ETV Bharat / state

ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ; ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜನೆ

author img

By ETV Bharat Karnataka Team

Published : Nov 5, 2023, 6:17 PM IST

ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ
ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ

ಕೊಡಗಿನಲ್ಲಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ವಿವಾಹಿತ ಮಹಿಳೆಯರ ಕ್ರಿಕೆಟ್​ ಪಂದ್ಯದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.

ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ

ಕೊಡಗು : ಇಷ್ಟು ದಿನ ಜಿಲ್ಲೆಯಲ್ಲಿ ಪುರುಷರ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿತ್ತು. ಆದ್ರೆ ಈಗ ವಿವಾಹಿತರ ಮಹಿಳೆಯರ ಕ್ರಿಕೆಟ್ ಪಂದ್ಯಗಳು ಆರಂಭವಾಗಿವೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ಗ್ರಾಮದಲ್ಲಿ ವಿವಾಹಿತ ಕ್ರಿಕೆಟ್​ ಪಂದ್ಯಾವಳಿ ಅದ್ಧೂರಿಯಾಗಿ ನಡೆಯಿತು. ಜಿಲ್ಲಾ ಮಟ್ಟದಲ್ಲಿ ನಡೆದ ಪಂದ್ಯದಲ್ಲಿ ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.

ಟೀಂ ಮಾಲ್ದಾರೆ ತಂಡ ಪ್ರಥಮ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದವರು ದ್ವಿತೀಯ ಸ್ಥಾನ ಪಡೆದರು. ಕೌಟುಂಬಿಕ ಜಂಜಾಟ, ನಿತ್ಯದ ಕೆಲಸ ಕಾರ್ಯವನ್ನೆಲ್ಲ ಬದಿಗೊತ್ತಿ ಕ್ರಿಕೆಟ್​ ಸಮವಸ್ತ್ರ ಧರಿಸಿದ್ದ ಮಹಿಳೆಯರು ತಾವೇನು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ‌ ಕ್ರಿಕೆಟ್​ ಬ್ಯಾಟ್ ಹಿಡಿದು ಸಿಕ್ಸ್, ಫೋರ್ ಬಾರಿಸಿ ಸಂಭ್ರಮಿಸುತ್ತಿದ್ದರೆ, ಮಹಿಳೆಯರು ತಯಾರಿಸಿದ ವಿವಿಧ ಬಗೆಯ‌‌ ಖಾದ್ಯಗಳ ಸ್ಟಾಲ್​ಗಳು, ಚಿಯರ್ ಗರ್ಲ್ಸ್ ತಂಡದ ಮನಮೋಹಕ‌ ನೃತ್ಯದ ದೃಶ್ಯ ಚೆಟ್ಟಳ್ಳಿ ಪ್ರೌಢಶಾಲಾ‌ ಮೈದಾನದಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಚೆಟ್ಟಳ್ಳಿಯ ಅವರ್ ಕ್ಲಬ್ (Our club) ವತಿಯಿಂದ 2ನೇ ವರ್ಷ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಕ್ರಿಕೆಟ್​ ಪಂದ್ಯಾಟ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಮೂಲಕ ಮೈದಾನದಲ್ಲಿ ಮಹಿಳೆಯರ ಆಟ ಗಮನ ಸೆಳೆಯಿತು.
6 ಓವರ್​ಗಳ ಪಂದ್ಯಾವಳಿಯಲ್ಲಿ 25 ವರ್ಷ ಮೇಲ್ಪಟ್ಟ ಒಟ್ಟು 15 ವಿವಾಹಿತ ಮಹಿಳಾ ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಪ್ರವೇಶ ಪಡೆದ ಟೀಂ ಮಾಲ್ದಾರೆ ಹಾಗೂ ಟೀಂ ಮಾಸ್ಟರ್ ಬ್ಲಾಸ್ಟರ್ ಗೆಲುವನ್ನು ಸಾಧಿಸುವ ಮೂಲಕ ಅಂತಿಮ‌ಹಂತಕ್ಕೆ ಪ್ರವೇಶಿಸಿದ್ದವು.

ಫೈನಲ್ ಹಂತದಲ್ಲಿ ಟಾಸ್ ಗೆದ್ದಂತ ಮಾಸ್ಟರ್ ಬ್ಲಾಸ್ಟ್ ತಂಡ ಬ್ಯಾಟಿಂಗ್​ ಅನ್ನು ಆಯ್ಕೆ ಮಾಡಿ, ನಿಗದಿತ ನಾಲ್ಕು ಓವರ್​ಗಳಿಗೆ 23ರ ಗುರಿಯನ್ನು ನೀಡಿತ್ತು. ಈ ಅಲ್ಪಮೊತ್ತದ ಗುರಿಯನ್ನು ಬೆನ್ನತ್ತಿದ ಮಾಲ್ದಾರೆ ತಂಡ 2.3 ಎಸೆತಗಳಲ್ಲಿ ಗೆದ್ದು ಬೀಗಿತು. ಮೂರನೇ ಬಹುಮಾನಕ್ಕೆ ಸಂಭ್ರಮ ತಂಡದೊಂದಿಗೆ ಸೆಣಸಾಡಿದ ನೀಲಿ ಆಟ್ ಟೀ. ಕೋಕೇರಿ ತಂಡ ಮೂರನೇ ಬಹುಮಾನ ಪಡೆಯಿತು.

ಮೊದಲನೆಯದಾಗಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ ಎಂ‌ ಕಾರ್ಯಪ್ಪ‌ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಂಡೆಪಂಡ ಡಾ. ಪುಪ್ಪ‌ಕುಟ್ಟಣ್ಣ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಸಮಾಜದಲ್ಲಿ ಬಹುಮುಖ ಪಾತ್ರವನ್ನು ವಹಿಸುತ್ತಿರುವ ಮಹಿಳೆಯ ಪಾತ್ರ ಗೌರವಿಸುವಂತದ್ದು. ಕುಟುಂಬಗಳ ನಡುವೆ ಬದುಕು ಕಟ್ಟಿಕೊಳ್ಳುತ್ತಿರುವ, ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಕ್ರಿಕೆಟ್​ ಪಂದ್ಯಾಟವನ್ನು ಆಯೋಜಿಸಿದ ಚೆಟ್ಟಳ್ಳಿಯ ಅವರ್ ಕ್ಲಬ್ ಕಾರ್ಯವನ್ನು ಶ್ಲಾಘಿಸಬೇಕು. ಇಂತಹ ವಿವಾಹಿತ ಮಹಿಳೆಯರ ಕ್ರಿಕೆಟ್​ ಕ್ರೀಡೆಯನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದರು.

ಕ್ಲಬ್​ನ ಅಧ್ಯಕ್ಷೆ ಐಚೆಟ್ಟೀರ ಸುನಿತ‌ ಮಾಚಯ್ಯ‌ ಮಾತನಾಡಿ, ಮಹಿಳೆಯರನ್ನು ಒಟ್ಟು ಸೇರಿಸಿ 2010ರಲ್ಲಿ ಚೆಟ್ಟಳ್ಳಿಯಲ್ಲಿ ಅವರ್ ಕ್ಲಬ್​​ ಅನ್ನು ಆಯೋಜಿಸಲಾಗಿದೆ. ತಿಂಗಳಿಗೊಮ್ಮೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಳೆದ ಬಾರಿ ಮೊದಲ ವರ್ಷದ ಮಹಿಳಾ ಕ್ರಿಕೆಟ್​ ಪಂದ್ಯಾವಳಿಯನ್ನು ನಡೆಸಲಾಗಿದ್ದು, ಉತ್ತಮ ಸ್ಪಂದನೆ ದೊರೆತ ಹಿನ್ನೆಲೆ ಈ ಬಾರಿ ಎರಡನೇ ವರ್ಷದ ವಿವಾಹಿತ ಮಹಿಳಾ ಕ್ರಿಕೆಟ್​ ಪಂದ್ಯಾವಳಿ ನಡೆಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಉಪಾಧ್ಯಕ್ಷೆ ಮುಳ್ಳಂಡ ಶೋಭಾಚಂಗಪ್ಪ, ಕಾರ್ಯದರ್ಶಿ ಮನೆಪಂಡ ಅಂಜಲಿ, ಖಜಾಂಜಿ ಮುಳ್ಳಂಡ ಮಾಯಮ್ಮ ತಮ್ಮಯ್ಯ, ಮಾಜಿ ಅಧ್ಯಕ್ಷರಾದ ಕೊಂಗೇಟಿರ ದೇಚು‌ಮುದ್ದಯ್ಯ ವೇದಿಕೆಯಲ್ಲಿದ್ದರು. ಮೂಡೆರ ಧರಣಿ ಪ್ರಾರ್ಥಿಸಿ ಕೊಂಗಂಡವಿಜಯ ಮುತ್ತಣ್ಣ ಅತಿಥಿಗಳ ಪರಿಚಯಿಸಿದರು. ಕೊಂಗೇಟಿರ ವೀಣಾ ಅಪ್ಪಣ್ಣ ವಂದಿಸಿದರು. ಕೇಟೋಟಿರ ವೀಣಾ ಚಂಗಪ್ಪ ನಿರೂಪಿಸಿದರು.

ಸಮಾರೋಪ : ಅವರ್ ಕ್ಲಬ್​ನ ಅಧ್ಯಕ್ಷೆ ಸುನಿತಾ ಮಾಚಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಡೆಪಂಡ ಡಾ. ಪುಪ್ಪ‌ಕುಟ್ಟಣ್ಣ ವೇದಿಕೆಯಲ್ಲಿದ್ದರು. ಟೀಂ ಮಾಲ್ದಾರೆ ತಂಡ ಪ್ರಥಮ ಬಹುಮಾನ 21 ಸಾವಿರ ನಗದು ಹಾಗು ಟ್ರೋಫಿ ಪಡೆದರೆ, ಮಾಸ್ಟರ್ ಬ್ಲಾಸ್ಟರ್ ತಂಡ ದ್ವಿತೀಯ ಸ್ಥಾನ ಪಡೆದು 11 ಸಾವಿರ ನಗದು ಹಾಗೂ ಟ್ರೋಫಿ ಮುಡಿಗೇರಿಸಿಕೊಂಡರು.

ನೀಲಿ ಆಟ್ ಟೀ. ಕೋಕೇರಿ ಮಹಿಳಾತಂಡ ಮೂರನೇ ಬಹುಮಾನ ಪಡೆದು 6 ಸಾವಿರ ನಗದು ಹಾಗು ಟ್ರೋಫಿ ಪಡೆದರು. ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಬೆಸ್ಟ್ ಬಾಲರ್, ಟೀಂ ಮಾಲ್ದಾರೆ ತಂಡದ ಸುಜಿತಾ ಬೆಸ್ಟ್ ಬ್ಯಾಟರ್ ಹಾಗೂ ಟೀಂ ಸಂಭ್ರಮಾ ತಂಡದ ಅಂಜನಾ ಅತ್ಯದಿಕ ರನ್ ಬಹುಮಾನ ಪಡೆದರು. ಅತ್ಯುತಮ ವಿಕೆಟ್ ಕೀಪರ್ ಟೀಂ ಸಂಭ್ರಮಾ ತಂಡದ ನಿಶಾ, ಟೀಂ ಸಂಭ್ರಮದ ಲೀಲಾವೇಣು, ಹಿರಿಯ ಆಟಗಾರ್ತಿ ಬಹುಮಾನ‌ ಪಡೆದರು. ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗೂ ಚೆಟ್ಟಳ್ಳಿಯ ಅವರ್ ಕ್ಲಬ್ ತಂಡಕ್ಕೆ ಚಿಯರ್ ಗಲ್ರ್ಸ್​ ಬಹುಮಾನ ನೀಡಲಾಯಿತು.

ಇದನ್ನೂ ಓದಿ : ಪೂರ್ವಜರಿಂದ ಬಂದಿರುವ ಬೇಟೆಯಾಡಿದ ಪ್ರಾಣಿಗಳ ಉತ್ಪನ್ನ ಬಳಕೆ ಅಪರಾಧವಲ್ಲ: ಸಿಎಂ ಸಲಹೆಗಾರ ಎ.ಎಸ್.​ಪೊನ್ನಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.