ETV Bharat / state

ಕೊರೊನಾ ಉಲ್ಭಣ ಹಿನ್ನೆಲೆ : ಈ ಬಾರಿ ಭಕ್ತರಿಗಿಲ್ಲ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳುವ ಅವಕಾಶ

author img

By

Published : Oct 13, 2020, 9:42 PM IST

Preparation for Kaveri Theerthodbhav
ಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗಿಲ್ಲ ಅವಕಾಶ

ಕೊರೊನಾ ಹಿನ್ನೆಲೆ ತಲಕಾವೇರಿಯಲ್ಲಿ ತೀರ್ಥೋದ್ಭವ ದರ್ಶನಕ್ಕೆ ಭಕ್ತರಿಗೆ ಕೊಡಗು ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ. ಸರಳವಾಗಿ ಈ ಬಾರಿಯ ಕಾರ್ಯಕ್ರಮ ನಡೆಯಲಿದೆ.

ಕೊಡಗು (ತಲಕಾವೇರಿ) : ನಾಡಿನ ಜೀವನದಿ, ಕೊಡಗಿನ ಕುಲದೇವಿ ಕಾವೇರಿಯು, ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ. ಆ ಕ್ಷಣಕ್ಕಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ, ಕಾವೇರಿಗೆ ತೀರ್ಥೋದ್ಭವ ವೀಕ್ಷಿಸಲು ಭಕ್ತರಿಗೆ ಅವಕಾಶ ನಿರಾಕರಿಸಲಾಗಿದೆ.

ಪ್ರತಿ ವರ್ಷ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣದಲ್ಲಿ ತೀರ್ಥ ರೂಪಿಣಿಯಾಗಿ ಕಾವೇರಿ ದರ್ಶನ ನೀಡುತ್ತಾಳೆ. ಈ ಬಾರಿಯೂ ಅಕ್ಟೋಬರ್ 17 ರಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ಕಾವೇರಿ ತೀರ್ಥ ರೂಪಿಣಿಯಾಗಲಿದ್ದಾಳೆ. ಆದರೆ, ಈ ಬಾರಿ ಕೊರೊನಾದಿಂದಾಗಿ ಕಾವೇರಿ ಮಾತೆಯನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ಸಿಗುವುದಿಲ್ಲ. ಜಿಲ್ಲಾಡಳಿತ ಅರ್ಚಕರು, ದೇವಾಲಯ ಸಮಿತಿ ಮುಖಂಡರು ಮತ್ತು ಸ್ವಯಂ ಸೇವಕರನ್ನು ಹೊರತುಪಡಿಸಿ ಉಳಿದ ಯಾರಿಗೂ ತೀರ್ಥೋದ್ಭವ ವೇಳೆ ತಲ ಕಾವೇರಿಗೆ ಪ್ರವೇಶವಿಲ್ಲ. ಅವಕಾಶ ನೀಡಲಾದ ವ್ಯಕ್ತಿಗಳು 72 ಗಂಟೆಯೊಳಗೆ ಕೋವಿಡ್ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿ ತಂದರೆ ಮಾತ್ರ ತೀರ್ಥೋದ್ಭವದ ವೇಳೆ ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದೆ.

ಕಾವೇರಿ ತೀರ್ಥರೂಪಿಣಿಯಾಗುತ್ತಿದ್ದಂತೆ, ತಲಕಾವೇರಿಯಲ್ಲಿ ನೆರೆದಿರುತ್ತಿದ್ದ ಸಾವಿರಾರು ಭಕ್ತರು ಕೊಳದಲ್ಲಿ ಸ್ನಾನ ಮಾಡುತ್ತಿದ್ದರು. ಪಾಪ ತೊಳೆದುಕೊಂಡಿವೆ ಎಂದು ತೀರ್ಥ ಪಡೆದು ಪುನೀತರಾಗುತ್ತಿದ್ದರು. ಈ ಬಾರಿ ತೀರ್ಥ ಸ್ನಾನಕ್ಕೂ ಅವಕಾಶ ನಿರ್ಬಂಧಿಸಲಾಗಿದೆ. ತೀರ್ಥೋದ್ಭವದ ನಂತರ, ಅಂದರೆ ಬೆಳಗ್ಗೆ 8 ಗಂಟೆಗೆ ಬಳಿಕ ಭಕ್ತರು ಎಂದಿನಂತೆ ತಲಕಾವೇರಿಗೆ ಭೇಟಿ ನೀಡಿ ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಹೊರ ಜಿಲ್ಲೆಯಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಪ್ರತೀ ವರ್ಷ ತೀರ್ಥೋದ್ಭವಕ್ಕೆ ಬರುತ್ತಿದ್ದ ಭಕ್ತರಿಗೆ ಕೊಡಗು ಏಕೀಕರಣ ರಂಗ ಮತ್ತು ಮಂಡ್ಯದ ರೈತರು ಅನ್ನದಾನ ನಡೆಸುತ್ತಿದ್ದರು, ಈ ಭಾರಿ ಅದಕ್ಕೂ ಅವಕಾಶವಿಲ್ಲ. ಅಷ್ಟೇ ಅಲ್ಲ, ತೀರ್ಥೋದ್ಭವದ ವೇಳೆ ನೂರಾರು ಭಕ್ತರು ಕೊಳದ ಬಳಿ ಕುಳಿತು ಭಜಿಸುತ್ತಿದ್ದರು. ಅದಕ್ಕೂ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.