ETV Bharat / state

ಮಂಡ್ಯ: ಆಸ್ತಿಗಾಗಿ ಪತ್ನಿಯನ್ನೇ ಕೊಲೆಗೈದ ಪತಿ, ಪೊಲೀಸರೆದುರು ಹೇಳಿದ್ದೇನು?

author img

By ETV Bharat Karnataka Team

Published : Nov 15, 2023, 4:55 PM IST

Updated : Nov 15, 2023, 6:52 PM IST

ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ನಡೆದಿದೆ.

husband-killed-his-wife-for-property-in-mandya
ಮಂಡ್ಯ: ಆಸ್ತಿಗಾಗಿ ಪತ್ನಿಯನ್ನೇ ಕೊಲೆಗೈದ ಪತಿ

ಎಸ್​ಪಿ ಯತೀಶ್​ ಪ್ರತಿಕ್ರಿಯೆ

ಮಂಡ್ಯ: ಪತ್ನಿ ಹೆಸರಿನಲ್ಲಿದ್ದ ಕೋಟ್ಯಂತರ ರೂ. ವೌಲ್ಯದ ಆಸ್ತಿಗಾಗಿ ಮಲಗಿದ್ದ ಸಮಯದಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಪತಿಯೇ ಹತ್ಯೆಗೈದಿರುವ ಘಟನೆ ನಗರದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಎಸ್. ಶೃತಿ (32) ಕೊಲೆಯಾದವರು. ಟಿ.ಎನ್. ಸೋಮಶೇಖರ್ (41) ಕೊಲೆ ಮಾಡಿದ ಪತಿ.

ಕೊಲೆಯಾದ ಎಸ್ ಶೃತಿ ಹೆಸರಿನಲ್ಲಿ ಮೈಸೂರಿನಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ ಇದ್ದು, ಈ ಆಸ್ತಿಯಲ್ಲಿ ಒಂದನ್ನು ಮಾರಾಟ ಮಾಡಲು ಅವರು ಪ್ರಯತ್ನಿಸುತ್ತಿದ್ದರು. ಇದನ್ನು ಒಪ್ಪದ ಪತಿ ಸೋಮಶೇಖರ್ ಎಲ್ಲಾ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ನ. 10ರಂದು ರಾತ್ರಿ ಮಲಗಿದ್ದ ಸಮಯದಲ್ಲಿ ದಿಂಬು ಮತ್ತು ಬೆಡ್‌ಶೀಟ್​ಅನ್ನು ಶೃತಿಯ ಮುಖದ ಮೇಲೆ ಬಿಗಿಯಾಗಿ ಅದುಮಿ, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಪೊಲೀಸರೆದರು ತಪ್ಪೊಪ್ಪಿಕೊಂಡಿದ್ದಾನೆ.

ಮೈಸೂರಿನ ಹೆಬ್ಬಾಳ ಬಡಾವಣೆಯ ಪಿ.ಷಣ್ಮುಖಸ್ವಾಮಿ ಮತ್ತು ರಾಜೇಶ್ವರಿ ಪುತ್ರಿ ಎಸ್. ಶೃತಿಯನ್ನು ಮಂಡ್ಯದ ವಿ.ವಿ. ನಗರದಲ್ಲಿರುವ ನಾಗರಾಜಪ್ಪ ಅವರ ಮಗ ಟಿ.ಎನ್. ಸೋಮಶೇಖರ್ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ವರ್ಷ ಇವರಿಬ್ಬರ ದಾಂಪತ್ಯ ಜೀವನ ಸುಖಕರವಾಗಿದ್ದು, ನಂತರದಲ್ಲಿ ಪತಿ ಸೋಮಶೇಖರ್ ಪತ್ನಿಗೆ ಕಿರುಕುಳ ಕೊಡುತ್ತಿದ್ದ ಎಂದು ಮೃತಳ ಚಿಕ್ಕಪ್ಪ ಪಿ. ಕುಮಾರಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಶೃತಿ ಹೆಸರಿನಲ್ಲಿ ಮೈಸೂರಿನ ವಿಜಯನಗರ 1ನೇ ಹಂತದಲ್ಲಿ ಮೂರಂತಸ್ತಿನ ಮನೆಯನ್ನು ಕಟ್ಟಿಸಿಕೊಡಲಾಗಿತ್ತು. ಆಕೆಯ ತಂದೆ ಷಣ್ಮುಖಸ್ವಾಮಿ, ತಾಯಿ ರಾಜೇಶ್ವರಿ ಅವರು ಕೇವಲ ಎರಡು ವರ್ಷದ ಅಂತರದಲ್ಲಿ ವಿಧಿವಶರಾದರು. 6 ತಿಂಗಳ ತರುವಾಯ ತಂಗಿ ಸುಶ್ಮಿತಾ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಎಲ್ಲಾ ಆಸ್ತಿಗಳನ್ನೂ ಶೃತಿ ಹೆಸರಿಗೆ ವರ್ಗಾಯಿಸಿಕೊಡಲಾಗಿತ್ತು. ಶೃತಿಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವಂತೆ ಸೋಮಶೇಖರ್ ಪೀಡಿಸುತ್ತಿದ್ದ. ಇದಕ್ಕೆ ಶೃತಿ ಒಪ್ಪಿರಲಿಲ್ಲ. ಶೃತಿ ತನ್ನ ಹೆಸರಿನಲ್ಲಿದ್ದ ಎಲ್ಲಾ ಚರ ಮತ್ತು ಸ್ಥಿರಾಸ್ಥಿಗಳನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಬಯಸಿದ್ದರು. ಆದರೆ ಇದನ್ನು ಪತಿ ಟಿ.ಎನ್. ಸೋಮಶೇಖರ್ ವಿರೋಧಿಸಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದನೆಂದು ದೂರಿನಲ್ಲಿ ವಿವರಿಸಿದ್ದಾರೆ.

ಶೃತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂ. ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಸೋಮಶೇಖರ್ ಪತ್ನಿಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವೆಂದು ಬಿಂಬಿಸಲು ಆರಂಭದಲ್ಲಿ ಪ್ರಯತ್ನಿಸಿದ್ದ. ಆದರೆ, ಶೃತಿ ಅವರ ಸಾವಿನ ಬಗ್ಗೆ ಸಂಬಂಧಿ ಪಿ. ಕುಮಾರಸ್ವಾಮಿ ಅವರು ಪತಿ ಟಿ.ಎನ್. ಸೋಮಶೇಖರ್, ಅತ್ತೆ ನೀಲಾಂಬಿಕೆ, ಅತ್ತಿಗೆ ಹೇಮಲತಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಶವ ಪರೀಕ್ಷೆ ನಡೆಸಿ ಆರೋಪಿ ಸೋಮಶೇಖರನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಶೃತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ್ದಕ್ಕೆ ದ್ವೇಷ; ವ್ಯಕ್ತಿಯನ್ನು ಹತ್ಯೆಗೈದು ಯುವಕ ಪರಾರಿ

Last Updated :Nov 15, 2023, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.