುನಾವಣೆಗಳಲ್ಲಿ ಸತತ ಗೆಲುವನ್ನು ಸಾಧಿಸಿದ್ದರು. ಚುನಾವಣಾ ಸಮಯದಲ್ಲಿ ಖರ್ಚಿಗೆಂದು ಜನ ಮಾದೇಗೌಡರಿಗೆ ತಾವೇ ಹಣ ಹೊಂದಿಸಿ ಕೊಡುತ್ತಿದ್ದರು.

ಆರು ಬಾರಿ ಗೆಲುವು : 1962 ರಿಂದ 1989ರ ವರೆಗೆ ಮಾದೇಗೌಡರು ಸತತವಾಗಿ ಆರು ಬಾರಿ ಕಿರುಗಾವಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದು ಅವರ ಬದುಕಿನ ದೊಡ್ಡ ಸಾಧನೆ. ಹಾಗಾಗಿಯೇ ಜನ ಮಾದೇಗೌಡರನ್ನು ಸೋಲಿಲ್ಲದ ಸರದಾರ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾದೇಗೌಡರು ಅರಣ್ಯ ಮತ್ತು ಗಣಿ ಅಭಿವೃದ್ಧಿ ಮಂತ್ರಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದರು. 1989ರಲ್ಲಿ ಗೌಡರ ರಾಜಕೀಯ ಕಿರುಗಾವಲು ಕ್ಷೇತ್ರದಿಂದ ಮಂಡ್ಯ ಜಿಲ್ಲೆಗೆ ವಿಸ್ತರಿಸಿ ಸಂಸದರಾಗಿ ಆಯ್ಕೆಯಾದರು. ಮತ್ತೆ 1991ರಲ್ಲಿ ನಡೆದ ಮರು ಚುನಾವಣೆಯಲ್ಲೂ ಜನತೆ ಗೌಡರನ್ನು ಸಂಸದರಾಗಿ ಆಯ್ಕೆ ಮಾಡಿದರು.

ಹೀಗೆ, ಮೂರು ದಶಕಗಳ ಕಾಲ ಜನ ಗೌಡರಿಗೆ ಮತ ನೀಡಿ ಗೆಲ್ಲಿಸಿದರು. ಪ್ರತಿಯಾಗಿ ಮಾದೇಗೌಡರು ತಮ್ಮ ಕ್ಷೇತ್ರದ ಜಿಲ್ಲೆಯ ಜನತೆಗೆ ಶಾಲೆ, ಕಾಲೇಜು, ಕಾರ್ಖಾನೆ, ಆಸ್ಪತ್ರೆ, ದೇವಸ್ಥಾನ ಹೀಗೆ ಹತ್ತು ಹಲವು ಸೇವೆಗಳನ್ನು ಒದಗಿಸಿದರು.

ಕೆ.ಎಂ.ದೊಡ್ಡಿಯ ಬೆಳಕು : 1962ರಲ್ಲಿ ಕೆ.ಎಂ. ದೊಡ್ಡಿಯಲ್ಲಿ ಕಾಲೇಜಿರಲಿ, ಒಂದು ಪ್ರೌಢಶಾಲೆಯೂ ಇರಲಿಲ್ಲ. ಬೃಹತ್ ಕಾರ್ಖಾನೆಯ ಮಾತಿರಲಿ, ಒಂದು ಒಳ್ಳೆಯ ರಸ್ತೆಯೂ ಇರಲಿಲ್ಲ. ಆದರೆ, ಮಾದೇಗೌಡರ ಕೃಪಾಕ ಟಾಕ್ಷದಿಂದ ಇಂದು ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಭಾರತೀ ವಿದ್ಯಾ ಸಂಸ್ಥೆ, ನಾಲ್ಕು ಬ್ಯಾಂಕ್‌ಗಳು, ವಿಶಾಲವಾದ ಜೋಡು ರಸ್ತೆ, ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು, ಹಳ್ಳಗಳಿಗೆ ಸೇತುವೆ ಸೇರಿದಂತೆ ಎಲ್ಲವೂ ಇಂದು ಕೆ.ಎಂ.ದೊಡ್ಡಿಯಲ್ಲಿ ಇವೆ.

ಸಾಹಿತ್ಯ ಸಮ್ಮೇಳನ : ಜಿ. ಮಾದೇಗೌಡರು 1993ರಲ್ಲಿ ಸಂಸದರಾಗಿದ್ದರು. ಪ್ರೊ. ಜಿ.ಟಿ. ವೀರಪ್ಪ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಶ್ರೀ ಚದುರಂಗ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಎಲ್ಲವು ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದ ಯಶಸ್ಸಿನ ಹಿಂದಿನ ರೂವಾರಿಗಳಲ್ಲಿ ಮಾದೇಗೌಡರೂ ಒಬ್ಬರು.

ಕಾವೇರಿ ಪುತ್ರ : ಕಾವೇರಿ ನದಿ ಮಂಡ್ಯ ಜಿಲ್ಲೆಯ ಉಸಿರು. ಜಿಲ್ಲೆಯ ಬಹುಭಾಗ ಹಸಿರಾಗಿರುವುದೇ ಕಾವೇರಿಯ ಕೃಪೆಯಿಂದ. ಆದರೆ, ಸುಪ್ರೀಂಕೋರ್ಟ್‌ನ ತೀರ್ಮಾನದಿಂದ ಕಾವೇರಿ ನೀರು ಮಂಡ್ಯ ಜನತೆಗೆ ತಪ್ಪಿ ಹೋಗುವ ಸಾಧ್ಯತೆಯ ಸುಳಿವು ದೊರೆತೊಡನೆ, ಜಿಲ್ಲೆಯ ರೈತರು ಆಕ್ರೋಶಗೊಂಡಿದ್ದರು.

ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯದ ರೈತರು ಬೀದಿಗೆ ಇಳಿದಿದ್ದರು. ಈ ವೇಳೆ ತಮ್ಮ ಹೋರಾಟಕ್ಕೆ ರೈತರು ನಾಯಕರಾಗಿ ಆಯ್ಕೆ ಮಾಡಿಕೊಂಡಿದ್ದು ಜಿ. ಮಾದೇಗೌಡರನ್ನು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾದೇಗೌಡರು, ಕಾವೇರಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುವ, ಸರ್ವಪಕ್ಷಗಳ ನಾಯಕರನ್ನು ಕಾವೇರಿ ಹೋರಾಟಕ್ಕೆ ಒಂದುಗೂಡಿಸುವ ಗುರುತರ ಜವಾಬ್ದಾರಿ ಹೊತ್ತಿದ್ದರು. ಮಂಡ್ಯ, ಮೈಸೂರು, ಚಾಮರಾಜನಗರದ ರೈತಾಪಿ ವರ್ಗಕ್ಕೆ ಮಾದೇಗೌಡರು ಏಕಮಾತ್ರ ಆಶಾಕಿರಣವಾಗಿದ್ದರು.

ಮಾದೇಗೌಡರ ಮಾರ್ಗದರ್ಶನದಲ್ಲಿ 55 ದಿನಗಳ ಕಾಲ ರೈತರು ಪ್ರಚಂಡ ಅಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ತಮ್ಮ ಇಳಿವಯಸ್ಸಿನಲ್ಲೂ ಕಾವೇರಿ ಸೇನೆ ಕಟ್ಟಿ, ಭೀಷ್ಮರಂತೆ ಅದರ ಸಾರಥ್ಯ ವಹಿಸಿ, ಪ್ರಾಮಾಣಿಕವಾಗಿ ರೈತರ ಹಿತ ಕಾಪಾಡಿದ ಗೌಡರನ್ನು ಜನ ಪ್ರೀತಿಯಿಂದ ಕಾವೇರಿ ಪುತ್ರ ಎಂದು ಕರೆದರು.

ರೈತರಿಗಾಗಿ ಜೈಲಿಗೆ ಹೋಗುವೆ : ಮಾದೇಗೌಡರ ನೇತೃತ್ವದಲ್ಲಿ ಜಿಲ್ಲೆಯ ರೈತರು ಸ್ವಯಂ ಸ್ಫೂರ್ತಿಯಿಂದ ಬೀದಿಗಿಳಿದಾಗ ಕಾಂಗ್ರೆಸ್ ಪಕ್ಷ ದಿಕ್ಕೆಟ್ಟು ಹೋಯಿತು. ಒಂದು ಕಡೆ ಸುಪ್ರೀಂಕೋರ್ಟ್ ತೀರ್ಮಾನ, ಇನ್ನೊಂದು ಕಡೆ ರೈತರ ಉಗ್ರ ಹೋರಾಟ. ಈ ಮಧ್ಯೆ ಗೌಡರು ತಮ್ಮ ಪಕ್ಷದ ಮುಖಂಡರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷಕ್ಕೆ ಗೌಡರು ಬಿಸಿತುಪ್ಪವಾದರು. ಆವರು ಮಾತು ಪಕ್ಷಕ್ಕೆ ಕಹಿಯಾಗ ತೊಡಗಿತು.

ಅಂತಿಮವಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪಾದಯಾತ್ರೆ ಮೂಲಕ ಮಂಡ್ಯಕ್ಕೆ ಬಂದು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಮರುದಿನ ರಾತ್ರಿಯೇ ನೀರುಬಿಟ್ಟು ರೈತದ್ರೋಹಿ ಎಂಬ ಅಪಕೀರ್ತಿಗೆ ತುತ್ತಾದರು. ಇದರಿಂದ ಕೆಂಡಾಮಂಡಲರಾದ ಮಾದೇಗೌಡರು, ರೈತ ಮಿತ್ರರ ಜೊತೆ ಆಮರಣಾಂತ ಉಪವಾಸ ಕುಳಿತರು. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಗೆ ಬಂತು, ಅನೇಕರ ಬಂಧನವಾಯಿತು.

ಮಂಡ್ಯದ ರೈತರು ಇಲಿಮರಿಗಳಲ್ಲ, ಅವರು ಸಿಂಹದ ಮರಿಗಳು, ರೈತ ವಿರೋಧಿ ಸರ್ಕಾರವನ್ನು ಮಟ್ಟ ಹಾಕುತ್ತಾರೆ ಎಂದು ಗೌಡರು ಮತ್ತೊಮ್ಮೆ ಗುಡುಗಿದರು. ಗೌಡರ ಬಂಧನಕ್ಕೆ ಆಜ್ಞೆಯಾಯಿತು. ರೈತರಿಗಾಗಿ, ನೀರಿಗಾಗಿ ಜೈಲಿಗೆ ಹೋಗಲು ಗೌಡರು ಸಿದ್ಧರಾದರು. ಗೌಡರನ್ನು ಜಾಮೀನಿನ ಮೇಲೆ ಬಿಡಿಸಲು ಮಂಡ್ಯದ ವಕೀಲರು ಮುಂದೆ ಬಂದಾಗ, ನಾನು ರೈತರ ಜೊತೆ ಜೈಲಿನಲ್ಲೇ ಇರುತ್ತೇನೆ ಜಾಮೀನು ಬೇಡ ಎಂದು ಅದನ್ನು ನಿರಾಕರಿಸಿದರು. ಕೋರ್ಟ್​, ಜೈಲುಗಳು ಗೌಡರ ಜನಪರ ಹೋರಾಟವನ್ನು ಸ್ವಲ್ಪವೂ ಕುಗ್ಗಿಸಲಿಲ್ಲ.

ಜಿ. ಮಾದೇಗೌಡರು ಕೆ.ವಿ. ಶಂಕರಗೌಡರ ನಂತರ ಮಂಡ್ಯವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದವರು. ಮಂಡ್ಯ ಜಿಲ್ಲೆಯ ಮರೆಯಲಾಗದ ಮಹಾನುಭಾವರಲ್ಲಿ ಮಾದೇಗೌಡರು ಎದ್ದು ಕಾಣುವ ವ್ಯಕ್ತಿತ್ವ.

ಗೌರವ ಡಾಕ್ಟರೇಟ್ : ಜಿ.ಮಾದೇಗೌಡರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ಮೈಸೂರು ವಿಶ್ವಿವಿದ್ಯಾನಿಲಯವು 2012ರ ಜನವರಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.