ETV Bharat / state

ಸಂಕಷ್ಟದಲ್ಲಿರುವ ರೈತ ಮಹಿಳೆಯರ ಬದುಕಿಗಾಸರೆ ಬೇವಿನ ಬೀಜ

author img

By

Published : Jun 7, 2020, 10:55 AM IST

ಲಾಕ್ ಡೌನ್​ನಿಂದಾಗಿ ಕೆಲಸವಿಲ್ಲದೆ, ಇತ್ತ ಕೃಷಿ ಮಾಡೋಣವೆಂದರೆ ಮಳೆಯೂ ಬಾರದೆ ಸಂಕಷ್ಟಕ್ಕೆ ಸಿಲುಕಿರುವ ಕುಷ್ಟಗಿ ತಾಲೂಕಿನ ರೈತ ಮಹಿಳೆಯರು ಸದ್ಯ ಜೀವನೋಪಾಯಕ್ಕಾಗಿ ಬೇವಿನ ಬೀಜ ಹೆಕ್ಕಿ ಮಾರಾಟ ಮಾಡುತ್ತಿದ್ದಾರೆ.

Farmer women's Selling Neem seed
ಬೇವಿನ ಬೀಜದಲ್ಲಿ ಬದುಕು ಕಂಡುಕೊಂಡ ಮಹಿಳೆಯರು

ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್​ಗೆ ಹೆದರಿ ಎಷ್ಟು ದಿನ ಮನೆಯಲ್ಲಿರಲು ಸಾಧ್ಯ?. ಜಮೀನಿನಲ್ಲಿ ದುಡಿಮೆ ಮಾಡಿ ಜೀವನ ನಡೆಸೋಣವೆಂದರೂ ಮಳೆ ಕೊರತೆಯಾಗಿದೆ. ಸರ್ಕಾರದ ಉದ್ಯೋಗ ಖಾತ್ರಿ ಕೆಲಸ ಸಿಕ್ಕವರಿಗೆ ಸಿಗುತ್ತಿದೆ, ಮಿಕ್ಕವರಿಗೆ ಸದ್ಯ ಬೇವಿನ ಬೀಜವೇ ಬದುಕಿನ ಆಸರೆಯಾಗಿದೆ.

ತಾಲೂಕಿನಾದ್ಯಂತ ರೈತ ಮಹಿಳೆಯರು ಹೊಲ, ಗದ್ದೆ ಸುತ್ತಾಡಿ ಗಾಳಿಗೆ ಬಿದ್ದಿರುವ ಬೇವಿನ ಬೀಜಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಒಂದು ಬುಟ್ಟಿ ಬೇವಿನ ಬೀಜಕ್ಕೆ 60 ರಿಂದ 70 ರೂ. ಸಿಗುತ್ತದೆ. ದಿನಕ್ಕೆ 2-3 ಬುಟ್ಟಿಯಷ್ಟು ಬೀಜ ಆಯ್ದು ಒಣಗಿಸಿ ಚೀಲದಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಶಾಲೆಗೆ ರಜೆಯಾದ್ದರಿಂದ ಮಹಿಳೆಯರೊಂದಿಗೆ ಮಕ್ಕಳು ಬೇವಿನ ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.

ಮಹಿಳೆಯರ ಬದುಕಿಗೆ ಆಸರೆಯಾದ ಬೇವಿನ ಬೀಜ

ಈ ಬಗ್ಗೆ ಮಾತನಾಡಿದ ಚಿಕ್ಕಗೊಣ್ಣಾಗರ ಗ್ರಾಮದ ಚನ್ನಮ್ಮ, ಮಳೆ ಸರಿಯಾಗಿ ಬಂದಿದ್ದರೆ ನಾವ್ಯಾಕೆ ಮುಳ್ಳಿನ ಕಂಟೆ, ಪೊದೆ ಇರುವ ಜಾಗದಲ್ಲಿ ಬೇವಿನ ಬೀಜ ಆಯುವ ಕೆಲಸ ಮಾಡುತ್ತಿದ್ದೆವು. ಹೊಲದಲ್ಲಿ ಚೆನ್ನಾಗಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ ಮಳೆ ದೇವ ನಮ್ಮ ಮೇಲೆ ಕರುಣೆ ತೋರುತ್ತಿಲ್ಲ, ನಾವು ಮತ್ತೇನು ಮಾಡಬೇಕು?. ನಮ್ಮ ಜೀವನ ನಾವೇ ನೋಡಿಕೊಳ್ಳಬೇಕು. ಯಾವ ಸರ್ಕಾರ ಬಂದರೂ ನಮ್ಮಂತವರ ನೋವು ಕಾಣಿಸಲ್ಲ. ಜನಿಸಿದ ಮೇಲೆ ಬದುಕು ಸಾಗಿಸಬೇಕಲ್ಲ. ಹಾಗಾಗಿ ಬೇವಿನ ಬೀಜದಿಂದ ಬಂದ ಅಷ್ಟಿಷ್ಟು ಆದಾಯದಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.